ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಶುಕ್ರವಾರವೂ (ಮೇ 06) ವಾಕ್ಸಮರ ಮುಂದುವರಿದಿದೆ.
ಇದನ್ನೂ ಓದಿ:ಒಂದೇ ಬೈಕ್ ನಲ್ಲಿ ಐವರು: ವಿಡಿಯೋ ವೈರಲ್; ಕ್ರಮಕ್ಕೆ ಮಂಗಳೂರು ಶಾಸಕರ ಆಗ್ರಹ
“ ರಾಹುಲ್ ಗಾಂಧಿ ಲೋಕಸಭೆಯಲ್ಲಿ ತೆಲಂಗಾಣದ ಸಮಸ್ಯೆ ಕುರಿತು ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಕಾಲ್ವಾಕುಂಟ್ಲಾ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
“ರಾಹುಲ್ ಗಾಂಧಿಯವರು ಇಂದು ತೆಲಂಗಾಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ತೆಲಂಗಾಣದ ಸಮಸ್ಯೆಗಳ ಬಗ್ಗೆ ಎಷ್ಟು ಬಾರಿ ಧ್ವನಿ ಎತ್ತಿದ್ದೀರಿ ಎಂದು ತಿಳಿಸಿ” ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಏಕರೂಪದ ಭತ್ತ ಸಂಗ್ರಹ ನೀತಿ, ನೀರಾವರಿ ಯೋಜನೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವುದು, ಶೈಕ್ಷಣಿಕ ಸಂಸ್ಥೆಗಳಲ್ಲಿನ ತಾರತಮ್ಯ ಧೋರಣೆಗೆ ಸಂಬಂಧಿಸಿದಂತೆ ಟಿಆರ್ ಎಸ್ ಪಕ್ಷ ಕೇಂದ್ರ ಸರ್ಕಾರದ ಜೊತೆ ಹೋರಾಟ ನಡೆಸುತ್ತಿದ್ದಾಗ ಕಾಂಗ್ರೆಸ್ ಪಕ್ಷ ಮೌನಕ್ಕೆ ಶರಣಾಗಿದ್ದೇಕೆ? ಎಂದು ಕವಿತಾ ಪ್ರಶ್ನಿಸಿರುವುದಾಗಿ ವರದಿ ವಿವರಿಸಿದೆ.
ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಿರುವ ಕವಿತಾ ಕಾಲ್ವಾಕುಂಟ್ಲಾ ಅಳುವ ಮಗು ಎಂಬುದಾಗಿ ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಟೀಕಿಸಿದ್ದಾರೆ.
“ಪಾರ್ಲಿಮೆಂಟ್ ಪ್ರೊಸೀಡಿಂಗ್ಸ್ ಅನ್ನು ಮರು ಪರಿಶೀಲಿಸುವಂತೆ ನಾನು ನಿಮಗೆ (ಕವಿತಾ) ಪ್ರಾಮಾಣಿಕವಾಗಿ ಸಲಹೆ ನೀಡುತ್ತೇನೆ. ನೀವು ಮಾಜಿ ಸಂಸದರಾಗಿದ್ದರಿಂದ ಗ್ರಂಥಾಲಯ ಪ್ರವೇಶಕ್ಕೆ ಅವಕಾಶವಿದೆ. ಅಂದು ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪ್ರತ್ಯೇಕ ತೆಲಂಗಾಣದ ಬಗ್ಗೆ ಹೋರಾಟ ನಡೆಸುತ್ತಿದ್ದಾಗ ನಿಮ್ಮ ತಂದೆಯಾಗಲಿ, ನೀವಾಗಲಿ ಎಲ್ಲಿದ್ದೀರಿ” ಎಂದು ಕಾಂಗ್ರೆಸ್ ಮುಖಂಡ, ನಿಜಾಮಾಬಾದ್ ಮಾಜಿ ಸಂಸದ ಮಧು ಯಾಶ್ಕಿ ತಿರುಗೇಟು ನೀಡಿದ್ದಾರೆ.