Advertisement

“ಚಳಿ’ದೋಸ್ತ್

03:30 PM Jan 16, 2018 | |

ಎಂಟೂ ದಿಕ್ಕಿನಿಂದ ಚಳಿ ಮುತ್ತಿಕ್ಕಿ, ಮೈಯೊಮ್ಮೆ ಹಿಮಾಲಯ ಆಗುವ ಈ ಹೊತ್ತಿನಲ್ಲಿ ಅದೇ ಚಳಿಯನ್ನು ಚುಂಬಿಸುವ ಬಯಕೆ ಎದ್ದಿದೆ. ಚಳಿಯ ಸೆಳೆತವೇ ಅಂಥದ್ದು. ಅದು ಭೂಕಂಪನದಂತೆ ನಮ್ಮೊಳಗೆ ಭಯ ಬೀಳಿಸುವುದಿಲ್ಲ. ಇಬ್ಬನಿ ಪರದೆಯಿಂದ ಭೂಲೋಕ ಸ್ವರ್ಗವಾದಾಗ, ಚಳಿಯ ಕಂಪನ ಮೈಗೆ ತಟ್ಟುತ್ತದೆ. ಈ ರಸಮಯ ಕಾಲ, ವಿದ್ಯಾರ್ಥಿಗಳ ಬದುಕಿನಲ್ಲೂ ವಿಸ್ಮಯ ಸೆಳೆತ ಹುಟ್ಟುಹಾಕುತ್ತದೆ. ಪರೀಕ್ಷೆ ಸನಿಹವಾಗುವ ಈ ತಾಪದ ಸಮಯದಲ್ಲಿ, ಚಳಿಯ ಸುಖವನ್ನು ಅವರೆಲ್ಲ ಹೇಗೆ ಆನಂದಿಸುತ್ತಿದ್ದಾರೆ ಗೊತ್ತೇ?  

