Advertisement

ಮೀಸಲಾತಿಗೆ ಸಂಗ್ರಾಮ : ಸರಕಾರಕ್ಕೆ ಗಡುವು ನೀಡಿದ ಪಂಚಮಸಾಲಿ ಸಮುದಾಯ

12:47 AM Feb 22, 2021 | Team Udayavani |

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷನೆ ಮಾಡುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ರಾಜಧಾನಿಯಲ್ಲಿ ಮಾ. 4ರ ವರೆಗೆ ಧರಣಿ ಸತ್ಯಾಗ್ರಹ, ಸರಕಾರ ಆಗಲೂ ಮೀಸಲಾತಿ ಘೋಷಿಸದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿರುವುದಾಗಿ ಪಂಚಮ ಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದ ಬೃಹತ್‌ ಸಮಾವೇಶದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲಹೆಯಂತೆ ಮೀಸಲಾತಿ ದೊರೆಯುವ ವರೆಗೆ ಹೋರಾಟ ನಡೆಸಲು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ನಿರ್ಧರಿಸಿದ್ದಾರೆ.

ಸಮಾವೇಶದ ನಡುವೆ ಸುರಿದ ಮಳೆಗೂ ಜಗ್ಗದೆ ನಾಯಕರು ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡುವ ಭರವಸೆ ನೀಡಿದರು. ಎರಡೂ ಪೀಠಗಳ ಸ್ವಾಮೀಜಿಗಳು ಒಂದಾಗಿ ಪಾದಯಾತ್ರೆ ಮಾಡಿದ್ದು, ಸರಕಾರಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸಿಎಂ ವಿರುದ್ಧ ವಾಗ್ಧಾಳಿ
ಸಮಾವೇಶದಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಭಾಷಣದ ಆರಂಭದಲ್ಲಿಯೇ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ನಡೆಸಿದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕಿದೆ. ಅದನ್ನು ಬಿಟ್ಟು ಕೇಂದ್ರದ ಕಡೆಗೆ ಬೆರಳು ತೋರಿಸುವ ನಾಟಕ ಬೇಡ. ಮಾ. 4ರಿಂದ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಸಿಎಂ ಸರಕಾರದ ನಿಲುವು ಸ್ಪಷ್ಪ ಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಸಚಿವರ ಜತೆ ಸಿಎಂ ಸಭೆ
ಸಮಾವೇಶ ಮುಕ್ತಾಯವಾಗಿ ಅರಮನೆ ಮೈದಾನದಿಂದ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಆರಂಭಿಸಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಸಚಿವರಾದ ಮುರುಗೇಶ್‌ ನಿರಾಣಿ, ಸಿ.ಸಿ. ಪಾಟೀಲ್‌, ಬಸವರಾಜ ಬೊಮ್ಮಾಯಿ ಅವರೊಂದಿಗೆ ತುರ್ತು ಸಭೆ ನಡೆಸಿದರು. ಧರಣಿ ಕೈಬಿಡುವಂತೆ ಮನವಿ ಮಾಡುವ ಕುರಿತು ಸೋಮವಾರ ಮಧ್ಯಾಹ್ನ ಸಚಿವರು ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ.

ನಿರಾಣಿ, ಸಿಸಿ ಪಾಟೀಲ್‌ ಭರವಸೆ
ಸರಕಾರದ ಪರವಾಗಿ ಸಚಿವರಾದ ಮುರುಗೇಶ್‌ ನಿರಾಣಿ ಮತ್ತು ಸಿ.ಸಿ. ಪಾಟೀಲ್‌ ಸಮಾವೇಶದಲ್ಲಿ ಪಾಲ್ಗೊಂಡರು. ರಾಜ್ಯ ಸರಕಾರ ಈಗಾಗಲೇ ಪಂಚಮಸಾಲಿ ಸಮುದಾಯದ ಮನವಿಗೆ ಸ್ಪಂದಿಸಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಯನ ನಡೆಸಿ ವರದಿ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಭರವಸೆ ಈಡೇರಿಸುತ್ತಾರೆ ಎಂದು ಸಚಿವರು ಜನರಿಗೆ ಭರವಸೆ ನೀಡುವ ಪ್ರಯತ್ನ ಮಾಡಿದರು.

ಬ್ಯಾರಿಕೇಡ್‌ ಕಿತ್ತೆಸೆದರು
ಕಾವೇರಿ ಜಂಕ್ಷನ್‌ನಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಪಾದಯಾತ್ರೆ ತಡೆದರು. ಆಕ್ರೋಶಗೊಂಡ ಹೋರಾಟಗಾರರು ಬ್ಯಾರಿಕೇಡ್‌ ತಳ್ಳಿ ವಿಧಾನಸೌಧದತ್ತ ತೆರಳಲು ಮುಂದಾದರು. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸ್ಥಳಕ್ಕೆ ಆಗಮಿಸಿ ಸ್ವಾಮೀಜಿಗಳ ಮನವೊಲಿಸಿ ಸ್ವಾತಂತ್ರ್ಯ ಉದ್ಯಾನದ ಕಡೆ ಕಳುಹಿಸುವಲ್ಲಿ ಯಶಸ್ವಿಯಾದರು. ಜತೆಗೆ ಪಾದಯಾತ್ರೆಯಲ್ಲೇ ಫ್ರೀಡಂ ಪಾರ್ಕ್‌ವರೆಗೆ ತೆರಳಿ ಭದ್ರತೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next