Advertisement

ಉಕ್ರೇನ್‌ -ನ್ಯಾಟೋ “ನೋ ಫ್ಲೈ ಜೋನ್‌’ಕದನ

10:42 PM Mar 05, 2022 | Team Udayavani |

ಕೀವ್‌: ಉಕ್ರೇನ್‌ನ ವಾಯು ಪ್ರದೇಶದ ವ್ಯಾಪ್ತಿಯಲ್ಲಿ ಹಾರಾಟ ನಿಷೇಧ (ನೋ ಫ್ಲೈ ಝೋನ್‌) ಜಾರಿ ಮಾಡದೇ ಇರುವ ನ್ಯಾಟೋ ನಿರ್ಧಾರಕ್ಕೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇಂಥ ನಿರ್ಧಾರ ಕೈಗೊಳ್ಳದೇ ಇರುವುದರಿಂದ ರಷ್ಯಾದ ವಿಮಾನಗಳಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಂಬ್‌ ದಾಳಿ ನಡೆಸಲು ಅನುಕೂಲ ಮಾಡಿಕೊಟ್ಟಂತಾಗಲಿದೆ ಎಂದಿದ್ದಾರೆ.

ವಿಡಿಯೋ ಮೂಲಕ ಮಾತನಾಡಿರುವ ಅವರು, ಹಾರಾಟ ನಿಷೇಧ ವಲಯ ಘೋಷಿಸದೇ ಇರುವುದು ಸರಿಯಾದ ಕ್ರಮವಲ್ಲ. ಇದರಿಂದಾಗಿ ದೇಶದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಬಾಂಬ್‌ ದಾಳಿ ನಡೆಸಲು ರಷ್ಯಾಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಆದರೆ, ನ್ಯಾಟೋ ರಾಷ್ಟ್ರಗಳು ಇಂಥ ನಿರ್ಧಾರದಿಂದ ರಷ್ಯಾಕ್ಕೆ ಮತ್ತಷ್ಟು ಅನುಕೂಲವಾಗಿ, ಸಂಘರ್ಷ ಇನ್ನಷ್ಟು ವಿಸ್ತಾರವಾಗಬಹುದು ಎನ್ನುವ ವಾದ ಮುಂದಿಟ್ಟಿವೆ. ಈ ಅಂಶವನ್ನು ಒಪ್ಪದ ಝೆಲೆನ್ಸ್ಕಿ, “ನಿಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ದೌರ್ಬಲ್ಯದ ಸೂಚಕ. ದಾಳಿ ಶುರುವಾದ ಮೊದಲ ದಿನದಿಂದ ಜನ ಅಸುನೀಗುತ್ತಿರುವುದೂ ನಿಮ್ಮ ದೌರ್ಬಲ್ಯದ ಕಾರಣದಿಂದಲೇ. ಏಕೆಂದರೆ, ನಿಮಗೇ ವಿಶ್ವಾಸವೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಝೇಪೊರ್‌ಝಿಯಾ ಅಣು ಸ್ಥಾವರದ ಮೇಲೆ ರಷ್ಯಾ ನಡೆಸಿದ ದಾಳಿ ಅಪಾಯಕಾರಿ. ಹೀಗಾಗಿ, ಉಕ್ರೇನ್‌ ಮೇಲೆ ಹಾರಾಟ ನಿಷೇಧ ಎಂದು ನ್ಯಾಟೋ ಘೋಷಿಸಬೇಕು. ಐರೋಪ್ಯ ಒಕ್ಕೂಟದ ರಾಷ್ಟ್ರಗಳ ನಾಗರಿಕರೆಲ್ಲ ಬೀದಿಗೆ ಇಳಿದು ಒತ್ತಾಯ ಮಾಡಬೇಕು. ಏಕೆಂದರೆ ವಿಕಿರಣಕ್ಕೆ ರಷ್ಯಾ ಗಡಿ ಎಲ್ಲಿದೆ ಎಂದು ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ ಝೆಲೆನ್ಸ್ಕಿ.