Advertisement

ವಿಂಟರ್‌, ಬೆಚ್ಚನೆ ಭಾವಗಳ ಹಂಟರ್‌
ಮಲೆನಾಡಿನಲ್ಲಿ ಮಳೆಗಾಲ, ಚಳಿಗಾಲ ಅಂತ ಪ್ರತ್ಯೇಕ ಮಾಡೋದೇ ಕಷ್ಟ. ಸುಮಾರು ಆರು ತಿಂಗಳು ಇಲ್ಲಿ ಚಳಿಗಾಲವೇ ಇರುತ್ತದೆ. ಜಿಟಿ ಜಿಟಿ ಮಳೆ ಅಥವಾ ಚುಮು ಚುಮು ಚಳಿಯಲ್ಲೇ ಬಹಳಷ್ಟು ಸುಂದರ ಬೆಳಗುಗಳು ಅರಳುತ್ತವೆ. ಹಾಗಾಗಿ ಚಳಿಗಾಲ ಎನ್ನುವುದೇ ಒಂದು ಬೆಚ್ಚನೆಯ ನಾಸ್ಟಾಲ್ಜಿಯಾ ಎನಿಸುವಷ್ಟರ ಮಟ್ಟಿಗೆ ಆಪ್ತವಾಗಿಬಿಟ್ಟಿದೆ. ನಾವು, ಅಂದ್ರೆ ಸ್ಟೂಡೆಂಟ್ಸ್‌ಗಳಿಗೂ ಈ ಚಳಿಗಾಲಕ್ಕೂ ಒಂಥರಾ ಲಿಂಕಿದೆ. ಚಳಿಗಾಲದಲ್ಲಿ ಫ‌ಸ್ಟ್‌ ಪೀರಿಯೆಡ್‌ ಲೇಟಾಗಿ ಹೋಗೋ ನಮ್ಮಂಥ ಲೇಟ್‌ ಲತೀಫ್ಗಳಿಗೆ, “ಚಳಿಗೆ ಸ್ಕೂಟರ್‌ ಸ್ಟಾರ್ಟ್‌ ಆಗ್ಲಿಲ್ಲ ಮೇಡಂ, ಬ್ಯಾಟರಿ ಡೌನು’ ಅಂತ ಏನೋ ಹೇಳಿದ್ರೂ ಆಯ್ತು, ಮೇಡಂಗಳಿಂದ ಮಾಫಿ ಇದೆ. “ಅಯ್ಯೋ, ಪಾಪ! ಚಳಿ, ಹಾಸ್ಟೆಲ್‌ನಲ್ಲಿರೊ ಮಕ್ಕಳು’ ಅನ್ನೋ ರಿಯಾಯಿತಿಯೂ ಸಿಗುತ್ತೆ. ಬೇಸಿಗೆ ಥರ ಗಂಟೆಗೊಂದ್ಸಾರಿ ಐಸ್‌ಕ್ರೀಂ, ಜ್ಯೂಸ್‌, ಸಾಫ್ಟ್ಡ್ರಿಂಕ್ಸ್‌ ಕುಡಿಯೋದು ಕಡಿಮೆ, ಹಾಗಾಗಿ ಚೆನ್ನಾಗಿ ಹಸಿವೂ ಆಗುತ್ತೆ. ನನ್‌ ಹಾಗೆ ಹಾಸ್ಟಲ್‌ನಲ್ಲಿ ಇರೋರಿಗೆ ಚಳಿಗಾಲ ಅಂದ್ರೆ ಸಕತ್‌ ಖುಷಿಯೇ! ಯಾಕಂದ್ರೆ, ಬೇಸಿಗೆಯಲ್ಲಿ ಮಧ್ಯಾಹ್ನ ಮಾಡಿದ ಅಡುಗೆ ಬೇಗ ಹಳ್ಳ ಹಿಡಿದು ಹುಳಿ ಬಂದಿರುತ್ತೆ. ಚಳಿಗಾಲ್ದಲ್ಲಿ ಯಾವ ಫ್ರಿಡ್ಜ್ನ ಹಂಗೂ ಇಲೆª ಅಡುಗೆ ಚೆನ್ನಾಗಿ ಉಳಿಯುತ್ತೆ. ಚಳಿಗಾಲದ ಇನ್ನೂ ಒಂದು ಅಡ್ವಾಂಟೇಜ್‌ ಅಂದ್ರೆ, ದುಬಾರಿ ಐಟಂಗಳನ್ನು ತಿನ್ನೋದು ಕಮ್ಮಿ. ನೂರಾರ್‌ ರೂಪಾಯಿಯ ಐಸ್‌ಕ್ರೀಂ, ಪಿಜ್ಜಾ, ಜ್ಯೂಸ್‌ ಬದು ರೋಡ್‌ಸೈಡ್‌ ಬೋಂಡ, ವಡೆಯಲ್ಲೇ ಪಾರ್ಟಿಗಳು ಮುಗಿದು ಹೋಗುತ್ತೆ. ಈ ಸೀಜನ್‌ನಲ್ಲಿ ವಾರ್ಡನ್‌ ಕೈಲಿ ಉಗಿಸ್ಕೊಳ್ಳೋದೂ ಕಡಿಮೆ. ಯಾಕಂದ್ರೆ, ಚಳಿ ಅಂತ ಅಲ್ಲಿ ಇಲ್ಲಿ ತಿರುಗೋದು ಬಿಟ್ಟು, ನಾವೆಲ್ಲಾ ಬೇಗ ಹಾಸ್ಟೆಲ್‌ ಸೇರ್ಕೊಂಡ್‌ ಪುಸ್ತಕ ಹಿಡಿತೀವಲ್ಲ!

