Advertisement

Waqf Fear: ವಿವಿಧೆಡೆ ಪಹಣಿಗೆ ರೈತರ ಸರತಿ

01:10 AM Oct 29, 2024 | Team Udayavani |

ಧಾರವಾಡ: ಮುಂಗಾರು ಬಳಿಕ ಹಿಂಗಾರು ಮಳೆ ಉಂಟುಮಾಡಿದ ಅವಾಂತರದಿಂದ ಸುಧಾರಿಸಿಕೊಳ್ಳುತ್ತಿರುವ ಉತ್ತರ ಕರ್ನಾಟಕದ ಅನ್ನದಾತರಿಗೆ ಈಗ ವಕ್ಫ್ ಬೋರ್ಡ್‌ನ ನೋಟಿಸ್‌ ಆತಂಕ ಎದುರಾಗಿದೆ. ಅನ್ನದಾತರೆಲ್ಲ ತಮ್ಮ ಹೊಲದ ಪಹಣಿ ಪತ್ರಿಕೆಗಳನ್ನು ಪರಿಶೀಲನೆ ಮಾಡಲು ಮುಗಿಬಿದ್ದಿದ್ದಾರೆ.

Advertisement

ವಿಜಯಪುರ ಜಿಲ್ಲೆಯಲ್ಲಿ 124ಕ್ಕೂ ಅಧಿಕ ರೈತರ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್‌ಗೆ ಸೇರಿರುವ ಆಸ್ತಿ ಎಂದು ನಮೂದಾಗಿರುವ ವಿಷಯ ತಿಳಿಯು ತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗಳ ಅನ್ನ ದಾತ ರಲ್ಲೂ ಆತಂಕ ಉಂಟಾಗಿದೆ. ಪಕ್ಕದ ಬೀದರ್‌ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ರೈತ ರಿಗೂ ನೋಟಿಸ್‌ ನೀಡಲಾಗಿತ್ತು.

ಈ ವಿಷಯ ಬಹಿರಂಗವಾಗುತ್ತಿದ್ದಂತೆ ಗ್ರಾಮ ಒನ್‌, ತಹಶೀಲ್ದಾರ್‌ ಕಚೇರಿ, ನೋಂದಣಿ ಕಚೇರಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ತಮ್ಮ ಪಹಣಿಯಲ್ಲೂ ಇದೇ ಅವಾಂತರವಾಗಿದೆಯೇ ಎಂದು ಪರಿ ಶೀಲಿಸುತ್ತಿದ್ದಾರೆ. ಬಾಗಲಕೋಟೆ, ಕಲಬುರಗಿ ಮತ್ತಿತರ ಅನೇಕ ಜಿಲ್ಲೆಗಳಲ್ಲೂ ಇಂತಹದೇ ಆತಂಕ ಸೃಷ್ಟಿಯಾಗಿದ್ದು ಅನ್ನ ದಾತರು ಕಂಗಾಲಾಗಿದ್ದಾರೆ. ಸಾಮಾನ್ಯ ವಾಗಿ ರೈತರಿಗೆ ಹೊಲವೇ ಆಸ್ತಿ. ಈಗ ಇದ್ದ ಕ್ಕಿದ್ದಂತೆ ಪಿತ್ರಾರ್ಜಿತ ಆಸ್ತಿಗಳು ಅನ್ಯಧರ್ಮ ದವರ ಪಾಲಾಗುತ್ತದೆ ಎನ್ನುವ ಆತಂಕ ಉತ್ತರ ಕರ್ನಾಟಕ ಭಾಗದ ರೈತರಲ್ಲಿ ಆರಂಭವಾಗಿದೆ.

ವಕ್ಫ್ ನಿಂದ ಹೊರಬರುವುದು ಹೇಗೆ?
ಈಗಾಗಲೇ ನೋಟಿಸ್‌ ಜಾರಿಯಾಗಿ ರುವ ಅಥವಾ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಪ್ರಕರಣಗಳಲ್ಲಿ ಅಮಾಯಕ ರೈತರು ಇದ್ದಾರೆ. ಕೆಲವಷ್ಟು ಅಧಿಕಾರಿಗಳ ತಪ್ಪಿನಿಂದಲೂ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದೆಲ್ಲದಕ್ಕೂ ಪರಿಹಾರವಾಗಿ ಒಟ್ಟು ಮೂರು ದಾರಿಗಳಿವೆ ಎನ್ನುತ್ತಿದ್ದಾರೆ ಕಂದಾಯ ಇಲಾಖೆಯ ಅಧಿಕಾರಿಗಳು. ಮೊದಲನೆಯದು, ಒಂದು ವೇಳೆ ರೈತರು ತಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅದರ ಅಧಿಕೃತ ದಾಖಲೆಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಎರಡನೆಯದಾಗಿ ಒಂದು ವೇಳೆ ವಕ್ಫ್ ಬೋರ್ಡ್‌ ಜತೆಗೆ ಕಾನೂನು ಹೋರಾಟ ಮಾಡಿ ಅದರಲ್ಲಿ ಗೆದ್ದಿದ್ದರೆ ಅದರ ದಾಖಲೆಗಳ ಸಮೇತ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು. ಮೂರನೆಯದಾಗಿ ಸ್ವತಃ ವಕ್ಫ್ ಬೋರ್ಡ್‌ ನಿಂದಲೇ ಇದು ನಮ್ಮ ಆಸ್ತಿಯಲ್ಲ ಎಂಬುದನ್ನು ಅಧಿಕೃತ ರುಜುವಾತು ಪತ್ರದೊಂದಿಗೆ ಹಾಜರು ಮಾಡಬೇಕು. ಆಗ ಮಾತ್ರ ಈ ವಕ್ಫ್ ಆತಂಕದಿಂದ ರೈತರು ಹೊರಗೆ ಬರಲು ಸಾಧ್ಯವಿದೆ.