Advertisement

ಶುಕ್ರವಾರ ಮಾತನಾಡಿದ್ದ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೇನ್ಸ್‌ ಸ್ಟೋಲೆನ್‌ಬರ್ಗ್‌ ಹಾರಾಟ ನಿಷೇಧ ನಿರ್ಧಾರ ಜಾರಿ ಮಾಡಿದರೆ, ಸಂಪೂರ್ಣ ಐರೋಪ್ಯ ಒಕ್ಕೂಟ ಯುದ್ಧರಂಗವಾಗಿ ಮಾರ್ಪಾಡಾಗಲಿದೆ ಎಂದು ಹೇಳಿದ್ದರು.

ಏನಿದು ಹಾರಾಟ ನಿಷೇಧ ವಲಯ? (ನೋ ಫ್ಲೈ ಜೋನ್‌)
ಉಕ್ರೇನ್‌ನ ವಾಯು ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರುವ ಕ್ರಮವಿದು. 1991ರ ಕೊಲ್ಲಿ ಯುದ್ಧದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ಇರಾಕ್‌ನ ವಾಯುಪ್ರದೇಶದ ಕೆಲವು ಭಾಗಗಳ ಮೇಲೆ ಇಂಥ ನಿಷೇಧ ಹೇರಿದ್ದವು. 1993-95 ವರೆಗೆ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ನಡೆದಿದ್ದ ಆಂತರಿಕ ಸಂಘರ್ಷದ ವೇಳೆ, 2011ರ ಲಿಬಿಯಾ ಯುದ್ಧದ ವೇಳೆ ಕೂಡ ಇದೇ ನಿಯಮ ಹೇರಲಾಗಿತ್ತು.

ಉಕ್ರೇನ್‌ ಮೇಲೆ ನ್ಯಾಟೋ ಏಕೆ ಈ ಕ್ರಮ ಕೈಗೊಂಡಿಲ್ಲ?
– ಉಕ್ರೇನ್‌ ಅಥವಾ ರಷ್ಯಾ ನ್ಯಾಟೋದ ಸದಸ್ಯ ರಾಷ್ಟ್ರಗಳಲ್ಲ.
– ಹಾಲಿ ನಡೆಯುತ್ತಿರುವ ಯುದ್ಧದ ವ್ಯಾಪ್ತಿ ವಿಸ್ತಾರವಾಗುವ ಆತಂಕ. ಜತೆಗೆ ಅಣ್ವಸ್ತ್ರ ಪ್ರಯೋಗದ ಭೀತಿ.
– ರಷ್ಯಾ ವಿಮಾನಗಳನ್ನು ನ್ಯಾಟೋ ರಾಷ್ಟ್ರಗಳು ಹೊಡೆದು ಉರುಳಿಸಬೇಕಾದ ಅನಿವಾರ್ಯತೆ ಎದುರಾಗಿ, ಸಂಘರ್ಷ ತೀವ್ರವಾಗುವ ಸಾಧ್ಯತೆ
– ಯುದ್ಧ ವಿಮಾನಗಳ ಜತೆಗೆ ನ್ಯಾಟೋ ನೋ ಫ್ಲೈ ಜೋನ್‌ ಅನ್ನು ಸಕ್ರಿಯವಾಗಿರಿಸಲು ಇಂಧನ ಮರು ಪೂರೈಕೆ ಟ್ಯಾಂಕರ್‌, ಇಲೆಕ್ಟ್ರಾನಿಕ್‌ ಸರ್ವೆಲೆನ್ಸ್‌ ವಿಮಾನಗಳನ್ನು ಬಳಕೆ ಮಾಡಬೇಕು.

ಜಾರಿಯಾದರೆ ಅನುಕೂಲ ಏನು?
– ನಾಗರಿಕ ಪ್ರದೇಶಗಳ ಮೇಲೆ ಬಾಂಬ್‌ ದಾಳಿ ತಪ್ಪಲಿದೆ.
– ಪರಮಾಣು ಸ್ಥಾವರಗಳು ಅಪಾಯಕ್ಕೆ ಒಳಗಾಗುವ ಭೀತಿ ದೂರವಾಗಲಿದೆ
– ಗಡಿ ಮೂಲಕ ನಡೆಯುವ ದಾಳಿ ತಪ್ಪಬೇಕು ಎನ್ನುವುದು ಉಕ್ರೇನಿಗರ ಬೇಡಿಕೆ. ಆದರೆ, ಅದು ಈಡೇರುವುದು ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next