ಎಷ್ಟೇ ಚಳಿ ಇದ್ರೂ, ಮೈ ಗಡ ಗಡ ನಡುಗ್ತಿದ್ರೂ ಟ್ರೆಕ್ಕಿಂಗ್‌ಗೆ, ಟ್ರಿಪ್‌ಗೆ ಇದೇ ಸಖತ್‌ ಕಾಲ. ಜಾಕೆಟ್‌ ಹಾಕ್ಕೊಂಡು ಮೂಳೆ ಕೊರೆಯೋ ಚಳಿಯಲ್ಲಿ, ಕುಳಿರ್ಗಾಳೀಲಿ ನೂರು ಕಿ.ಮೀ. ಫಾಸ್ಟಲ್ಲಿ ಗಾಡೀಲಿ ಹೋಗೋದೇ ಒಂದು ಥ್ರಿಲ್ಲು! ಬೇಸಿಗೆಯಲ್ಲಿ ನೀರು ಬತ್ತೋಗಿರೋ ಜಲಪಾತ ನೋಡಿ ಏನ್‌ ಪ್ರಯೋಜನ? ಬೇಸಿಗೆಯಲ್ಲಿ ಬೆವರು ಸುರಿಸ್ಕೊಂಡ್‌ “ಉಸ್‌’ ಅಂತ ಏದುಸಿರು ಬಿಡ್ತಾ, ಬೆಟ್ಟ ಹತ್ತೋಕಿಂತ ಚಳೀಲಿ ಲವಲವಿಕೆಯಿಂದ ಬೆಟ್ಟ ಹತ್ತೋದೇ ಚೆನ್ನ. ಏನಂತೀರಾ? 

ಮಾಗಿಯ ಚಳಿ- ಹೊದ್ದಷ್ಟೂ ಕೊರೆತ, ಮಾಗಿಯ ಬಿಸಿಲು-ಕಾಸಿದಷ್ಟೂ ಹಿತ. ಹಾಸ್ಟೆಲ್‌ ಕಿಟಕಿಯಿಂದ ಬರೋ ಬಿಸಿಲು ಕೋಲು ನನ್ನ ಹಾಸಿಗೆ ಮೇಲೆ ಬಿದ್ದಾಗ ಈ ಡ್ಯುಯಲ್‌ ಎಕ್ಸ್‌ಪೀರಿಯನ್ಸ್‌ ಒಂದೇ ಸಾರಿಗೆ ಸಿಗುತ್ತೆ. ನಿದ್ದೆ ಹತ್ತದ ಕಂಗಳಲ್ಲಿ ರಗ್ಗಿನ ಕತ್ತಲ ಲೋಕದಲ್ಲಿ ಕನಸಿನ, ನೆನಪಿನ ಮೆರವಣಿಗೆ ಎಂಥ ಚಳಿಯಲ್ಲೂ ಬೆಚ್ಚನೆ ಭಾವಗಳನ್ನು ಸ್ಪುರಿಸುತ್ತದೆ. ಸಣ್ಣವಳಿದ್ದಾಗ ಅಮ್ಮನ ಜೊತೆ ಚಳಿಯಲ್ಲಿ ಸೊಗಡು ಅವರೇಕಾಯಿ ಕುಯ್ಯೋಕೆ ಹೋಗ್ತಿದ್ದದ್ದು, ಜರಿಲಂಗ ಹಾಕಿಕೊಂಡು ಧನುರ್ಮಾಸದ ಪೂಜೆಗೆ ಹೋದ ನೆನಪುಗಳೆಲ್ಲ ರಗ್ಗಿನೊಳಗೇ ಮರುಸೃಷ್ಟಿಯಾಗುತ್ತವೆ. ಚಳಿಗಾಲ ನಂಗೆ ತುಂಬಾ ಇಷ್ಟ ಆಗೋಕೆ ಇನ್ನೂ ಒಂದು ತುಂಬಾ ತುಂಬಾ ಮುಖ್ಯ ಕಾರಣ ಇದೆ. ಏನ್‌ ಗೊತ್ತಾ? ನಾನು ಹುಟ್ಟಿದ್ದೇ ಚಳಿಗಾಲದಲ್ಲಿ- ಹೊಸವರ್ಷದ ಮರುದಿನ. ಚಳಿಯಲ್ಲೇ ಮೊದಲ ಬಾರಿಗೆ ಜಗತ್ತನ್ನು ಕಂಡವಳಿಗೆ ಚಳಿಗಾಲ ಇಷ್ಟ ಆಗೋಕೆ ಬೇರೆ ಕಾರಣ ಬೇಕಾ? 

