Advertisement

ನಮ್ಮ ಅಪ್ಪನ ಹತ್ಯೆಗೆ ಪ್ರತಿಯಾಗಿ ಪಾಕಿಗಳ 50 ರುಂಡಗಳನ್ನು ತನ್ನಿ

10:36 AM May 03, 2017 | Team Udayavani |

ನವದೆಹಲಿ/ಇಸ್ಲಾಮಾಬಾದ್‌: “ನನ್ನ ಅಪ್ಪನ ಶಿರಚ್ಛೇದ ಮಾಡಿ, ಅತ್ಯಂತ ಹೀನಾಯವಾಗಿ ಕೊಂದು ಹಾಕಿದ ಪಾಕಿಸ್ತಾನವನ್ನು ಸುಮ್ಮನೆ ಬಿಡಬೇಡಿ. ಅಪ್ಪನ ಸಾವಿಗೆ ಪ್ರತಿಯಾಗಿ, ಪಾಕಿಸ್ತಾನಿ ಸೈನಿಕರ 50 ರುಂಡಗಳನ್ನು ತನ್ನಿ.’ ಇದು ಹುತಾತ್ಮ ಯೋಧ ಪ್ರೇಮ್‌ ಸಾಗರ್‌ ಅವರ ಪುತ್ರಿಯ ಆಕ್ರೋಶಭರಿತ ನುಡಿಗಳು. ಪಂಜಾಬ್‌ನ ತರಣ್‌ ತಾರಣ್‌ನಲ್ಲಿ ಸಕಲ ಸರ್ಕಾರಿ ಗೌರವಗಳ ಜತೆಗೆ ತಂದೆಯ ಅಂತ್ಯಸಂಸ್ಕಾರದ ವೇಳೆ ಈ ಮಾತುಗಳನ್ನಾಡಿದ್ದಾರೆ.

Advertisement

ತಂದೆಯ ಸಾವಿನಿಂದ ಕಂಗಾಲಾಗಿರುವ ಸರೋಜ್‌, ತನ್ನ ತಾಯಿಯನ್ನು ಸಮಾಧಾನಿಸುತ್ತಲೇ ಆವೇಶಭರಿತ ಮಾತುಗಳನ್ನಾಡುವ ಮೂಲಕ ನೋವನ್ನು ಹೊರಹಾಕಿದ್ದಾಳೆ. ಇದೇ ವೇಳೆ ಮಾತನಾಡಿದ ಯೋಧನ ಸಹೋದರ ದಯಾಶಂಕರ್‌, “ಅಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವುದು ಹೆಮ್ಮೆಯ ಸಂಗತಿ. ಆದರೆ, ಪಾಕಿಸ್ತಾನದ ಸೇನೆಯು ಶಿರಚ್ಛೇದ ಮಾಡಿ ಕೊಂದಿದ್ದು ಮಾತ್ರ ಹೃದಯ ವಿದ್ರಾವಕ,’ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದ ದೇವರಿಯಾದಲ್ಲಿ ಹುತಾತ್ಮ ಯೋಧ ಪ್ರೇಮ್‌ ಸಾಗರ್‌ ಅವರ ಕುಟುಂಬ ಸದಸ್ಯರೂ ಪ್ರತೀಕಾರದ ಮಾತುಗಳನ್ನಾಡಿದ್ದಾರೆ.

