ವಿಶಾಖಪಟ್ಟಣ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಚುಟುಕು ಪಂದ್ಯದಲ್ಲಿ ಭಾರತೀಯ ಬ್ಯಾಟ್ಸಮನ್ ಗಳ ನೀರಸ ಪ್ರದರ್ಶನದ ಹೊರತಾಗಿಯೂ ನಾಯಕ ವಿರಾಟ್ ಕೊಹ್ಲಿ ಯುವ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ರಿಗೆ ವಿಶ್ವಕಪ್ ಗಿಂತ ಮೊದಲು ಇನ್ನೂ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಿದ್ದಾರೆ.
‘ಕಾಫಿ ಬ್ರೇಕ್’ ನಂತರ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ಕನ್ನಡಿಗ ಕೆ.ಎಲ್.ರಾಹುಲ್ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತನ್ನ ಫಾರ್ಮ್ ಪ್ರದರ್ಶಿಸಿದ್ದರೆ, ರಿಷಭ್ ಪಂತ್ 3 ರನ್ ಗಳಿಸಿ ಅನಗತ್ಯ ರನ್ ಔಟ್ ಗೆ ಬಲಿಯಾಗಿದ್ದರು.
ಪಂದ್ಯದ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ನಾವು ರಾಹುಲ್ ಮತ್ತು ರಿಷಭ್ ಪಂತ್ ಗೆ ಇನ್ನೂ ಹೆಚ್ಚಿನ ಸಮಯ ನೀಡಬೇಕು. ಈ ಪಂದ್ಯದಲ್ಲಿ ರಾಹುಲ್ ಉತ್ತಮ ಇನ್ನಿಂಗ್ಸ್ ಆಡಿದರು. ಉತ್ತಮ ಜೊತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ನಾವು ಅದೇ ರೀತಿ ಆಡಿದ್ದರೆ 150 ರನ್ ಗಳಿಸಬಹುದಿತ್ತು. 150 ರನ್ ಈ ಮೈದಾನದಲ್ಲಿ ಪಂದ್ಯ ಗೆಲ್ಲುವ ಗುರಿಯಾಗಿತ್ತು. ಆದರೆ ಆಸೀಸ್ ನಮಗಿಂತ ಚೆನ್ನಾಗಿ ಆಡಿದರು ಎಂದರು.
ವಿಶಾಖಪಟ್ಟಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಪ್ರಮುಖ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೂಡಾ ಒಂದು ಹಂತದಲ್ಲಿ ಗೆಲ್ಲಲು ಹೆಣಗಾಡಿತ್ತು. ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಹೊರತಾಗಿಯೂ ಆಸೀಸ್ ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಬೌಲರ್ ಗಳ ಪ್ರಯತ್ನದ ಬಗ್ಗೆ ಮಾತನಾಡಿದ ನಾಯಕ ಕೊಹ್ಲಿ, ಬೌಲರ್ ಗಳ ಪ್ರಯತ್ನದಿಂದ ಸಂತೋಷವಾಗಿದೆ. ಈ ಸಣ್ಣ ಗುರಿಯನ್ನು ಇಷ್ಟು ನಿಯಂತ್ರಣ ಮಾಡಬಹುದು ಎಂದು ನಾವು ಅಂದು ಕೊಂಡಿರಲಿಲ್ಲ. ಬುಮ್ರಾ ಅದ್ಭುತವಾಗಿ ಬೌಲಿಂಗ್ ನಡೆಸಿದರು. ಯುವ ಬೌಲರ್ ಮಯಾಂಕ್ ಮಾರ್ಕಂಡೆ ಕೂಡಾ 17 ಓವರ್ ನಲ್ಲಿ ಉತ್ತಮ ದಾಳಿ ನಡೆಸಿದರು ಎಂದು ಪಂದ್ಯ ಮುಗಿದ ನಂತರ ಕೊಹ್ಲಿ ಹೇಳಿದರು.