Advertisement

War memorial: ಪ್ರತೀ ಗ್ರಾ.ಪಂ.ನಲ್ಲಿ ಯೋಧರ ಸ್ಮಾರಕ; ಹಳ್ಳಿ ಮಣ್ಣು ದಿಲ್ಲಿಗೆ

11:58 PM Aug 09, 2023 | Team Udayavani |

ಕುಂದಾಪುರ: “ಮೇರಿ ಮಾಟಿ ಮೇರಾ ದೇಶ್‌’ (ನನ್ನ ಮಣ್ಣು ನನ್ನ ದೇಶ) ಅಭಿಯಾನ ಇಂದಿನಿಂದ (ಆ. 9) ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಉಡುಪಿ ಜಿಲ್ಲೆಯಲ್ಲಿ 1 ಸೇರಿ ರಾಜ್ಯದಲ್ಲಿ ಕೇಂದ್ರ ಗೃಹ ಇಲಾಖೆಯ ಪಟ್ಟಿಯನುಸಾರ 468 ಯೋಧರ ವಿಶೇಷ ಸ್ಮಾರಕ ನಿರ್ಮಾಣವಾಗಲಿವೆ.

Advertisement

ಪ್ರಧಾನಿ ನರೇಂದ್ರ ಮೋದಿ ಆಶಯದ ಈ ಅಭಿಯಾನದಡಿ ವೀರ ಯೋಧರನ್ನು ಸ್ಮರಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಹಳ್ಳಿಗಳಲ್ಲಿ ಅಭಿವೃದ್ಧಿಯಾದ ಅಮೃತ ಸರೋವರಗಳ ಬಳಿ ವೀರ ಯೋಧರ ಸ್ಮರಣಾರ್ಥ ಶಿಲಾಫಲಕ ಸ್ಥಾಪಿಸಲಾಗುವುದು. ಅಮೃತ ಸರೋವರ ಇಲ್ಲದಿದ್ದರೆ ಜಲಾಶಯ, ಪಂಚಾಯತ್‌ ಕಟ್ಟಡ, ಶಾಲಾ ಕಟ್ಟಡ ಬಳಿಯೂ ನಿರ್ಮಿಸಬಹುದು.

ಇದಲ್ಲದೇ ಎಲ್ಲ ಪಂಚಾಯತ್‌ಗಳಲ್ಲಿ ವೀರಯೋಧರು, ಸ್ವಾತಂತ್ರ್ಯ ಹೋರಾಟಗಾರರು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯವರು, ಹುತಾತ್ಮರಾದ ರಾಜ್ಯ ಪೊಲೀಸ್‌ ಸಿಬಂದಿಯ ಸ್ಮಾರಕ ಶಿಲಾಫಲಕ ಸ್ಥಾಪನೆಯಾಗಲಿದೆ. ಅದರಲ್ಲಿ ಪ್ರಧಾನಿ, ಮುಖ್ಯಮಂತ್ರಿಯ ಸಂದೇಶ ಇರಲಿದೆ.

ಮೃತ್ತಿಕೆ ಸಂಗ್ರಹ
ದೇಶದ ಪ್ರತೀ ಪಂಚಾಯತ್‌ನಿಂದ ಮಣ್ಣನ್ನು ಸಂಗ್ರಹಿಸಿ 7,500 ಕಲಶಗಳ ಮೂಲಕ “ಅಮೃತ ಕಲಶ ಯಾತ್ರೆ’ಯಲ್ಲಿ ಕೊಂಡೊಯ್ದು ದಿಲ್ಲಿಯಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಆ ಮಣ್ಣನ್ನು ಬಳಸಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, “ಏಕ ಭಾರತ ಶ್ರೇಷ್ಠ ಭಾರತ’ದ ಸಂಕೇತವಾಗಿ “ಅಮೃತ್‌ ಉದ್ಯಾನ’ (ಅಮೃತ್‌ ವಾಟಿಕಾ) ನಿರ್ಮಾಣವಾಗಲಿದೆ.

Advertisement

4 ಕಾರ್ಯಕ್ರಮ
ಪ್ರತೀ ಪಂಚಾಯತ್‌ನಲ್ಲಿ ಆ. 9ರಿಂದ 16ರ ವರೆಗೆ ಹಾಗೂ ಆ. 16ರಿಂದ 20ರ ವರೆಗೆ ತಾ.ಪಂ., ಪಟ್ಟಣ ಪಂ., ಪುರಸಭೆ, ನಗರಸಭೆಯವರು “ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕೈಗೊಳ್ಳಬೇಕು. ಆ. 25ರ ಒಳಗೆ ರಾಜ್ಯ ಮಟ್ಟದ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಆ. 30ರಂದು ದಿಲ್ಲಿಯಲ್ಲಿ ಸಮಾರೋಪ ನಡೆಯಲಿದೆ.

