ದಾವಣಗೆರೆ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನ.9ರ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.9 ರಂದು ರಾಜ್ಯ ಸರ್ಕಾರ ಕೂಡಲೇ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂಬ ಆದೇಶ ಹೊರಡಿಸಿದೆ. ಆದರೆ, ಅದು ಈಗಾಗಲೇ ವಕ್ಫ್ ಆಸ್ತಿ ಎಂಬುದಾಗಿ ಸ್ವಾಧೀನ ಪಡಿಸಿಕೊಂಡಿದ್ದರೆ ಮತ್ತು ಆರ್ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರೆ ನ. 9 ರ ಆದೇಶ ಅನ್ವಯವಾಗುವುದೇ ಇಲ್ಲ ಎಂದು ತಿಳಿಸಿದರು.
ಮತಾಂಧರಂತೆ ವರ್ತಿಸುತ್ತಿರುವ ಸಚಿವ ಜಮೀರ್ ಅಹಮ್ಮದ್ ಈಗಾಗಲೇ ಎಲ್ಲ ಕಡೆ ವಕ್ಫ್ ಅದಾಲತ್ ನಡೆಸಿ ಅನೇಕರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗುವಂತೆ ನೋಡಿಕೊಂಡಿದ್ದಾರೆ. ಅಂತಹ ಆಸ್ತಿಗಳ ಬಗ್ಗೆ ರಾಜ್ಯ ಸರ್ಕಾರದ ನ.9ರ ಆದೇಶದಲ್ಲಿ ಯಾವುದೇ ಸ್ಪಷ್ಟನೆಯೇ ಇಲ್ಲ. ಇಂತಹ ಕಾರಣದಿಂದ ಈವರೆಗೆ ವಕ್ಫ್ ಆಸ್ತಿ ಶೇ. 3 ರಷ್ಟು ಹೆಚ್ಚಾಗಿದೆ. ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ನಂತರ ವಕ್ಫ್ ಅದಾಲತ್ ನಲ್ಲಿ ಹಾಜರಾಗಬೇಕು ಎಂಬುದು ಎಷ್ಟು ಸರಿ. ಹಾಗಾಗಿ ಕೂಡಲೇ ಪಹಣಿಯಲ್ಲಿ ವಕ್ಫ್ ಎಂಬುದಾಗಿ ನಮೂದು ಮಾಡಿರುವುದರ ಜೊತೆಗೆ ಎಲ್ಲ ನೋಟಿಸ್ ರದ್ಧುಪಡಿಸಬೇಕು ಎಂದು ಒತ್ತಾಯಿಸಿದರು.
ಹಾನಗಲ್ ತಾಲೂಕಿನ ಹರಣಗಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗಿದ್ದರಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿರುವುದಕ್ಕೆ ಮತ್ತು ಅದನ್ನು ವರದಿ ಮಾಡಿದ ಪತ್ರಿಕೆಗಳ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿಕೊಂಡಿದೆ. ಅಂತಹ ನಿರ್ಲಜ್ಜ, ಮತಿಗೆಟ್ಟ, ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರದ್ದು ಎಂತಹ ಅಹಂಕಾರ ಮತ್ತು ತುಷ್ಟೀಕರಣ. ನಾವು ಬಿಜೆಪಿಯವರು ಆ ಬಗ್ಗೆ ಮಾತನಾಡಿದರೆ ಒಡೆದು ಆಳುವ ನೀತಿ ಎನ್ನಲಾಗುತ್ತದೆ ಎಂದು ಹರಿಹಾಯ್ದರು.
ಈಗಾಗಲೇ ವಕ್ಫ್ ಆಸ್ತಿ ಹೆಸರಲ್ಲಿ ನಡೆಯುತ್ತಿರುವುದೇ ಅತಿಯಾಗಿದೆ. 2013ರ ವಕ್ಫ್ ಕಾನೂನಿನಂತೆ ಎಲ್ಲ ಆಸ್ತಿಗಳನ್ನು ವಕ್ಫ್ ಆಸ್ತಿಗಳು ಎಂದು ಮಾಡಿ, ಅದನ್ನು ಸಮುದಾಯವರು ಉಪಯೋಗಿಸಿದರೆ ಮುಂದಿನ ದಿನಗಳಲ್ಲಿ ಭಾರತಕ್ಕೂ ನಿಜಕ್ಕೂ ಗಂಭೀರವಾದ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗುತ್ತಿಗೆಯಲ್ಲೂ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮುಸ್ಲಿಂರಿಗೆ ಶೇ. 4 ರಷ್ಟು ಮೀಸಲಾತಿ ನೀಡಬೇಕು ಎಂಬುದು ಅಸಂವಿಧಾನಿಕ ಎಂದು ತಿಳಿಸಿದರು.