ಕಾಶ್ಮೀರ ವಿವಾದಕ್ಕೆ ಉಗ್ರವಾದ ಕಾರಣವಲ್ಲ: ಪಾಕ್‌
ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಉಗ್ರವಾದ ಕಾರಣ ಎಂಬ ಭಾರತದ ವಾದವನ್ನು ಅಂತಾರಾಷ್ಟ್ರೀಯ ಸಮುದಾಯ ತಿರಸ್ಕರಿಸಿದೆ ಎಂದು ಪಾಕಿಸ್ತಾನ ಹೇಳಿದೆ. ವಿವಾದ ಬಗೆಹರಿಸಲು ಅರ್ಥಪೂರ್ಣ ಮಾತುಕತೆಗೆ ಇದ್ದ ಎಲ್ಲ ಅವಕಾಶಗಳನ್ನೂ ಭಾರತ ಹಾಳುಮಾಡಿಕೊಂಡಿದೆ ಎಂದೂ ಆರೋಪಿಸಿದೆ. ಈ ಕುರಿತು ಮಂಗಳವಾರ ಮಾತನಾಡಿದ ಪಾಕ್‌ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌, “ಶಸ್ತ್ರರಹಿತ ಕಾಶ್ಮೀರಿ ಪ್ರತಿಭಟನಾಕಾರರ ಮೇಲೆ ಕ್ರೌರ್ಯ ಮೆರೆಯುವ ಮೂಲಕ ಭಾರತವು ತನ್ನದೇ ದಾಖಲೆಯನ್ನು ತಾನೇ ಮುರಿಯುತ್ತಿದೆ. ನಾವು ಕಾಶ್ಮೀರದಲ್ಲಿನ ಮಾನವ ಹಕ್ಕು ಉಲ್ಲಂಘನೆ ಹಾಗೂ ವಿವಾದ ಬಗೆಹರಿಯಬೇಕೆಂದು ಬಯಸುತ್ತೇವೆ. ಆದರೆ, ಭಾರತವೇ ಎಲ್ಲ ಅವಕಾಶಗಳನ್ನೂ ಕೈಬಿಡುತ್ತಿದೆ,’ ಎಂದಿದ್ದಾರೆ. ಇದೇ ವೇಳೆ, ಬಹುರಾಷ್ಟ್ರೀಯ ಮಧ್ಯಸ್ಥಿಕೆ ಕುರಿತು ಟರ್ಕಿ ಅಧ್ಯಕ್ಷ ಎಡೋìಗನ್‌ ನೀಡಿರುವ ಸಲಹೆಯನ್ನೂ ಅಜೀಜ್‌ ಸ್ವಾಗತಿಸಿದ್ದಾರೆ.

ಜಿಂದಾಲ್‌ ಭೇಟಿಗೆ ಕೆಂಡವಾದ ಪಾಕ್‌ ಸೇನೆ
ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಮತ್ತು ಭಾರತದ ಖ್ಯಾತ ಉದ್ಯಮಿ ಸಜ್ಜನ್‌ ಜಿಂದಾಲ್‌ ರಹಸ್ಯ ಭೇಟಿ ಬಹಿರಂಗವಾಗುತ್ತಿದ್ದಂತೆ ಪಾಕ್‌ ಸೇನೆ ಕೆಂಡವಾಗಿದೆ. ಮುರೀÅ ರೆಸಾರ್ಟ್‌ಗೆ ಜಿಂದಾಲ್‌ ಭೇಟಿಯು ವೀಸಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಸೇನೆ ಹೇಳಿದೆ. ಅವರಿಗೆ, ಇಸ್ಲಾಮಾಬಾದ್‌ ಮತ್ತು ಲಾಹೋರ್‌ಗಷ್ಟೇ ಭೇಟಿ ನೀಡಲು ಅನುಮತಿ ಇತ್ತು. ಆದರೆ, ಅವರು ನಿಯಮ ಉಲ್ಲಂ ಸಿ ಮುರೀÅಗೆ ತೆರಳಿದ್ದಾರೆ. ಇದು ಸರಿಯಾದುದಲ್ಲ ಎಂದು ಸೇನೆ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಪಾಕ್‌ ಪ್ರಧಾನಿ ಷರೀಫ್ ಇಬ್ಬರಿಗೂ ಆತ್ಮೀಯರಾಗಿರುವ ಜಿಂದಾಲ್‌ ಏ.26ರಂದು ಮುರೀÅಯಲ್ಲಿ ಷರೀಫ್ರನ್ನು ಭೇಟಿಯಾಗಿದ್ದರು. ಭಾರತ-ಪಾಕ್‌ ನಡುವಿನ ವೈಮನಸ್ಸನ್ನು ದೂರ ಮಾಡುವ ನಿಟ್ಟಿನಲ್ಲಿ ಅವರು ಮಧ್ಯಸ್ಥಿಕೆ ವಹಿಸಿದ್ದಾರೆಯೇ ಎಂಬ ಅನುಮಾನಕ್ಕೆ ಇದು ಕಾರಣವಾಗಿತ್ತು.

