Advertisement

ಕಲೆಯೇ ಉಸಿರು, ಅದರಿಂದಲೇ ಬದುಕು

04:55 AM Jan 11, 2019 | |

ಸುಬ್ರಹ್ಮಣ್ಯ : ಕಣ್ಣಿಲ್ಲ ಎಂದರೆ ಹೊಟ್ಟೆ ಕೇಳಬೇಕಲ್ಲ? ಸ್ವಾಭಿಮಾನದಿಂದ ದುಡಿಯಲು ಮನಸ್ಸಿದ್ದರೆ ಯಾವ ಅಂಗ ವೈಕಲ್ಯವೂ ಅಡ್ಡಿಯಲ್ಲ. ಶೃಂಗೇರಿಯ ಶ್ರೀ ಶಾರದಾ ದೇವಿ ಕಲಾಸಂಘದ ಕಲಾವಿದರೇ ಇದಕ್ಕೆ ಸಾಕ್ಷಿ.

Advertisement

ಅಲೆಮಾರಿಗಳಾಗಿ ಕಲಾ ಪೋಷಣೆಯ ಜತೆಗೆ ಜೀವನ ನಿರ್ವಹಣೆ ಮಾಡುತ್ತಿರುವ 15 ಕಲಾವಿದರ ಈ ತಂಡದ ಎಲ್ಲರೂ ಅಂಧರೇ ಎಂಬುದೊಂದು ವಿಶೇಷ. ಕಾರ್ಯಕ್ರಮ ನೀಡಿದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಕೂಡಿಟ್ಟುಕೊಂಡು ಜೀವನ ನಡೆಸುತ್ತಾರೆ.

ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘದ 15 ಕಲಾವಿದರು ಎರಡು ವರ್ಷಗಳಿಂದ ರಾಜ್ಯದೆಲ್ಲೆಡೆ ತೆರಳಿ, ಗೀತ ಗಾಯನ ಕಾರ್ಯಕ್ರಮ ನೀಡುತ್ತಿದ್ದಾರೆ. ಇವರು ಒಬ್ಬೊಬ್ಬರು ಒಂದೊಂದು ಕಲೆಯಲ್ಲಿ ಪ್ರತಿಭಾವಂತರು. ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಬೇಕೆಂದು ಪಣ ತೊಟ್ಟಿದ್ದಾರೆ. ಪೇಟೆ – ಪಟ್ಟಣಗಳಲ್ಲಿ ರಸಮಂಜರಿ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುವ ಜತೆಗೆ, ತಮ್ಮ ಹೊಟ್ಟೆಪಾಡಿಗೂ ದಾರಿ ಮಾಡಿಕೊಂಡಿದ್ದಾರೆ.

ಮಂಗಳೂರು, ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮುಂತಾದೆಡೆ ಕಾರ್ಯಕ್ರಮಗಳನ್ನು ನೀಡಿರುವ ಇವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ, ಕಿರುಷಷ್ಠಿ ಸಂದರ್ಭದಲ್ಲಿ ಖಾಸಗಿ ವಾಹನ ನಿಲ್ದಾಣದ ಮುಂಭಾಗದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ತಂಡದ ಏಳು ಸದಸ್ಯರು ಬಂದಿದ್ದರು. ಯಾವ ವೃತ್ತಿಪರ ಕಲಾವಿದನಿಗೂ ಕಡಿಮೆ ಇಲ್ಲದಂತೆ ಅದ್ಭುತವಾದ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ತಂಡದಲ್ಲಿ ಹಾಡುಗಾರರಾದ ಕೃಷ್ಣ, ಯೋಗೀಶ್‌, ಜ್ಯೋತಿ, ಮಂಜುನಾಥ ಪಿ., ಪ್ರವೀಣ್‌, ಚಂದ್ರು, ಅನಿಲ್‌ಕುಮಾರ್‌ ಮತ್ತು ಗಿರೀಶ್‌ ಇದ್ದರು. ಇವರೆಲ್ಲರೂ ಚಲನಚಿತ್ರ ಗೀತೆ, ಜನಪದ ಗೀತೆ, ಮರಾಠಿ ಗೀತೆ, ಹಿಂದಿ ಹಾಡುಗಳ ಜತೆಗೆ ಭಕ್ತಿ ಗೀತೆಗಳಿಗೂ ಮಧುರ ಧ್ವನಿಯಾದರು. ತಮ್ಮೊಂದಿಗೆ ತಂದಿದ್ದ ಸಂಗೀತ ಪರಿಕರಗಳನ್ನು ಮೈದಾನದಲ್ಲಿ ಇರಿಸಿ, ವಾಹನ ಚಾಲಕ ಹಾಗೂ ಸ್ಥಳೀಯರ ಸಹಕಾರ ಪಡೆದು ಸಿದ್ಧಪಡಿಸಿಕೊಂಡು ಹಾಡಲು ಆರಂಭಿಸಿದರು.

