ಕೊಲಂಬೋ:ಶ್ರೀಲಂಕಾದ ಸರಣಿ ಬಾಂಬ್ ದಾಳಿಯಲ್ಲಿ ದಾಳಿಯ ಶಂಕಿತ ರೂವಾರಿ, ಮೂಲಭೂತವಾದಿ ನಾಯಕ ಝಹ್ರಾನ್ ಸಾವನ್ನಪ್ಪಿರುವುದಾಗಿ ಶ್ರೀಲಂಕಾ ಅಧ್ಯಕ್ಷ ಶುಕ್ರವಾರ ಖಚಿತಪಡಿಸಿದ್ದಾರೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈಸ್ಟರ್ ಭಾನುವಾರದಂದು ಶಾಂಗ್ರಿ ಲಾ ಹೋಟೆಲ್ ಮೇಲಿನ ದಾಳಿಯಲ್ಲಿ ಝಹ್ರಾನ್ ಹಾಶೀಂ ಬಲಿಯಾಗಿದ್ದಾನೆ ಎಂದು ತಿಳಿಸಿರುವುದಾಗಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಸುದ್ದಿಗಾರರ ಜೊತೆ ಮಾತನಾಡುತ್ತ ವಿವರಿಸಿದ್ದಾರೆ.
ಝಹ್ರಾನ್ ಹಾಶೀಂ ಸ್ಥಳೀಯ ಮೂಲಭೂತವಾದಿ ಗುಂಪಿನ ನಾಯಕನಾಗಿದ್ದ ಎಂದು ವರದಿ ಹೇಳಿದೆ. ಹೋಟೆಲ್ ಮೇಲಿನ ದಾಳಿಯ ಕುರಿತು ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುವ ವೇಳೆ ಹಾಶೀಂ ಬಲಿಯಾಗಿರುವುದು ಬೆಳಕಿಗೆ ಬಂದಿರುವುದಾಗಿ ಮಿಲಿಟರಿ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
300ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದ ಭೀಕರ ದಾಳಿಯ ಬಳಿಕ ಐಸಿಸ್ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತು ಬಿಡುಗಡೆ ಮಾಡಿದ್ದ ವೀಡಿಯೋದಲ್ಲಿ ಹಾಶೀಂ ಕಾಣಿಸಿಕೊಂಡಿದ್ದ. ಆದರೆ ದಾಳಿ ನಡೆದ ನಂತರ ಹಾಶೀಂ ಎಲ್ಲಿದ್ದಾನೆ ಎಂಬುದು ಪತ್ತೆಯಾಗಿರಲಿಲ್ಲವಾಗಿತ್ತು. ಇದೀಗ ಹೋಟೆಲ್ ಸಿಸಿಟಿವಿ ಪರಿಶೀಲನೆ ವೇಳೆ ಹಾಶೀಂ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.