Advertisement

ಬ್ಯಾಂಕ್‌ಗೆ ನುಗ್ಗಿ 65 ಸಾವಿರ ರೂ. ಲೂಟಿ
ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರು ಕ್ಯಾಶ್‌ವ್ಯಾನ್‌ ಅನ್ನು ಅಡ್ಡಗಟ್ಟಿ 7 ಮಂದಿಯನ್ನು ಹತ್ಯೆಗೈದ ಬೆನ್ನಲ್ಲೇ ಮತ್ತೂಂದು ಬ್ಯಾಂಕ್‌ ಲೂಟಿ ಪ್ರಕರಣ ಮಂಗಳವಾರ ಕುಲ್ಗಾಂನಲ್ಲೇ ನಡೆದಿದೆ. ಯರಿಪೋರಾದ ಬ್ಯಾಂಕ್‌ನ ಶಾಖೆಗೆ ನುಗ್ಗಿದ ಶಸ್ತ್ರಧಾರಿ ಉಗ್ರರು, ಗನ್‌ ತೋರಿಸಿ ಬೆದರಿಸಿ 65 ಸಾವಿರ ರೂ. ಲೂಟಿ ಮಾಡಿದ್ದಾರೆ.

ವೀರ ಯೋಧರಿಗೆ ಕಣ್ಣೀರ ವಿದಾಯ
ಇನ್ನೊಂದೆಡೆ, ಸೋಮವಾರ ಪಾಕ್‌ ಸೇನೆಯ ಕ್ರೌರ್ಯಕ್ಕೆ ಬಲಿಯಾದ ಹುತಾತ್ಮ ಸುಬೇದಾರ್‌ ಪರಮ್‌ಜಿತ್‌ ಸಿಂಗ್‌ ಮತ್ತು ಪ್ರೇಮ್‌ಸಾಗರ್‌ ಅವರ ಅಂತ್ಯಕ್ರಿಯೆ ಮಂಗಳವಾರ ಹುಟ್ಟೂರುಗಳಲ್ಲಿ ನೆರವೇರಿತು. ಅದಕ್ಕೂ ಮೊದಲು, ಪೂಂಛ…ನಲ್ಲಿ ಇಬ್ಬರು ಹುತಾತ್ಮರಿಗೂ ಗೌರವ ಸಲ್ಲಿಸಲಾಯಿತು. ಅಲ್ಲಿ ನೆರೆದಿದ್ದ ಯೋಧರು ತಮ್ಮ ಸಹೋದ್ಯೋಗಿಗಳಿಗೆ ಕಣ್ಣೀರ ವಿದಾಯ ಹೇಳಿದರು. ಸಿಂಗ್‌ ಅವರ ಪಾರ್ಥಿವ ಶರೀರವನ್ನು ಪಂಜಾಬ್‌ಗೂ, ಪ್ರೇಮ್‌ಸಾಗರ್‌ ಅವರ ಶರೀರವನ್ನು ಉತ್ತರಪ್ರದೇಶದ ಅವರ ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಇದೇ ವೇಳೆ, ಹೀನ ಕೃತ್ಯ ಎಸಗಿರುವ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ಮಂಗಳವಾರ ಪ್ರತಿಭಟನೆಗಳು ನಡೆದವು.

ಶಿರಚ್ಛೇದದ ಸಮಯದಲ್ಲಿ ಬಿಜೆಪಿ ವಿಜಯ ಪರ್ವ!
ಪಾಕಿಸ್ತಾನವು ನಮ್ಮ ಯೋಧರ ಶಿರಚ್ಛೇದ ಮಾಡಿರುವ ಈ ಸಂದರ್ಭದಲ್ಲಿ ಬಿಜೆಪಿ ದೆಹಲಿ ಎಂಸಿಡಿ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ “ವಿಜಯ ಪರ್ವ’ ಆಚರಿಸುತ್ತಿದೆ. ಮೋದಿ ಸರ್ಕಾರ ಒಂದು ರಾಷ್ಟ್ರೀಯ ಭದ್ರತಾ ನೀತಿಯನ್ನು ಹೊಂದಿಲ್ಲದೇ ಇರುವುದು ದುರದೃಷ್ಟಕರ ಸಂಗತಿ ಎಂದು ಕಾಂಗ್ರೆಸ್‌ ಹೇಳಿದೆ. ಯುಪಿಎ ಅವಧಿಯಲ್ಲಿ ಭಾರತೀಯ ಯೋಧರ ಶಿರಚ್ಛೇದ ನಡೆದಾಗ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ “ಬಳೆಗಳನ್ನು ಕಳುಹಿಸಿಕೊಡುತ್ತೇನೆ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದರು. ಆ ಮಾತನ್ನು ಸ್ಮರಿಸಿದ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, “ಈಗ ಮೋದಿ ಸರ್ಕಾರವು ತಾನು ತೊಟ್ಟಿರುವ ಬಳೆಗಳನ್ನು ತೆಗೆದು, ಏನಾದರೂ ಕ್ರಮ ಕೈಗೊಳ್ಳಲಿ,’ ಎಂದಿದ್ದಾರೆ.

ಸರ್ಜಿಕಲ್‌ ದಾಳಿ ಬಳಿಕ ಉಗ್ರ ಶಿಬಿರಗಳ ಸಂಖ್ಯೆ ಹೆಚ್ಚಳ
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತವು ಪಿಒಕೆಯಲ್ಲಿ ಸರ್ಜಿಕಲ್‌ ದಾಳಿ ನಡೆಸಿದ ಬಳಿಕ, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಾಯಿಕೊಡೆಗಳಂತೆ ಉಗ್ರರ ಶಿಬಿರಗಳು ಎದ್ದಿವೆ ಎಂದು ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಪಿಒಕೆಯಲ್ಲಿ 20ಕ್ಕೂ ಹೆಚ್ಚು ಹೊಸ ಶಿಬಿರಗಳನ್ನು ಪಾಕ್‌ ಸೇನೆಯ ಬೆಂಬಲದಲ್ಲಿ ನಿರ್ಮಿಸಲಾಗಿದೆ. ಸರ್ಜಿಕಲ್‌ ದಾಳಿ ವೇಳೆ ಸುಮಾರು 35 ಉಗ್ರ ತರಬೇತಿ ಶಿಬಿರಗಳಿದ್ದವು. ಈಗ ಅದು 55ಕ್ಕೆ ಏರಿಕೆಯಾಗಿವೆ. ಎಲ್ಲ ಶಿಬಿರಗಳೂ ಸಕ್ರಿಯವಾಗಿವೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿರುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಜತೆಗೆ, ಕಳೆದ 4 ತಿಂಗಳಲ್ಲಿ 60 ಒಳನುಸುಳುವಿಕೆ ಯತ್ನಗಳು ನಡೆದಿದ್ದು, 15 ಉಗ್ರರು ಜಮ್ಮು-ಕಾಶ್ಮೀರ ಪ್ರವೇಶಿಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ. ಗಡಿಯಲ್ಲಿ ಭಾರತೀಯ ಯೋಧರ ಶಿರಚ್ಛೇದ ಪ್ರಕರಣದ ಮಾರನೇ ದಿನವೇ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಪಾಕ್‌ ಪಡೆಯ ಕದನ ವಿರಾಮ ಉಲ್ಲಂಘನೆಗೆ ಬಲಿಯಾದ ಇಬ್ಬರು ಹುತಾತ್ಮರ ಕುಟುಂಬಗಳೊಂದಿಗೆ ಇಡೀ ದೇಶವೇ ಇದೆ.
– ಕಿರಣ್‌ ರಿಜಿಜು, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ

ನಾನು 8 ವರ್ಷ ರಕ್ಷಣಾ ಸಚಿವನಾಗಿದ್ದಾಗ, ಶಿರಚ್ಛೇದದಂಥ ಒಂದೇ ಒಂದು ಪ್ರಕರಣ ನಡೆದಿತ್ತು. ಆದರೆ, ಕಳೆದ 3 ವರ್ಷಗಳಲ್ಲಿ ನಡೆಯುತ್ತಿರುವ ಇಂಥ 3ನೇ ಕೃತ್ಯವಿದು. ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡಲು ಸೇನೆಗೆ ಸಂಪೂರ್ಣ ಸ್ವಾತಂತ್ಯ† ಕೊಡಬೇಕು.
– ಎ.ಕೆ.ಆ್ಯಂಟನಿ, ಮಾಜಿ ರಕ್ಷಣಾ ಸಚಿವ

ಗೋರಕ್ಷಣೆ, ತ್ರಿವಳಿ ತಲಾಖ್‌ನಂಥ ದೇಶ ವಿಭಜನೆಯತ್ತ ಗಮನ ಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರವು, ಗಡಿ ಭದ್ರತೆ, ಕಾನೂನು ಸುವ್ಯವಸ್ಥೆ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆಯಿದೆ.
– ಮಾಯಾವತಿ, ಬಿಎಸ್ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next