Advertisement

Waqf Issue: ವಕ್ಫ್ ಕದನ: ರಾಜ್ಯಾದ್ಯಂತ ನ. 4ಕ್ಕೆ ಬಿಜೆಪಿಯಿಂದ ಹೋರಾಟ

02:49 AM Oct 31, 2024 | Team Udayavani |

ಬೆಂಗಳೂರು: ವಕ್ಫ್ ವಿವಾದ ಹಿನ್ನೆಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಆಗ್ರಹಿಸಿ ರಾಜ್ಯ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ಮುಂದಾಗಿದ್ದು, ನ. 4ರಂದು ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.

Advertisement

ಪಕ್ಷದ ಎಲ್ಲ ಹಾಲಿ, ಮಾಜಿ ಶಾಸಕರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನು ತತ್‌ಕ್ಷಣ ವಾಪಸ್‌ ಪಡೆಯಬೇಕು. ಯಾವುದೇ ರೈತರ ಭೂಮಿ ಕಬಳಿಸುವುದಕ್ಕೆ ಸರಕಾರ ಅವಕಾಶ ನೀಡಬಾರದು. ಈ ಹಿನ್ನೆಲೆಯಲ್ಲಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬೃಹತ್‌ ಹೋರಾಟ ನಡೆಸಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸರಕಾರದ ಈ ನಿರ್ಧಾರದ ವಿರುದ್ಧ ರೈತರು ಧ್ವನಿ ಎತ್ತಿದ್ದಾರೆ. ಹೀಗಾಗಿ ರೈತ ಸಮುದಾಯದ ಜತೆಗೆ ಬಿಜೆಪಿ ಗಟ್ಟಿಯಾಗಿ ನಿಲ್ಲಬೇಕಿದ್ದು, ಹೋರಾಟ ಯಶಸ್ವಿಯಾಗಿಸುವಂತೆ ಮನವಿ ಮಾಡಿದ್ದಾರೆ.

ಸಿಎಂ ನಿರ್ದೇಶನದ ಮೇರೆಗೆ ಆದೇಶ: ಬಿವೈವಿ
ಸಿಎಂ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ರೈತರ ಭೂಮಿಯನ್ನು ವಕ್ಫ್ ಆಸ್ತಿ ಎಂದು ವಶಪಡಿಸಿಕೊಳ್ಳುವ ವಿಜಯಪುರ ಜಿಲ್ಲಾಧಿಕಾರಿಗಳ ಸಭೆಯ ನಡಾವಳಿಯಲ್ಲಿ ಉಲ್ಲೇಖೀಸಲಾಗಿದೆ ಎಂಬ ದಾಖಲೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ “ಎಕ್ಸ್‌’ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ ಸರಕಾರ ಈವರೆಗಿನ ಆಡಳಿತದಲ್ಲಿ ಸಂಕಟಕ್ಕೆ ಒಳಗಾದ ರೈತರಿಗಾಗಿ ಯಾವುದೇ ಪರಿಹಾರವನ್ನೂ ನೀಡಲಿಲ್ಲ. ರೈತ ಕಲ್ಯಾಣಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೊರಟಿದೆ ಎಂದು ಆರೋಪಿಸಿದ್ದಾರೆ.

Advertisement

“ಬಿಜೆಪಿ ಅವಧಿಯಲ್ಲಿ ನಡೆದಿದ್ದರೂ ತಪ್ಪೇ. ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿ ನಮ್ಮ ಸರಕಾರದ ಅವಧಿಯಲ್ಲಿ ನೋಟಿಸ್‌ ನೀಡಿದ್ದರೂ ತಪ್ಪು. ಅಂದು ನೋಟಿಸ್‌ ನೀಡಿರುವ ಬಗ್ಗೆ ನಮ್ಮ ಸರಕಾರದ ಪ್ರಮುಖರ ಗಮನಕ್ಕೆ ಬಂದಿಲ್ಲ. ಗಮನಕ್ಕೆ ಬಂದಿದ್ದರೆ ವಕ್ಫ್ ಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೆವು.” – ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next