ಬೆಂಗಳೂರು: “ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಹುಡುಕಿಕೊಂಡು ರಾಜಧಾನಿವರೆಗೆ ಯಾಕೆ ಬರ್ತಾರೆ’ ಎಂದು ಖಾರವಾಗಿ ಪ್ರಶ್ನಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, “ಜಿಲ್ಲಾ ಹಾಗೂ ತಾಲೂಕು ಮಟ್ಟದಿಂದಲೇ ಆಡಳಿತ ಯಂತ್ರ ಚುರುಕಾಗಬೇಕು’ ಎಂದು ತಾಕೀತು ಮಾಡಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ಬರ ಹಾಗೂ ಪ್ರವಾಹ ನಿರ್ವಹಣೆ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, “ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಹೂಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಎರಡು ಬಾರಿ ಜಿಲ್ಲಾ ಪ್ರವಾಸ ಕೈಗೊಂಡು ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು’ ಎಂದು ನಿರ್ದೇಶನ ನೀಡಿದರು. ಜಿಲ್ಲಾ ಪ್ರವಾಸ ಹೋದಾಗ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು.
“ಜಿಲ್ಲಾ ಹಾಗೂ ತಾಲೂಕು ಕಚೇರಿಗಳಿಗೂ ಸಾರ್ವಜ ನಿಕರು ಅಲೆದಾಡುವಂತೆ ಮಾಡಬಾರದು. ಇದನ್ನು ನಾನು ಯಾವುದೇ ಕಾರಣಕ್ಕೂ ಸಹಿಸಲ್ಲ. ಬರ ಹಾಗೂ ಪ್ರವಾಹ ಸೇರಿ ಪ್ರಕೃತಿ ವಿಕೋಪ ಸ್ಥಿತಿ ನಿರ್ವಹಣೆ ಮಾಡುವಾಗ, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಕಾನೂನಿನ ನೆಪವೊಡ್ಡಿ ನಿರಾಕರಿಸುವುದು ಅಕ್ಷಮ್ಯ. ಕಾನೂನು ಇರುವುದೇ ಜನರ ಸೇವೆಗಾಗಿ, ಕಾನೂನು ಅಭಿವೃದ್ಧಿಗೆ ಅಡ್ಡಿಯಾಗಬಾರದು’ ಎಂದು ಹೇಳಿದರು.
“ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪ್ರವಾಸದ ಬಗ್ಗೆ ಪ್ರತಿ ತಿಂಗಳು ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತರೆ ಸಮಸ್ಯೆ ಗೊತ್ತಾಗುವುದಿಲ್ಲ. ಗ್ರಾಮೀಣ ಭಾಗಕ್ಕೆ ಹೋದರೆ ಗೊತ್ತಾಗುತ್ತದೆ’ ಎಂದರು. “ರಾಜ್ಯದಲ್ಲಿ ಮಳೆಯ ಅಭಾವ ಇದೆ. ಮುಂಗಾರು ಪೂರ್ವ ಶೇ.42 ರಷ್ಟು, ಮುಂಗಾರು ತಡವಾಗಿ ಪ್ರವೇಶವಾದ ನಂತರ ವಾಡಿಕೆ ಮಳೆಯಲ್ಲಿ ಶೇ.18 ರಷ್ಟು ಕಡಿಮೆಯಾಗಿದೆ. ಮಲೆನಾಡು ಭಾಗದಲ್ಲಿ ಶೇ.13.2 ರಷ್ಟು ಮಳೆ ಕಡಿಮೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.
3062 ಗ್ರಾಮಗಳಲ್ಲಿ ಇಂದಿಗೂ ಖಾಸಗಿ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ಜುಲೈ ತಿಂಗಳಲ್ಲೂ ಇಂತಹ ಸ್ಥಿತಿ ಇರುವುದು ತೀವ್ರತೆಗೆ ಸಾಕ್ಷಿ’ ಎಂದು ಹೇಳಿದರು. “ಬರ ಪರಿಹಾರ ಕಾಮಗಾರಿಗಳಿಗೆ 618 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 422 ಕೋಟಿ ರೂ. ಇದೆ. ಅದು ಸುಮ್ಮನೆ ಇಟ್ಟುಕೊಳ್ಳಲು ಅಲ್ಲ, ತುರ್ತು ಕಾಮಗಾರಿಗಳಿಗೆ ವೆಚ್ಚ ಮಾಡಿ ಅಗತ್ಯವಾದರೆ ಮತ್ತಷ್ಟು ನೀಡುತ್ತೇವೆ’ ಎಂದು ತಿಳಿಸಿದರ
ಒಂದು ವಾರ ಗಡುವು: ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ವಾರ ಗಡುವು ನೀಡುತ್ತೇನೆ. ಇರುವ ಎಲ್ಲ ಪ್ರಕರಣ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ಸುಮ್ಮನಿರಲ್ಲ ಎಂದು ಸಿಎಂ ಯಡಿಯೂರಪ್ಪ ಈ ವೇಳೆ ಎಚ್ಚರಿಕೆ ನೀಡಿದರು.