Advertisement

ಸ್ಕಾಲರ್‌ಶಿಪ್‌ಗಾಗಿ ಹೆತ್ತವರ ಅಲೆದಾಟ

11:47 AM Aug 01, 2017 | Team Udayavani |

ವಿಟ್ಲ: ಪ್ರೌಢಶಾಲೆಯ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಾಗಿ ಹೆತ್ತವರ ಅಲೆದಾಟ ಎಂದೋ ಆರಂಭವಾಗಿದೆ. ಕೆಲವರಿಗೆ ಬ್ಯಾಂಕ್‌ ಖಾತೆಗೆ ಹಣ ಇನ್ನೂ ಜಮಾ ಆಗಿಲ್ಲ. ಸಮಸ್ಯೆ ಏನು? ಈ ಬಗ್ಗೆ ಯಾರಲ್ಲಿ ಕೇಳಬೇಕು? ಪರಿಹಾರ ಏನು? ಎಂಬ ವಿಚಾರ ಯಾರಿಗೂ ಗೊತ್ತಿಲ್ಲ. ಹೆತ್ತವರು ತಬ್ಬಿಬ್ಟಾಗಿದ್ದಾರೆ.

Advertisement

ಏನೇನು ದಾಖಲೆ ಬೇಕು ?
ವಿದ್ಯಾರ್ಥಿಗಳ ಅಂಕಪಟ್ಟಿ, ಆರೋಗ್ಯ ಕಾರ್ಡ್‌, ಭಾವಚಿತ್ರ, ಆಧಾರ್‌ ಕಾರ್ಡ್‌, ತಂದೆ-ತಾಯಿಯ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಆದಾಯ ಪ್ರಮಾಣಪತ್ರ, ತಂದೆ/ತಾಯಿಯ ಜಾತಿ ಪ್ರಮಾಣಪತ್ರ, ಉಳಿತಾಯ ಖಾತೆ, ಶಾಲೆಗೆ ಪಾವತಿಸಿದ ಶುಲ್ಕದ ರಶೀದಿ ಮೊದಲಾದವುಗಳ ಜೆರಾಕ್ಸ್‌ ಪ್ರತಿ ನೀಡಬೇಕು. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಬೇಕು. ಜಾತಿ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಓಡಾಟ ಮಾಡಬೇಕು. 120 ರೂ. ಪಾವತಿಸಬೇಕು. ಅಲ್ಲದೇ ಜೆರಾಕ್ಸ್‌ ಮತ್ತು ಓಡಾಟಕ್ಕೆ ನೂರಾರು ರೂ.ಗಳ ಖರ್ಚು ಮಾಡಬೇಕು. ಆಮೇಲೆ ಈ ದಾಖಲೆಗಳನ್ನು ಶಾಲೆಯ ಮುಖ್ಯಸ್ಥರಿಗೆ ನೀಡಬೇಕು.