Advertisement

ಹಿನ್ನೆಲೆ ಸಂಗೀತ, ಹಾಡು
ಗಣಪತಿ ಸ್ತುತಿ ಬಳಿಕ ಭಕ್ತಿಗೀತೆಗಳು, ಸಿನೆಮಾ ಹಾಡುಗಳು, ಭಾವಗೀತೆಗಳು, ಜಾನಪದ ಗೀತೆಗಳನ್ನು ಪ್ರಸ್ತುಪಡಿಸಿದರು. ಒಂದಕ್ಕಿಂತ ಒಂದು ಉತ್ತಮ ಹಾಡುಗಳ ಮೂಲಕ ರಂಜಿಸಿದರು. ಇವರ ಹಾಡುಗಳನ್ನು ಕೇಳುವಾಗ ಪ್ರೇಕ್ಷಕರು, ಇವರೆಲ್ಲ ನಿಜಕ್ಕೂ ಅಂಧರೇ ಎಂದು ಅಚ್ಚರಿಪಟ್ಟರು. ಮೋಹಕ ಹಾಡುಗಳನ್ನು ಆಲಿಸಲು ಕಲಾಸಕ್ತರೂ ಗುಂಪುಗೂಡಿದ್ದರು. ಇಂದು ಬಹುತೇಕ ರಸಮಂಜರಿ ಕಾರ್ಯಕ್ರಮಗಳಲ್ಲಿ ಕಲಾವಿದರು ಹಿನ್ನೆಲೆ ಸಂಗೀತದ ಟ್ರ್ಯಾಕ್‌ ಬಳಸುತ್ತಾರೆ. ಆದರೆ, ಅಂಧ ಕಲಾವಿದರು ತಾವೇ ಸಂಗೀತ ಸಂಯೋಜನೆ ಮಾಡುತ್ತ ಹಾಡಿ, ಚಪ್ಪಾಳೆ ಗಳಿಸಿದರು. ವೇದಿಕೆ ಮುಂಭಾಗದಲ್ಲಿ ಒಂದು ಹುಂಡಿಯನ್ನು ಇಡಲಾಗಿತ್ತು. ಜನರು ತಮ್ಮ ಕೈಲಾದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ, ಪ್ರೋತ್ಸಾಹಿಸಿದರು.

ಎರಡು ವರ್ಷಗಳಿಂದ ಕಲಾವಿದರ ತಂಡ ರಚಿಸಿ ಊರೂರು ಸುತ್ತಿ ಕಾರ್ಯಕ್ರಮ ನೀಡುತ್ತಿದ್ದೇವೆ. ರಾಜ್ಯದ ವಿವಿಧೆಡೆ 200ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಇದುವರೆಗೆ ನೀಡಿದ್ದೇವೆ. ಸರಕಾರದಿಂದ ನಮ್ಮಂತಹ ಬಡ ಕಲಾವಿದರಿಗೆ ಯಾವ ನೆರವೂ ಸಿಗುತ್ತಿಲ್ಲ ಎಂದು ಕಲಾವಿದರು ನೋವು ತೋಡಿಕೊಂಡರು. ಆದರೆ, ಪ್ರೇಕ್ಷಕರು ನಮ್ಮ ಕಾರ್ಯಕ್ರಮ ನೋಡಿ ಕೈಲಾದಷ್ಟು ದೇಣಿಗೆ ನೀಡುತ್ತಿದ್ದು, ಅದರಿಂದಲೇ ನಮ್ಮ ಜೀವನ ಸಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಮ್ಮಂಥ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನಮ್ಮ ಕಾಲ ಮೇಲೆ ನಿಂತಿದ್ದೇವೆ
ನಾವೆಲ್ಲ ಅಂಧರು ನಿಜ. ಆದರೆ, ನಮಗೂ ಬದುಕುವ ಆಸೆಯಿದೆ. ಯಾರೊಬ್ಬರಿಗೂ ಹೊರೆಯಾಗದ ರೀತಿಯಲ್ಲಿ ನಮ್ಮ ಕಾಲ ಮೇಲೆ ನಾವು ನಿಂತು ಕಲೆಯನ್ನು ವೃತ್ತಿಯಾಗಿಸಿ ಬಂದ ಅಷ್ಟಿಷ್ಟು ಆದಾಯದಿಂದ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದೇವೆ. ನಮಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಯಾವುದೇ ತೊಂದರೆ ನೀಡಬೇಡಿ ಎಂಬುದಷ್ಟೇ ನಮ್ಮ ಕಳಕಳಿ ಎಂದು ತಂಡದ ಕಲಾವಿದ ಎ.ಎನ್‌. ಯೋಗೀಶ್‌ ಮನವಿ ಮಾಡಿದ್ದಾರೆ.

ಕರೆಯಿರಿ ಬರುತ್ತೇವೆ
ಮದುವೆ, ಹಬ್ಬ-ಹರಿದಿನಗಳು, ಹುಟ್ಟುