ರಾಂಚಿ:ಹಿರಿಯ ಪೊಲೀಸ್ ಅಧಿಕಾರಿಗಳ ಕೊಲೆ ಸೇರಿದಂತೆ 128 ಪ್ರಕರಣಗಳ ಆರೋಪಿ, ಕುಖ್ಯಾತ ನಕ್ಸಲ್ ಮುಖಂಡ ಕುಂದನ್ ಪಹಾನ್ ರಾಂಚಿಯಲ್ಲಿ ಪೊಲೀಸರಿಗೆ ಶರಣಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
128 ಪ್ರಕರಣಗಳಲ್ಲಿನ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ಕುಂದನ್ ತಲೆಗೆ ಜಾರ್ಖಂಡ್ ಸರ್ಕಾರ 15 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಜಾರ್ಖಂಡ್ ನ ಸಿಪಿಐ(ಎಂ) ಪ್ರಾಂತೀಯ ಸಮಿತಿ ಕಾರ್ಯದರ್ಶಿಯಾಗಿದ್ದ ಕುಂದನ್ ಸ್ಪೆಶಲ್ ಬ್ರಾಂಚ್ ಇನ್ಸ್ ಪೆಕ್ಟರ್ ಫ್ರಾನ್ಸಿಸ್ ಅವರನ್ನು ಹತ್ಯೆಗೈದಿದ್ದ. ಐಸಿಐಸಿಐ ಬ್ಯಾಂಕ್ ಗೆ ಸೇರಿದ್ದ 5 ಕೋಟಿ ರೂಪಾಯಿ ನಗದನ್ನು ಲೂಟಿ ಮಾಡಿದ್ದ ಎಂದು ವರದಿ ತಿಳಿಸಿದೆ.
2008ರಲ್ಲಿ ರಾಂಚಿ ಜಿಲ್ಲೆಯ ಬುಂಡು ಸಮೀಪ ಡಿಎಸ್ ಪಿ ಪ್ರಮೋದ್ ಕುಮಾರ್ ಅವರನ್ನು ಹತ್ಯೆಗೈದಿದ್ದ ಎಂದು ರಾಂಚಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ದ್ವಿವೇದಿ ಮಾಧ್ಯಮಕ್ಕೆ ವಿವರಿಸಿದ್ದಾರೆ.
ಭಾನುವಾರ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆರ್ ಕೆ ಮಲಿಕ್, ಸಿಆರ್ ಪಿಎಫ್ ಐಜಿ ಸಂಜಯ್ ಲಾತ್ಕಾರ್, ಡಿಐಜಿ ಎವಿ ಹೋಮ್ಕಾರ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಕುಂದನ್ ಪಹಾನ್ ಶರಣಾಗಿದ್ದ. ಈ ಸಂದರ್ಭದಲ್ಲಿ ಕುಂದನ್ ಕುಟುಂಬದ ಸದಸ್ಯರು ಹಾಜರಿದ್ದರು.
ನಾನು 20 ವರ್ಷಗಳ ಕಾಲವನ್ನು ವ್ಯರ್ಥ ಮಾಡಿಕೊಂಡಿದ್ದೇನೆ. ನನಗೀಗ ಜ್ಞಾನೋದಯವಾಗಿದೆ. ಅಷ್ಟೇ ಅಲ್ಲ ನಾನು ಇನ್ಮುಂದೆ ಜಾರ್ಖಂಡ್ ರಾಜ್ಯದ ಅಭಿವೃದ್ಧಿಗೆ ದುಡಿಯುವುದಾಗಿ ಕುಂದನ್ ತಿಳಿಸಿದ್ದಾನೆ. ನಕ್ಸಲ್ ಮುಖಂಡರು ಭಾರತದಲ್ಲಿ ಹಣವನ್ನು ಲೂಟಿ ಮಾಡಿ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿರುವುದಾಗಿ ಕುಂದನ್ ಆರೋಪಿಸಿದ್ದಾರೆ.