ಆನ್‌ಲೈನ್‌ ಅರ್ಜಿ
ಆಯಾಯ ಶಾಲೆಯ ವಿದ್ಯಾರ್ಥಿಗಳ ಇಷ್ಟೊಂದು ದಾಖಲೆಗಳನ್ನು ಪಡೆದ ಶಾಲೆಯ ಮುಖ್ಯಸ್ಥರು ಡೈರೆಕ್ಟರೇಟ್‌ ಆಫ್‌ ಮೈನಾರಿಟಿ ಅವರಿಗೆ ಆನ್‌ಲೈನಲ್ಲಿ ಕಳುಹಿಸಿಕೊಡಬೇಕು. ಆಮೇಲೆ ಬಿಇಒ ಕಚೇರಿಗೆ ದಾಖಲೆಗಳನ್ನು ಹಸ್ತಾಂತರಿಸಬೇಕು. ಆನ್‌ಲೈನ್‌ ಮೂಲಕ ಕಳುಹಿಸಿದ ದಾಖಲೆಗಳ ಪ್ರಕಾರ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತದೆ. ದಾಖಲೆಗಳಲ್ಲಿ ಯಾವುದೇ ರೀತಿಯ ತಪ್ಪಾಗಿದ್ದಲ್ಲಿ ಅಥವಾ ಹೊಂದಾಣಿಕೆಯಾಗದೇ ಇದ್ದಲ್ಲಿ ಫಲಾನುಭವಿಗೆ ಸ್ಕಾಲರ್‌ಶಿಪ್‌ ತಲು ಪುವು ದಿಲ್ಲ. ಈ ಸಮಸ್ಯೆ ಯಾವುದು ಎಂಬ ಬಗ್ಗೆ ವಿವರ ಫಲಾನುಭವಿಗೆ ಅರಿತು ಕೊಳ್ಳಲಾಗುವುದಿಲ್ಲ. ಫಲಾನು ಭವಿಗಳಿಗೆ ಯಾರನ್ನು ಸಂಪರ್ಕಿಸ ಬೇಕು, ಸ್ಕಾಲರ್‌ಶಿಪ್‌ ಬರದೇ ಇರಲು ಕಾರಣವೇನು? ಎಂದು ಅರಿತು ಕೊಳ್ಳುವುದಕ್ಕೂ ಆಗುವುದಿಲ್ಲ. ಶಾಲೆಯ ಮುಖ್ಯಸ್ಥರಿಗೂ ಯಾರಿಗೆ ಹಣ ಬಂದಿಲ್ಲ, ಯಾರಿಗೆ ಬಂದಿದೆ ಎಂಬ ಮಾಹಿತಿ ಸಿಗುವುದಿಲ್ಲ. 

ಸ್ಕಾಲರ್‌ಶಿಪ್‌ ಎಷ್ಟು ?
8ನೇ ತರಗತಿಯಿಂದ ಎಸೆಸೆಲ್ಸಿ ತನಕದ ವಿದ್ಯಾರ್ಥಿಗಳು ಶೇ. 50ಕ್ಕಿಂತ ಹೆಚ್ಚು ಅಂಕ ಪಡೆದಿದ್ದರೆ ಈ ಸ್ಕಾಲರ್‌ಶಿಪ್‌ ಪಡೆಯಲು ಅರ್ಹರು. ಅವರಿಗೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 1,000 ಮತ್ತು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸ್ವಲ್ಪ ಹೆಚ್ಚು ಹಣ ಸಿಗುತ್ತದೆ. ಈ ಸ್ಕಾಲರ್‌ಶಿಪ್‌ ಪಡೆಯುವ ವಿದ್ಯಾರ್ಥಿಗಳು ಬೇರೆ ಸ್ಕಾಲರ್‌ಶಿಪ್‌ ಪಡೆದುಕೊಂಡಿರಬಾರದು. ಹೆತ್ತವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ 500 ರೂ.ಗಳಷ್ಟು ಮೊತ್ತ ಖರ್ಚು ಮಾಡಿರುತ್ತಾರೆ. ಆಮೇಲೆ ಹಣ ಖಾತೆಗೆ ಜಮಾ ಆಗಿದೆಯೇ ಎಂದು ತಿಳಿದು ಕೊಳ್ಳುವುದಕ್ಕೆ ಓಡಾಡಬೇಕು. ಸ್ಕಾಲರ್‌ಶಿಪ್‌ ಅಂಡರ್‌ ಪ್ರೊಸೆಸ್‌ ಅಂತ ಹೇಳುವ ಸಂದೇಶ ಮೊಬೈಲ್‌ಗೆ ಬಂದಿದ್ದರೆ ಅವರ ಖಾತೆಗೆ ಹಣ ಜಮಾ ಆಗಿರುವುದಿಲ್ಲ. ಅದೇಕೆ ಎಂದು ವಿಚಾರಿಸುವುದಕ್ಕೆ ಫಲಾನುಭವಿಗಳಿಗೆ ಅವಕಾಶವಿಲ್ಲ. ವಿಟ್ಲದ ಓರ್ವ ಫಲಾನುಭವಿ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಎಲ್ಲ ಸೈಬರ್‌ಸೆಂಟರ್‌ಗಳಿಗೆ ಓಡಾಡಿ, ಕಾರಣ ಪತ್ತೆ ಮಾಡಲು ಹೋರಾಡಿದ್ದಾರೆ. ಇಂದಿನ ತನಕ ಅವರಿಗೆ ಮಾಹಿತಿ ನೀಡಿದವರಿಲ್ಲ.

