Advertisement
ಸೇಡಂ ತಾಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯರಿಗೆ ಸೇರಿದ 5.24 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಕಂಡು ಗಾಬರಿಯಾದ ಭಕ್ತರು, ಆಕ್ರೋಶಗೊಂಡು ಹೋರಾಟಕ್ಕೆ ಮುಂದಾದರು. ಇದಕ್ಕೆ ನಾನು ಕೈ ಜೋಡಿಸುತ್ತೇನೆ ಎಂದು ಡಾ. ಶಿವಮೂರ್ತಿ ಸ್ವಾಮೀಜಿ ತೊಟ್ನಳ್ಳಿ ಗ್ರಾಮದಿಂದ ಸೇಡಂನ ಸಹಾಯಕ ಆಯುಕ್ತರ ಕಚೇರಿವರೆಗೆ ಸುಮಾರು 20 ಕಿ.ಮೀ ಪಾದಯಾತ್ರೆ ಕೈಗೊಂಡರು.
ಬುಧವಾರ (ನ.6) ಬೆಳಿಗ್ಗೆ 6 ಗಂಟೆಗೆ ತೊಟ್ನಳ್ಳಿಯಿಂದ ಪಾದಯಾತ್ರೆ ಆರಂಭಿಸಿ ಸೇಡಂ ಎಸಿ ಕಚೇರಿಗೆ ಆಗಮಿಸಿ ಇನ್ನೇನು ಅಹೋರಾತ್ರಿ ಧರಣಿಗೆ ಮುಂದಾಗುವಷ್ಟರಲ್ಲಿ ಕಂದಾಯ ಅಧಿಕಾರಿಗಳು ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಿರುವ ಪಹಣಿ ಮುಂದಿಟ್ಟರು. ಇದನ್ನು ಕಂಡು ಎಲ್ಲರಿಗೂ ಆಶ್ಚರ್ಯ. ಇದಕ್ಕೆ ಡಾ.ಶಿವಮೂರ್ತಿ ಸ್ವಾಮೀಜಿ ತಮ್ಮ ಮಠದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಿದರೆ ಸಾಲದು. ತಾಲೂಕಿನ ಯಾವ ರೈತರ ಪಹಣಿಯಲ್ಲಿ ದಾಖಲಾಗಿರುವ ಹೆಸರು ತೆಗದು ಹಾಕಬೇಕು. ನಿಯಮದಂತೆ ಶಾಶ್ವತವಾಗಿ ಅಳಿಸಿ ಹಾಕಬೇಕೆಂದರು.
Related Articles
ಇದಕ್ಕೆ ಅಧಿಕಾರಿಗಳು ವಕ್ಫ್ ಅದಾಲತ್ ನಡೆಸಿ ವಕ್ಫ್ ಹೆಸರು ತೆಗೆದು ಹಾಕಲಾಗುವುದು. ಇಪ್ಪತ್ತು ದಿನ ಅಥವಾ ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರಿಂದ ತೊಟ್ನಳ್ಳಿ ಅಲ್ಲದೇ ತಾಲೂಕಿನ ವಿವಿಧ ಮಠಾಧೀಶರು ಅಹೋರಾತ್ರಿ ಧರಣಿ ಸತ್ಯಾಗ್ರಹದಿಂದ ಹಿಂದೆ ಸರಿದರು. ಪಾದಯಾತ್ರೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
Advertisement
ತೊಟ್ನಳ್ಳಿ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ರಾತ್ರಿ ಇದ್ದದ್ದು ಬೆಳಗಾಗುವುದರೊಳಗೆ ಅದೇಗೆ ಮಾಯವಾಯಿತು? ಎಂದು ರೈತರು ಆಶ್ಚರ್ಯ ವ್ಯಕ್ತಪಡಿಸಿದರು. ಇದೆಲ್ಲ ಸರ್ಕಾರದ ಕುತಂತ್ರದಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೊಟ್ನಳ್ಳಿ ಮಠದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಿರುವಂತೆ ಕಲಬುರಗಿ ಜಿಲ್ಲೆ, ವಿಜಯಪುರ ಜಿಲ್ಲೆಯ ಹೊನವಾಡ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಬಹುದಲ್ಲ. ಒಟ್ಟಾರೆ ಜಮೀನಿನ ಪಹಣಿ ಹಾಗೂ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು ಸೇರುವಲ್ಲಿ ದೊಡ್ಡ ಹುನ್ನಾರ ಅಡಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.