Advertisement

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

05:57 AM Nov 01, 2024 | Team Udayavani |

ಬೆಂಗಳೂರು: ರೈತರ ಜಮೀನುಗಳಿಗೆ ವಕ್ಫ್ ನೋಟಿಸ್‌ ನೀಡಿರುವುದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ವಕ್ಫ್ ಆಸ್ತಿ ವಿಚಾರವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.

Advertisement

ವಕ್ಫ್ ನೋಟಿಸ್‌ ನೀಡುವುದು ಹೊಸದೇನಲ್ಲ. ಹಿಂದಿನ ಸರಕಾರದ ಅವಧಿಯಲ್ಲೂ ನೀಡಲಾಗಿದೆ. ಆದರೆ ಬಿಜೆಪಿಯವರು ದೊಡ್ಡದಾಗಿ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ನಮೂದು ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರಕರಣ ಆಗಿರಬಹುದು. ಆದರೆ ಅವುಗಳನ್ನೆಲ್ಲ ಸರಿಪಡಿಸುತ್ತೇವೆ ಎಂದು ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್‌ ಬೊಮ್ಮಾಯಿ, ರಾಜ್ಯದಲ್ಲಿ ವಕ್ಫ್ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಅವಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್ ಆಸ್ತಿ ಅಂತ ಮಾಡಲು ಹೊರಟಿದ್ದಾರೆ. ಸರಕಾರ ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ವಕ್ಫ್ ಕಾನೂನು ದುರ್ಬಳಕೆ: ಬೊಮ್ಮಾಯಿ
ಹಾವೇರಿ: ರಾಜ್ಯದಲ್ಲಿ ವಕ್ಫ್  ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಅವಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್  ಆಸ್ತಿ ಅಂತಾ ಮಾಡಲು ಹೊರಟಿದ್ದಾರೆ. ಸರಕಾರ ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ಭೂಮಿ ವಿಚಾರದಲ್ಲಿ ಕಂದಾಯ ಕಾನೂನು ದಾಖಲೆಗಳೇ ಅಂತಿಮ. ಆದರೆ ಆ ಕಾನೂನನ್ನು ಅವಗಣಿಸಿ ಅದಾಲತ್‌ ಪ್ರಕಾರ ಆಗಿದ್ದೇ ಅಂತಿಮ ಎನ್ನುತ್ತಿದ್ದಾರೆ. ಹಿಂದೆ ಇಂತಹ ಪ್ರಕರಣ ಆದಾಗ ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೋ ಅವರಿಗೆಲ್ಲ ನ್ಯಾಯ ಸಿಕ್ಕಿದೆ. ಯಾರೋ ಒಬ್ಬರು ಅರ್ಜಿ ಹಾಕಿದರೆ ಇಡೀ ರಾಜ್ಯದ ರೈತರ ಆಸ್ತಿಗೆ ವಕ್ಫ್  ಆಸ್ತಿಯೆಂದು ನೋಟಿಸ್‌ ನೀಡುವ ಮೂಲಕ ಸರಕಾರದಿಂದ ಅರಾಜಕತೆ ಸೃಷ್ಟಿಸುವ, ಗಾಬರಿ ಉಂಟು ಮಾಡುವ ಕೆಲಸ ನಡೆದಿದೆ. ಇದೊಂದು ಬೇಜವಾಬ್ದಾರಿಯ ಸರಕಾರ ಎಂದರು.