ಹೀಗಾದರೆ ಹೇಗೆ ?
ಹಳ್ಳಿಯಲ್ಲಿ ಕೂಲಿ ಕಾರ್ಮಿಕರು, ಬಡಜನರು ವಿದ್ಯಾಭ್ಯಾಸಕ್ಕೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಿ, ಓಡಾಡಿದ್ದಾರೆ. ಅವರಿಗೆ ಕೂಲಿಗೆ ತೆರಳಿದರೆ ದಿನವೊಂದಕ್ಕೆ 500 ರೂ. ವೇತನ ಸಿಗುತ್ತದೆ. ಆದರೆ ಸರಕಾರದಿಂದ ಸಿಗುವ ಸವಲತ್ತು ಪಡೆಯುವುದಕ್ಕಾಗಿ 4-5 ದಿನ ಓಡಾಟ ನಡೆಸಿದರೆ ಆತನಿಗೆ 4 ದಿನಗಳ ವೇತನವೂ ಖೋತಾ.

Advertisement

ಸ್ಕಾಲರ್‌ಶಿಪ್‌ ಅರ್ಜಿಗಳ ರಾಶಿ
ಎಲ್ಲ ಶಾಲೆಗಳ ಆರಂಭದ ದಿನಗಳಲ್ಲಿ ವಿವಿಧ ರೀತಿಯ ಆವಶ್ಯಕತೆಗಳಿಗೆ ಹೆತ್ತವರು ಮತ್ತು ಶಿಕ್ಷಕರು ಸ್ಪಂದಿಸಬೇಕು. ಆಗ ಸ್ಕಾಲರ್‌ಶಿಪ್‌ ಪಡೆಯುವ ಮಾಹಿತಿ ಲಭ್ಯವಾಗುತ್ತದೆ. ಪ.ಜಾತಿ/ ಪ.ಪಂ., ಕೊರಗ, ಒಬಿಸಿ, ಬೀಡಿ, ಅಲ್ಪಸಂಖ್ಯಾಕ, ಸಂಸ್ಕೃತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಲಭ್ಯವಾಗುತ್ತದೆ. ಇದಕ್ಕಾಗಿ ಶಾಲೆಗಳಲ್ಲಿ ಈಗಾಗಲೇ ಅರ್ಜಿಗಳ ರಾಶಿ ಬಿದ್ದಿರುತ್ತದೆ. 

ಶಿಕ್ಷಕರಿಗೆ ಹಲವು ಹೊರೆಗಳ ಮಧ್ಯೆ ಇದೂ ಒಂದು ಹೊರೆಯೇ ಆಗಿದೆ. ಆದರೂ ಶಿಕ್ಷಕರು ಶ್ರಮವಹಿಸಿ, ಆನ್‌ಲೈನ್‌ ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುವಾಗ ಸರ್ವರ್‌ ಸಮಸ್ಯೆ ಉಂಟಾಗಿ ಅರ್ಧಕ್ಕೇ ಸ್ಥಗಿತ ಗೊಳ್ಳುತ್ತದೆ. ಆಗ ಅವರು ರಾತ್ರಿ ಇಡೀ ಕಷ್ಟಪಡುವುದಿದೆ, ಕಷ್ಟಪಟ್ಟರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಲುಪದಿದ್ದರೆ ಏನು ಪ್ರಯೋಜನ?

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next