Advertisement
ಇಲ್ಲಿನ ಜನರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ, ಸರ್ಕಾರ ಹಾಗೂ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಮುಂದಾಗದಿರುವುದರಿಂದ ಶವ ಸಂಸ್ಕಾರಕ್ಕೂ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಔರಾದ ತಾಲೂಕಿನಲ್ಲಿ ಒಟ್ಟು 154 ಹಳ್ಳಿಗಳಿದ್ದು ಈ ಪೈಕಿ 128 ಹಳ್ಳಿಗಳಲ್ಲಿ ಇಂದಿಗೂ ಸ್ಮಶಾನ ಭೂಮಿಯೇ ಇಲ್ಲ. ಅದರಂತೆ ತಾಲೂಕಿನಲ್ಲಿ 158 ತಾಂಡಾಗಳಿದ್ದು ಇದರಲ್ಲಿ ಎಷ್ಟು ತಾಂಡಾಗಳಲ್ಲಿ ಸ್ಮಶಾನ ಭೂಮಿ ಇದೆ ಎನ್ನುವುದು ಕೂಡ ತಾಲೂಕು ಆಡಳಿತಕ್ಕೆ ಗೊತ್ತಿಲ್ಲದಾಗಿದೆ.
Related Articles
Advertisement
ಔದಾರ ಹಾಗೂ ಕಮಲನಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ಈ ಹಿಂದೆ ಗ್ರಾಮದ ಮುಖಂಡರ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಹಂತ ಹಂತವಾಗಿ ಖಾಸಗಿ ವ್ಯಕ್ತಿಗಳು ಶವಸಂಸ್ಕಾರ ಮಾಡಲು ಭೂಮಿ ನೀಡುವುದನ್ನು ನಿಲ್ಲಿಸಿದಾಗ ತಾಲೂಕಿನ 49 ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ಸ್ಮಶಾನಭೂಮಿ ನೀಡಲಾಗಿದೆ. ಗಣೇಶಪೂರ ಸೇರಿದಂತೆ ಎಂಟು ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಹೋಗಲು ರಸ್ತೆಗಳಿಲ್ಲ. ಮಳೆಗಾಲದಲ್ಲಿ ಮರಣ ಹೊಂದಿದರೆ ಮತ್ತೆ ಹೋರಾಟ ಮಾಡುವುದು ಪರಂಪರೆಯಾಗಿ ಬೆಳೆದುಕೊಂಡು ಬಂದಿದೆ.
ಗ್ರಾಮೀಣ ಭಾಗದ ಜನರು ಸ್ಮಶಾನ ಭೂಮಿ ನೀಡುವಂತೆ ತಾಲೂಕು ಆಡಳಿತಕ್ಕೆ ಹಾಗೂ ಸರ್ಕಾರಕ್ಕೆ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಇನ್ನು ಮುಂದಾದರೂ ಪ್ರತಿ ಗ್ರಾಮದಲ್ಲೂ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ನೀಡುವುದರ ಜತೆಗೆ ಅಲ್ಲಿಗೆ ಹೋಗಲು ರಸ್ತೆ ಸಂಪರ್ಕ ಕಲ್ಪಿಸಿಕೊಡಲು ಮುಂದಾಗಬೇಕೆನ್ನುವುದು ತಾಲೂಕಿನ ಜನರ ಮಾತಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲವಂತಾಗಿದೆ. ಕೆಲ ಗ್ರಾಮಗಳಿಗೆ ಸ್ಮಶಾನ ಭೂಮಿ ನೀಡಲಾಗಿದೆ. ಇನ್ನುಳಿದ ಗ್ರಾಮಗಳಿಗೂ ಸ್ಮಶಾನ ಭೂಮಿ ನೀಡುವುದರ ಬಗ್ಗೆ ಸಹಾಯಕ ಆಯುಕ್ತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವೆ. –ಎಂ.ಚಂದ್ರಶೇಖರ, ತಹಶೀಲ್ದಾರ್.
ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಸೇರಿ ತಹಶೀಲ್ದಾರ್ ಕಚೇರಿ ಎದುರು ಹದಿನೈದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದಾಗ, ಅಂದಿನ ಬೀದರ ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ ಸ್ಥಳಕ್ಕೆ ಬಂದು ಲಿಖೀತ ಭರವಸೆ ನೀಡಿದ್ದರು. ಆದರೆ ಇಂದಿಗೂ ಕೂಡ ನಮ್ಮಗೆ ಸ್ಮಶಾನಭೂಮಿ ಇಲ್ಲದಂತಾಗಿದೆ. –ಶಿವಕುಮಾರ ಕಾಂಬಳೆ, ಹೋರಾಟಗಾರ.
-ರವೀಂದ್ರ ಮುಕ್ತೇದಾರ