ಪಹಣಿಯಲ್ಲಿ ಹೆಸರು ನಮೂದಾಗಿರುವುದು ಕೆಲವೇ ಪ್ರಕರಣಗಳಾದರೂ ಇನ್ನುಳಿದ ಎಲ್ಲ ರೈತರು ಒಂದು ವಾರದಿಂದ ಸಂಬಂಧಪಟ್ಟ ಗ್ರಾಮ ಒನ್‌, ತಹಶೀಲ್ದಾರ್‌ ಕಚೇರಿ, ನೋಂದಣಿ ಕಚೇರಿಗಳಲ್ಲಿ ಪ್ರತೀ ಪಹಣಿಗೆ 15 ರೂ. ನೀಡಿ ತಮ್ಮ ಹೊಲದ ಪಹಣಿ ಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

Advertisement

ಅನ್ನದಾತರಿಗೆ ಹೊಸ ಸಮಸ್ಯೆ
ಸರಕಾರದ ಆದೇಶ ಮತ್ತು ಜನರ ಆತಂಕ ಎರಡಕ್ಕೂ ಪರಿಹಾರವೇನೆಂದು ವಿಚಾರಿಸಿಯೇ ರೈತ ಸಂಘ ಪ್ರತಿಭಟನೆಗೆ ಸಜ್ಜಾಗುತ್ತಿದೆ. ಆದರೆ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಕಳಪೆ ಬೀಜ, ಬೆಂಬೆಲೆ ಸಿಗದಿರುವುದು, ಬೆಲೆ ಕುಸಿತದಂತಹ ಹತ್ತಾರು ಸಮಸ್ಯೆಗಳಲ್ಲಿ ಈಗಾಗಲೇ ಸಿಲುಕಿ ನರಳುತ್ತಿರುವ ಅನ್ನದಾತರಿಗೆ ಈಗ ಇಡೀ ಆಸ್ತಿಯೇ ಬೇರೆಯವರಿಗೆ ಹೋಗುತ್ತದೆ ಎನ್ನುವ ಇನ್ನೊಂದು ಸಮಸ್ಯೆ ಎದುರಾಗಿದ್ದು, ಸರಕಾರ ಕೂಡಲೇ ಇತ್ತ ಲಕ್ಷ್ಯ ಹರಿಸಿ ರೈತರ ಸಮಸ್ಯೆ ಪರಿಹರಿಸಬೇಕು ಎನ್ನುತ್ತಿದ್ದಾರೆ ರೈತ ಮುಖಂಡರು.

ಯಾವುದೋ ಕಾಲದ ದಾಖಲೆ ಇಟ್ಟುಕೊಂಡು ವಕ್ಫ್ ಬೋರ್ಡ್‌ ರೈತರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ಚಿತ್ರದುರ್ಗದಲ್ಲಿ ಸಭೆ ನಡೆಸಿ ಹೋರಾಟಕ್ಕೆ ನಿರ್ಣಯಿಸಲಾಗಿದೆ. ಸರಕಾರ ಎಚ್ಚೆತ್ತುಕೊಂಡು ಈ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯ.
– ನಾಗಪ್ಪ ಉಂಡಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಪುಟ್ಟಣ್ಣಯ್ಯ ಬಣ

ವಿಜಯಪುರ ಜಿಲ್ಲೆಗೆ ಇಂದು ಬಿಜೆಪಿ ತಂಡ
ವಿಜಯಪುರ: ವಕ್ಫ್ ಆಸ್ತಿ ವಿವಾದ ಕುರಿತು ರೈತರ ಅಹವಾಲು ಆಲಿಸಲು ಬಿಜೆಪಿ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ವಕ್ಫ್ ಗೆ  ರೈತರ ಒಂದಿಂಚು ಜಾಗವೂ ಬೇಡ: ಸರಕಾರ
ಬೆಂಗಳೂರು: ವಿವಾದ ಇತ್ಯರ್ಥ ಪಡಿಸುವ ಹೊಣೆಯನ್ನು ಸರಕಾರವು ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆಗೆ ಹೊರಿಸಿದೆ. ಅಲ್ಲದೆ ವಕ್ಫ್ ಮಂಡಳಿಗೆ ರೈತರ ಒಂದಿಂಚು ಜಾಗವೂ ಬೇಡ ಎಂದು ಸಚಿವರಾದ ಎಂ.ಬಿ. ಪಾಟೀಲ್‌, ಕೃಷ್ಣ ಬೈರೇಗೌಡ, ಜಮೀರ್‌ ಖಾನ್‌ ಸ್ಪಷ್ಟನೆ ನೀಡಿದ್ದಾರೆ.

ಬಸವರಾಜ್ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.