ಅಭಿಯಾನವು “ಪಂಚ ಪ್ರಾಣ ಪ್ರತಿಜ್ಞಾ”, “ವಸುಧಾ ವಂದನ್‌’ (ಭೂಮಿಗೆ ನಮಸ್ಕಾರ), “ವೀರೋಂಕಾ ವಂದನ್‌’ (ವೀರರಿಗೆ ವಂದನೆ), ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭದ್ರತಾ ಪಡೆಯ ವೀರಯೋಧರ ಸ್ಮರಣೆಯ “ಶಿಲಾಫಲಕ’ ಸ್ಥಾಪನೆಯನ್ನು ಒಳಗೊಂಡಿದೆ. ನಿವೃತ್ತ ಯೋಧರು, ಶೌರ್ಯ ಪ್ರದರ್ಶಿಸಿದ ಪೊಲೀ ಸರು, ಸೇವೆಯಲ್ಲಿದ್ದಾಗ ಮೃತಪಟ್ಟವರ ಕುಟುಂಬದವರನ್ನು ಗೌರವಿಸಲಾಗುತ್ತದೆ.

ಪ್ರತೀ ಪಂಚಾಯತ್‌ ಸೂಕ್ತವೆನಿಸಿದ 75 ಗಿಡ ನೆಟ್ಟು ಅಮೃತ ವಾಟಿಕಾ ನಿರ್ಮಿಸಬೇಕು. ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡು ಪಂಚ ಪ್ರಮಾಣ ವಚನ ಸ್ವೀಕರಿಸಿ ಫೋಟೋವನ್ನು ಕೇಂದ್ರ ಸರಕಾರದ ವೆಬ್‌ಸೈಟ್‌ https://merimaatimeradesh.gov.in/pledge ಗೆ ಸಲ್ಲಿಸಬಹುದು.

1971ರಲ್ಲಿ ವೀರಮರಣವನ್ನೈದ ಉಡುಪಿಯ ಮೇ| ಜಿ.ಬಿ. ಪಂಥ್‌ ರಸ್ತೆಯ ಕೆ.ಕೆ. ರಾವ್‌, ದ.ಕ. ಜಿಲ್ಲೆಯ ಮಂಗಳೂರಿನ ಕಾರ್‌ಸ್ಟ್ರೀಟ್‌ನ ರಘು ಪೂಜಾರಿ (1966), ಬಂಟ್ವಾಳದ ಭಂಡಾರಿಬೆಟ್ಟಿನ ಹ| ಚಂದ್ರಶೇಖರ ಎ. (1987), ಸುಳ್ಯ ಅಜ್ಜಾವರದ ವಿಶ್ವಂಭರ ಎಚ್‌.ಪಿ. (1987), ಬಜಪೆಯ ಹ| ಓಸ್ವಾಲ್ಡ್‌ ನೊರೊನ್ಹಾ (1992), ಪುತ್ತೂರು ದರ್ಭೆಯ ಹ| ಪರಮೇಶ್ವರ ಕೆ. (2002), ಸುರತ್ಕಲ್‌ ಕೃಷ್ಣಾಪುರದ ಹ| ಗಿರೀಶ್‌ (2011), ಬೆಳ್ತಂಗಡಿ ಗುರುವಾಯನಕೆರೆಯ ಏಕನಾಥ ಕೆ. (2016) ಸೇರಿದ್ದಾರೆ.

ಈಗಾಗಲೇ ಕಾರ್ಯಕ್ರಮಗಳು ಆರಂಭಗೊಂಡಿದ್ದು, ದಿನಕ್ಕೆ ಪ್ರತೀ ತಾಲೂಕಿನ 3-4 ಪಂಚಾಯತ್‌ಗಳಿಗೆ ನಿಗದಿಪಡಿಸಲಾಗಿದೆ. ಪ್ರತೀ ಹಳ್ಳಿಯಿಂದ ಸಂಗ್ರಹಿಸಿದ ಮೃತ್ತಿಕೆಯನ್ನು ದಿಲ್ಲಿಗೆ ತಲುಪಿಸಲಾಗುವುದು.
– ಪ್ರಸನ್ನ ಎಚ್‌. ಸಿಇಒ, ಉಡುಪಿ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next