Advertisement

Waqf Property:ಜಂಟಿ ಸಂಸದೀಯ ಸಮಿತಿ ಕರ್ನಾಟಕದ ರೈತರ ಸಮಸ್ಯೆಗಳ ಆಲಿಸಲಿ: ತೇಜಸ್ವಿ ಸೂರ್ಯ

07:37 PM Oct 30, 2024 | Team Udayavani |

ಬೆಂಗಳೂರು: ವಿಜಯಪುರ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳ ರೈತರ ಜಮೀನುಗಳಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿರುವ ಕುರಿತು ವಕ್ಫ್ (ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಅಧ್ಯಕ್ಷ ಜಗದಾಂಬಿಕಾ ಪಾಲ್ ರೈತರ ಭೇಟಿಯಾಗಿ ಸಮಸ್ಯೆಗಳ ಆಲಿಸಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ವಿಜಯಪುರ ಮತ್ತು ರಾಜ್ಯದ ಇತರ ಜಿಲ್ಲೆಗಳ ರೈತರ ಜಮೀನುಗಳ ವಕ್ಫ್ ಆಸ್ತಿ ಎಂದು ನೋಟಿಸ್‌ ನೀಡಿರುವ ಕುರಿತು, ಜೆಪಿಸಿ ಚೇರ್ಮನ್‌  ಜಗದಾಂಬಿಕಾ ಪಾಲ್‌  ಅವರಿಗೆ ಪತ್ರ ಬರೆದಿದ್ದೇನೆ. ನೋಟಿಸ್‌ಗಳ ಹೊರತಾಗಿಯೂ ಹಲವರ  ಪಹಣಿ (ಆರ್ ಟಿ ಸಿ) ಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳ ಪಾಲಿಸದೇ ವಕ್ಫ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದ್ದು, ಈ ರೀತಿ ತೊಂದರೆಗೆ ಒಳಗಾಗಿರುವ ರೈತರ ನಿಯೋಗವನ್ನು ಭೇಟಿಯಾಗಿ ಅವರ ಸಮಸ್ಯೆಗಳ ಆಲಿಸಬೇಕು. ಇದರಿಂದ ವಕ್ಫ್‌ನಿಂದ ಆಗಿರುವ ಭೂಮಿ ಅತಿಕ್ರಮಣದ ನೇರ ಮಾಹಿತಿ ದೊರಕಲಿದೆ’ ಎಂದು ಮನವಿ ಮಾಡಿದ್ದಾರೆ.

ಜಂಟಿ ಸಂಸದೀಯ ಸಮಿತಿ ಸದಸ್ಯರೂ ಆದ  ಬೆಂಗಳೂರು ದಕ್ಷಿಣ ಸಂಸದ ಇತ್ತೀಚೆಗೆ ವಿಜಯಪುರ  ಜಿಲ್ಲೆ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳ ರೈತರ ನಿಯೋಗದೊಂದಿಗೆ  ಭೇಟಿಯಾಗಿದ್ದರು. ಸುಮಾರು ಒಂದು ಶತಮಾನದಿಂದ ತಮ್ಮ ಜಮೀನುಗಳನ್ನು ಸಾಗುವಳಿ ಮಾಡಿರುವ ಈ ರೈತರು 1920 ಮತ್ತು 1930 ರ ದಶಕದ ಹಿಂದಿನ ದಾಖಲೆಗಳ ಹೊಂದಿದ್ದಾರೆ. ಆದರೆ, ಇತ್ತೀಚಿನ ತಿಂಗಳಲ್ಲಿ, ಅವರಲ್ಲಿ ಅನೇಕರಿಗೆ ಯಾವುದೇ ಸಾಕ್ಷ್ಯ ಅಥವಾ ವಿವರಣೆಯಿಲ್ಲದೆ ತಮ್ಮ ಭೂಮಿ ವಕ್ಫ್ ಆಸ್ತಿ ಎಂದು ಘೋಷಿಸಿ ನೋಟಿಸ್ ನೀಡಲಾಗಿದೆ. ಸುಮಾರು 1,500 ಎಕರೆಗಳ ಅವರ ಹಳ್ಳಿಯಲ್ಲಿಯೇ ವಕ್ಫ್ ಆಸ್ತಿ ಎಂದು ಗೊತ್ತುಪಡಿಸಲಾಗಿದೆ ಎಂದು  ಪಾಲ್‌ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ರೈತರಿಗೆ ನೋಟಿಸ್‌ಗಳ ನೀಡಿದ್ದರ ಹೊರತಾಗಿ, ಕಾನೂನು ಪ್ರಕ್ರಿಯೆಗಳ ಅನುಸರಿಸದೆ ಕೆಲವು ಜಮೀನುಗಳ ಆರ್‌ಟಿಸಿ, ಪಹಣಿ ಮತ್ತು ಮ್ಯುಟೇಶನ್ ರಿಜಿಸ್ಟರ್‌ಗಳಲ್ಲಿ ಬದಲಾವಣೆಗಳ ಮಾಡಲಾಗಿದೆ. ಸಮಿತಿಯ ಮುಂದೆ ಸಾಕ್ಷಿಗಳಾಗಿ ಈ ರೈತರ ನಿಯೋಗವನ್ನು ಆಹ್ವಾನಿಸಲು ಮತ್ತು ಈ ಸಮಸ್ಯೆಯ ಪ್ರಮಾಣ ನೇರವಾಗಿ ಅರ್ಥಮಾಡಿಕೊಳ್ಳಲು ಮನವಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ವಿಚಾರಣೆಗಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮನವಿ ಮಾಡಲಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next