ಟಿ.ಪಿ. ಶರಧಿ

Advertisement

ಚಳಿ ಕಾಯಿಸುವ ಸುಖ, ಸ್ವರ್ಗಕ್ಕೆ ಹಚ್ಚಿದ ಕಿಚ್ಚು 

ಈಗ ಎಲ್ಲೆಡೆಯೂ ಥಂಡಾ ಥಂಡಾ ಕೂಲ್ ಕೂಲ್ ವಾತಾವರಣ. ಬೆಳಗಿನ ಜಾವ “ಅಯ್ಯೋ ಚಳಿ’ ಎಂದು ಗೊಣಗುತ್ತಾ, ಒಲೆ ಅಥವಾ ಬೆಂಕಿಯ ಸುತ್ತ ಎರಡೂ ಕೈಗಳನ್ನು ಉಜ್ಜುತ್ತಾ ಕುಳಿತಿರುವವರು ಕಾಣಿಸುತ್ತಾರೆ. ವಿದ್ಯಾರ್ಥಿಗಳಿಗಂತೂ ಬೆಳಗ್ಗೆ ಎದ್ದು ಮುಖ ತೊಳೆದು, ಹಲ್ಲುಜ್ಜಲೂ ಬೇಜಾರು. ತಣ್ಣನೆಯ ನೀರು ಮುಟ್ಟುವುದೇ ಬೇಡ ಅನ್ನಿಸುತ್ತಿದ್ದೆ. ಈಗ ಎಲ್ಲರಿಗೂ ಒಂದು ರೀತಿ ಹೈಡ್ರೋಫೋಬಿಯಾ! ಚಳಿಗಾಲದಲ್ಲಿ ನಿದ್ರಿಸುವ ಸುಖವಂತೂ ವರ್ಣನಾತೀತ. ಸೂರ್ಯ ಪೂರ್ತಿ ಮೇಲೆದ್ದು ಪ್ರಖರ ಬಿಸಿಲಾಗುವ ತನಕ, ಮೆಲುಮೆಲುವಾಗಿ ತೆರೆದುಕೊಳ್ಳುವ ತನುಮನದ ಆಯಾಮಗಳು ಮೌನದ ಲೌಕಿಕತೆಯ ರಥವೇರಿ, ದಿವ್ಯಾನುಭೂತಿಯ ಲಹರಿಯಲ್ಲಿ ವಿಹರಿಸುತ್ತಾ, ಭಾವಲೋಕದ ಕಲ್ಪನೆಯ ಆಯಾಮಗಳನ್ನೆಲ್ಲ ಹತ್ತಿಳಿದು ಬಂದು, ಕೊನೆಗೆ ಸೂರ್ಯನ ಕಿರಣಗಳು ಮೈ ತಾಕಿ ಲೌಕಿಕಕ್ಕೆ ಮರಳುವ ಪ್ರಕ್ರಿಯೆಯೇ ಸೋಜಿಗವಾದದ್ದು. ನಡುಗಿಸುವ ಚಳಿಯಲೆದ್ದು, ಸಿಕ್ಕಿದೇನನ್ನೋ ಹೊದ್ದು, ಹಚ್ಚಿದ ಒಲೆಯತ್ತಲೋ, ಬೆಂಕಿಯ ಗೂಡತ್ತಲೋ ಓಡಿ ಚಳಿ ಕಾಯಿಸುತ್ತಾ ಕೂರುವ ಅನುಭವವೇ ರೋಮಾಂಚನಕಾರಿ.

ಇನ್ನು ಈಗಷ್ಟೇ ಹೊಸವರ್ಷದ ದಿನ, ಬೆಳಗ್ಗೆ ಬೇಗ ಏಳುವ ನಿರ್ಧಾರ ಮಾಡಿರುವ ಹುಡುಗರಿಗೆ ಮಾಗಿಯ ಚಳಿ ವಚನಭಂಗ ಮಾಡುವಂತೆ ಪ್ರೇರೇಪಿಸುತ್ತಿದೆ. ಶಾಲೆ-ಕಾಲೇಜು ವಿದ್ಯಾರ್ಥಿಗಳು ಮೈ ತುಂಬಾ ಸ್ವೆಟರ್‌, ಉಣ್ಣೆ ಬಟ್ಟೆ ಹಾಕಿಕೊಂಡು ನಡುಗುತ್ತಾ, ಚಳಿಗೆ ಹಿಡಿಶಾಪ ಹಾಕುತ್ತಾ ಒಲ್ಲದ ಮನಸ್ಸಿನಿಂದ ಶಾಲೆಯತ್ತ ಹೆಜ್ಜೆಹಾಕುತ್ತಿರುವ ದೃಶ್ಯಗಳು ಈಗ ಸಾಮಾನ್ಯ. ಸಂಜೆಯಾಗುತ್ತಿದ್ದಂತೆಯೇ ಬೆಂಕಿಯೆದುರು ಚಳಿ ಕಾಯಿಸುತ್ತಾ ಕುರುಕಲು ತಿಂಡಿ ಮೆಲ್ಲುತ್ತಿದ್ದರೆ ಮಜವೋ ಮಜ.

ಚಳಿಗಾಲವನ್ನು ನೋಡಲು ವಿಶಿಷ್ಟ ದೃಷ್ಟಿಕೋನವಂತೂ ಇರಬೇಕು. ಅದಕ್ಕೇ ಇರಬೇಕು, ಛಾಯಾಗ್ರಾಹಕರಿಗೆ ಚಳಿಗಾಲ ಬಹಳ ಇಷ್ಟ. ಆಗತಾನೇ ಬಿರಿದ ಹೂಗಳು, ಹುಲ್ಲಿನ ಕುಡಿ, ಎಲೆಯಂಚಲ್ಲಿ ವಜ್ರದ ಹರಳುಗಳಂತೆ ಸೂರ್ಯನ ಹೂಬಿಸಿಲ ಹೊಳಪಲ್ಲಿ ಇಬ್ಬನಿ ಹನಿಗಳು ಮಿನುಗುವುದನ್ನು ಸೆರೆಹಿಡಿಯುವುದೇ ದೊಡ್ಡ ಸಂಭ್ರಮ. ಬೆಟ್ಟ ಗುಡ್ಡಗಳ ಮೇಲೆ ಬಿಳಿ ಪರದೆ ಎಳೆದಂತೆ ಮಂಜಿನ ಮುಸುಕು ಆವರಿಸುವುದು ನಯನಮನೋಹರ. ಪ್ರವಾಸಿಗರಿಗೆ, ಚಾರಣಪ್ರಿಯರಿಗೆ ಬೆಟ್ಟ ಹತ್ತಿ ಅದರ ಮೇಲೆ ಕ್ಯಾಂಪ್‌ ಫೈರ್‌ ಮಾಡುವ ತವಕ. 

ಚಳಿ ದೇಹ, ಚರ್ಮಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ. ಎಂಥಾ ಒರಟನೇ ಇರಬಹುದು, ಚಳಿಗಾಲದಲ್ಲಿ ತನ್ನ ತ್ವಚೆಯ ಬಗ್ಗೆ ಗಮನ ಹರಿಸುತ್ತಾನೆ. ವಿರಹಿಗಳಿಗಂತೂ ಚಳಿಗಾಲ ಒಂದು ರೀತಿ ವನವಾಸವಿದ್ದಂತೆ. ಇನ್ನು, ಹುಡುಗಿಯರಿಗೋ ತುಟಿ ಸೀಳಿ ಎಲ್ಲಿ ತಮ್ಮ ನೋಟ ಹಾಳಾಗುವುದೋ ಎಂಬ ಅಂಜಿಕೆ. ಹೀಗೆ ಎಲ್ಲರೂ ಚಳಿಯನ್ನು ಶಪಿಸುವವರೇ. ಅದಕ್ಕೇ ಅಲ್ಲವೇ ಕೆ.ಎಸ್‌.ನರಸಿಂಹಸ್ವಾಮಿಯವರು ನಮ್ಮನ್ನು ನೋಡಿ, “ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು, ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು’ ಎಂದು ಬರೆದಿರುವುದು. ಏನೇ ಹೇಳಿ, ಚಳಿಗಾಲವೆಂದರೆ ಒಂದು ಸೋಜಿಗ. ಈ ಸಮಯದಲ್ಲಿ ಆರೋಗ್ಯದತ್ತ ಗಮನ ಹರಿಸಿ, ಚಳಿಯ ಮಜ ಅನುಭವಿಸುವುದೇ ನಿಜವಾದ ಗಮ್ಮತ್ತು. 

ಹನಮಂತ ಕೊಪ್ಪದ  

ಚಹಾ ಇಲ್ದಿದ್ರೆ ಚಳಿ ಬಿಡದು…

ಅಬ್ಟಾ! ಮೈಕೊರೆಯುವ ಚಳಿ. ರಾತ್ರಿ ಬೇಗ ಮಲಗುವುದಕ್ಕೂ ಆಗದೆ, ಮುಂಜಾನೆ ಮಂಜಲ್ಲಿ ಬೇಗನೆ ಏಳುವುದಕ್ಕೂ ಆಗದೆ, ಬಿಸಿಲಿಗಾಗಿ ಹಂಬಲಿಸುವ  ಕಾಲವಿದು. ಬೆಳಗಾದರೆ ಸಾಕು ಸಹಿಸಲಾಗದ ಮಂಜಿನ ಹನಿ ಸೋನೆಯಂತೆ ಬೀಳುತ್ತದೆ. ಆಹಾ ಇನ್ನೂ ಸ್ವಲ್ಪ ಹೊತ್ತು ಹಾಸಿಗೆಯಲ್ಲೇ ಬೆಚ್ಚಗಿರೋಣ ಎನ್ನುವ ಸೋಮಾರಿತನವೂ ನಮ್ಮನ್ನು ಆವರಿಸುತ್ತದೆ. ಇದೇ ಕಾರಣಕ್ಕೆ ಅಮ್ಮ ಅಪ್ಪನ ಬೈಗುಳವನ್ನೂ ಕೇಳಬೇಕು. 

ಅದೆಷ್ಟೇ ದಪ್ಪದ ಕಂಬಳಿ ಹೊದ್ದುಕೊಂಡರೂ ಚಳಿ ಚಳಿಯೇ. ಮುಖಕ್ಕೆ ಹೊದ್ದುಕೊಂಡರೆ ಕಾಲಿಗೆ ಸಾಲುವುದಿಲ್ಲ, ಕಾಲಿಗೆ ಹೊದ್ದುಕೊಂಡರೆ ಮುಖಕ್ಕೆ ಸಾಲುವುದಿಲ್ಲ ಅನ್ನುವ ಸ್ಥಿತಿ. ಅದರ ಜೊತೆಗೆ ಮುದ್ದಿನ ಬೆಕ್ಕಿನ ಕಾಟ ಬೇರೆ. ದಿನಾ ರಾತ್ರಿ ಅದು ನನಗೆ ಅಂಟಿಕೊಂಡೇ ಮಲಗುವುದು. ಇಬ್ಬರನ್ನು ಬೆಚ್ಚಗಿಡುವ ಜವಾಬ್ದಾರಿ ಕಂಬಳಿಯದ್ದು. ನಾನು ಎದ್ದ ಕೂಡಲೇ ಬೆಕ್ಕು ಕೂಡ ನನ್ನೊಂದಿಗೇ ಎದ್ದು ಬಿಡುತ್ತದೆ. 

“ಅಯ್ಯೋ ಯಾಕಪ್ಪಾ ಬೆಳಗಾಯಿತು?’… ಚಳಿಗಾಲದ ಪ್ರತಿ ಮುಂಜಾವಿನ ಮೊದಲ ಡೈಲಾಗೇ ಇದು. ಸೂರ್ಯನಿಗೂ ಚಳಿಯಾಗಬಾರದಿತ್ತೇ? ಹಾಗಾದರೂ ಡ್ನೂಟಿಗೆ ರಜಾ ಹಾಕುತ್ತಿದ್ದ ಅಂತ ಗೊಣಗುತ್ತಾ ಕಂಬಳಿ ಕಿತ್ತೂಗೆದು ಬರುವಷ್ಟರಲ್ಲಿ ಚಹಾ ರೆಡಿ ಇರಬೇಕು. ಚಹಾ ಇಲ್ಲದಿದ್ದರೆ ಚಳಿ ಬಿಟ್ಟು ಹೋಗುವುದಿಲ್ಲ. 

ಅದರಲ್ಲೂ ಈ ಪರೀಕ್ಷೆಗಳು ಚಳಿಗಾಲದಲ್ಲಿಯೇ ಬಂದು ನಮ್ಮನ್ನು ಇನ್ನಷ್ಟು ಸತಾಯಿಸುತ್ತವೆ. ಬೆಳಗ್ಗೆ ಬೇಗ ಎದ್ದು ಓದಬೇಕು. ಅದಂತೂ ದೊಡ್ಡ ಹರಸಾಹಸವೇ. ನಮ್ಮಿಂದ ದಿನಾ ಬೆಳಗೆ ತಲೆ ಮೇಲೆ ತಟ್ಟಿಸಿಕೊಳ್ಳುವ ಅಲರಾಂ ಚಳಿಗಾಲ ಮುಗಿಯುವಷ್ಟರಲ್ಲಿ ಕೆಟ್ಟೇ ಹೋಗುತ್ತವೆ. ಆಯ್ತು, ರಾತ್ರಿಯೇ ಓದೋಣ ಅಂದುಕೊಳ್ಳುತ್ತಾ, ಸ್ವೆಟರ್‌, ಜ್ಯಾಕೆಟ್‌, ಟೊಪ್ಪಿ, ಗ್ಲೌಸ್‌, ಸಾಕ್ಸ್‌….ಧರಿಸಿ ಪುಸ್ತಕ ಹಿಡಿಯುತ್ತೇವೆ. ಅದೆಲ್ಲಿರುತ್ತಾಳ್ಳೋ, ನಿದ್ರಾದೇವಿ ಹಾಗೇ ನಮ್ಮನ್ನು ಆವರಿಸಿ ಬಿಡುತ್ತಾಳೆ. ಚಳಿಯನ್ನು ತಡೆಯಲು ಮಾಡಿದ ಎಲ್ಲ ಪ್ರಯತ್ನಗಳೇ ನಮಗೆ ಮುಳುವಾಗಿ ಬೆಚ್ಚಗೆ ಮಲಗಿಬಿಡುತ್ತೇವೆ. 

ಪರೀಕ್ಷೆಯ ದಿನ ನೀಟಾಗಿ ಸ್ವೆಟರ್‌ ಧರಿಸಿ, ಚಳಿಯಾಗಬಾರದೆಂದು ಕಿವಿಯಲ್ಲಿ ಹತ್ತಿ ಇಟ್ಟುಕೊಂಡು ಪರೀಕ್ಷೆಯ ಹಾಲ್‌ಗೆ ತಲುಪುತ್ತೇವೆ. ಅಲ್ಲಿಯೂ ಚಳಿ ನಮ್ಮನ್ನು ಬೆಂಬಿಡದೆ ಕಾಡುತ್ತದೆ. ಕೈಯನ್ನು ನಡುಗಿಸುತ್ತಾ ಬಂದಷ್ಟನ್ನು ಬರೆದು ಮುಗಿಸಿಬಿಟ್ಟರೆ ಯುದ್ಧ ಗೆದ್ದಷ್ಟೇ ಖುಷಿ. 

 ಮೇಘಾ ಬ. ಗೊರವರ

ತಣ್ಣನೆ ಗಾಳಿ ಹೃದಯದಲ್ಲಿ ಕೂತು…
ಚಳಿ ಎಂಬ ಹೆಸರು ಕೇಳಿದರೆ ಏನೋ ಖುಷಿ, ಸಂಭ್ರಮ ಅಲ್ವಾ? ಹೌದು, ವರ್ಷದಲ್ಲಿ ಬರುವ ಮೂರು ಕಾಲಗಳಲ್ಲಿ ಚಳಿಗಾಲ ವಿದ್ಯಾರ್ಥಿಗಳಿಗೆ ಬಹಳ ನೆಚ್ಚಿನ ಕಾಲ. ಇಲ್ಲಿ ಬರುವ ಸನ್ನಿವೇಶಗಳು, ನಡೆಯುವ ಘಟನೆಗಳು ಬಲು ರೋಮಾಂಚಕ. ಪ್ರಕೃತಿಯ ಸೌಂದರ್ಯದಂತೆಯೇ ಮನಸ್ಸು ಕೂಡ ಮಲ್ಲಿಗೆಯಂತೆ ಅರಳುತ್ತದೆ. ಸಾಹಿತ್ಯಿಕವಾಗಿ ಮನ ವಿಕಾಸಗೊಳ್ಳತ್ತದೆ. ತಣ್ಣಗಿರುವ ಹವಾಮಾನ ದಿನಪೂರ್ತಿ ಲವಲವಿಕೆಯಿಂದಿರಲು ಸಹಾಯವಾಗುತ್ತದೆ. ಇನ್ನು ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಕಾಣುತ್ತೇವೆ. ಚಳಿಯ ವಾತಾವರಣದಿಂದ ಅಷ್ಟು ಬೇಗ ಆಯಾಸವಾಗದೆ, ಮಾಡುವ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.

ಬೆಳಗಿನ ಜಾವದ ಇಬ್ಬನಿಯಿಂದ ಮನಸ್ಸಿಗೆ ಸಕಾರಾತ್ಮಕ ಪರಿಣಾಮ ಬೀರಿ ಏಕಾಗ್ರತೆ ಅಭಿವೃದ್ಧಿಯಾಗುವುದು. ಇದರಿಂದ ಮನಸ್ಸು ಹತೋಟಿಗೆ ಬರುತ್ತದೆ. ನಿಸರ್ಗದಲ್ಲಿ ಹಸಿರೆಲೆಯ ಗಿಡ ಬಳ್ಳಿಗಳು, ಹಕ್ಕಿಯ ಚಿಲಿಪಿಲಿಯ ಕಲರವ, ತಣ್ಣನೆಯ ಗಾಳಿಯ ಸವಿ ಸವಿಯುವದರಿಂದ ಮನಸ್ಸಲ್ಲಾಗೊ ಬದಲಾವಣೆಗಳು, ಸೃಷ್ಟಿಯ ಸೌಂದರ್ಯ ಬಣ್ಣಿಸಲಾಗದು. ಎಲ್ಲರೂ ಸಹಜವಾಗಿ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳುವರು, ಕಾರಣ ವಾತಾವರಣ ದಿನವಿಡೀ ಉಲ್ಲಾಸದಿಂದಿರಲು ನೆರವಾಗುತ್ತದೆ. ಮನ ಕುಣಿಯುವ ಸನ್ನಿವೇಶ ಸೃಷ್ಟಿಸಿ ಆಹ್ಲಾದಕರ ಆನಂದ ನೀಡುತ್ತದೆ.

ವೀರೇಶ ದೊಡಮನಿ

Advertisement

Udayavani is now on Telegram. Click here to join our channel and stay updated with the latest news.

Next