Advertisement

ನ.14ರ ಬಳಿಕ ವಕ್ಫ್ ವಿಷಯ ಬಂದ್‌: ಪ್ರಿಯಾಂಕ್‌
ಕಲಬುರಗಿ: ವಕ್ಫ್ ನೋಟಿಸ್‌ ನೀಡುವುದು ಹೊಸದೇನಲ್ಲ. ಹಿಂದಿನ ಸರಕಾರದ ಅವಧಿಯಲ್ಲೂ ನೀಡಲಾಗಿದೆ. ಆದರೆ ಬಿಜೆಪಿಯವರು ದೊಡ್ಡದಾಗಿ ಮಾಡುತ್ತಿದ್ದಾರೆ. ಚುನಾವಣೆ ಮುಗಿದ ಅನಂತರ ಅಂದರೆ ನ. 14ರ ಅನಂತರ ಈ ವಿಷಯವೇ ಇರುವುದಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಯಾವಾಗ ವಕ್ಫ್ ಬೋರ್ಡ್‌ ಅದಾಲತ್‌ ನಡೆಯುತ್ತದೆಯೋ ಸಹಜವಾಗಿ ಆಸ್ತಿಗಗಳಲ್ಲಿ ಕ್ಲೇಮ್‌ ಇದ್ದೇ ಇರುತ್ತದೆ. ಹಿಂದಿನ ಬಿಜೆಪಿ ಸರಕಾರದ ಅವಧಿ ಯಲ್ಲಿ ವಕ್ಫ್  ಬೋರ್ಡ್‌ ಮುಚ್ಚಿ ಹೋಗಿತ್ತಾ? ಅವರು ಕ್ಲೇಮ್‌ ಮಾಡಿರಲಿಲ್ವಾ? ಈಗ ಏಕೆ ಗಲಾಟೆ ಆಗುತ್ತಿದೆ ಅಂದರೆ ಚುನಾವಣೆ ಇರುವ ಕಾರಣಕ್ಕೆ. ಹಿಂದಿನ ಬಿಜೆಪಿ ಸರಕಾರದ ಅವಧಿ ಯಲ್ಲಿ ಈ ರೀತಿಯ 85 ಕ್ಲೇಮ್‌ಗಳು ಬಂದಿದ್ದವು. ಆಗ ಬಿಜೆಪಿಯವರು ಇವನ್ನೆಲ್ಲ ಕೊಟ್ಟು ಬಿಟ್ಟಿದ್ದಾರೆಯೇ? ಸುಮ್ಮನೇ ಬಿಜೆಪಿಯವರು ಸತ್ಯ ಶೋಧನೆ ತಂಡ ರಚಿಸಿದ್ದಾರೆ. ಮೊದಲು ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ಮುಂದಾಗಲಿ ಎಂದರು.

ವಕ್ಫ್ಆ ಸ್ತಿಗೆ ಯಾವುದೇ ಹೊಸ ಸೇರ್ಪಡೆ ಇಲ್ಲ: ದರ್ಶನಾಪುರ
ಶಹಾಪುರ: ವಕ್ಫ್  ಮಂಡಳಿ ಆಸ್ತಿಗೆ ಯಾದಗಿರಿ ಸೇರಿ ರಾಜ್ಯಾದ್ಯಂತ ಯಾವುದೇ ಜಮೀನುಗಳು ಸೇರಿಲ್ಲ. ಈ ಕುರಿತು ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಕೆಲವೊಂದು ಜಮೀನು ಸೇರಿರುವ ಕುರಿತು ವರದಿಯಾಗಿದೆ. ಅವುಗಳು 2017-18ರಲ್ಲಿ ವಕ್ಫ್  ಮಂಡಳಿ ವ್ಯಾಪ್ತಿಗೆ ಸೇರಿದವುಗಳಾಗಿದ್ದು, ಪರಿಶೀಲನೆಗೆ ಸೂಚಿಸಿದ್ದೇನೆ ಎಂದು ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿ, ರೈತರು ಹೆದರಬೇಕಿಲ್ಲ. ಜಮೀನು ಒಬ್ಬರ ಹೆಸರಿಗೆ ಆಗಬೇಕೆಂದರೆ ಅದರ ಮೂಲ ಎಲ್ಲಿಂದ ಬಂತು ಎಂಬುದರ ಪರಿಶೀಲನೆ ನಡೆಸಬೇಕಿದೆ. ಅಲ್ಲದೆ ಈಗಾಗಲೇ ಮುಖ್ಯಮಂತ್ರಿಗಳು ರೈತರಿಗೆ ಅಭಯ ನೀಡಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ. ರೈತರ ಒಕ್ಕಲೆಬ್ಬಿಸುವ ಯಾವುದೇ ಹುನ್ನಾರವಿಲ್ಲ. ಬಿಜೆಪಿಯವರು ವಕ್ಫ್  ಮಂಡಳಿ ವಿರುದ್ಧ ಸುಖಾ ಸುಮ್ಮನೆ ಆರೋಪ ಮಾಡುವ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಭ್ರಮೆಯಲ್ಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next