ಹೊಸದಿಲ್ಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರಿಂದ ವಿರೋಧದ ನಡುವೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ (ಆ. 8) ವಕ್ಫ್ ಬೋರ್ಡ್‌ಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು.
ಸಚಿವ ಕಿರಣ್ ರಿಜಿಜು ಅವರು ಸದನದಲ್ಲಿ ಮಾತನಾಡಿ ”ನಾವು ಎಲ್ಲಿಯೂ ಓಡಿಹೋಗುತ್ತಿಲ್ಲ. ಆದ್ದರಿಂದ, ಇದನ್ನು ಯಾವುದೇ ಸಮಿತಿಗೆ ಉಲ್ಲೇಖಿಸಬೇಕಾದರೆ, ನಾನು ನನ್ನ ಸರ್ಕಾರದ ಪರವಾಗಿ ಮಾತನಾಡಲು ಬಯಸುತ್ತೇನೆ. ವಿವರವಾದ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿ (JPC) ರಚಿಸಲಾಗುವುದು” ಎಂದು ಹೇಳಿದರು.
ವಿಪಕ್ಷಗಳು ಸರಕಾರದ ನಿರ್ಧಾರ “ಕಠಿನ” ಎಂದು ಕರೆದು ”ಧಾರ್ಮಿಕ ನೆಲೆಯಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ” ಎಂದು ಆಕ್ರೋಶ ಹೊರ ಹಾಕಿವೆ.
ಪ್ರತಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಸಚಿವ ರಿಜಿಜು ‘ವಕ್ಫ್ ಬೋರ್ಡ್ ಅನ್ನು ಮಾಫಿಯಾ ವಶಪಡಿಸಿಕೊಂಡಿದೆ ಮತ್ತು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ’ ಎಂದು ಹೇಳಿದರು.
”ಸಂಸತ್ ಸದಸ್ಯರನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ಸರಿಯಲ್ಲ. ಬೇರೆ ಬೇರೆ ಧರ್ಮದವರನ್ನು ವಕ್ಫ್ ಮಂಡಳಿಯ ಭಾಗವಾಗಿಸಬೇಕೆಂದು ನಾವು ಹೇಳುತ್ತಿಲ್ಲ. ಸಂಸದರು ವಕ್ಫ್ ಮಂಡಳಿ ಸದಸ್ಯರಾಗಿರಬೇಕು ಎಂದು ನಾವು ಹೇಳುತ್ತಿದ್ದೇವೆ. ಈಗ, ಸಂಸದರು ಹಿಂದೂ ಅಥವಾ ಕ್ರಿಶ್ಚಿಯನ್ ಆಗಿದ್ದರೆ, ಅದಕ್ಕೆ ನಾವು ಏನು ಮಾಡಬಹುದು? ಈಗ, ಒಬ್ಬ ಸಂಸದ/ಸಂಸದೆಯನ್ನು ವಕ್ಫ್ ಬೋರ್ಡ್‌ಗೆ ಸೇರಿಸಿದರೆ ನಾವು ಸಂಸದರ ಧರ್ಮವನ್ನು ಬದಲಾಯಿಸಬೇಕೇ?’ ಎಂದು ಕಿರಣ್ ರಿಜಿಜು ಪ್ರಶ್ನಿಸಿದರು.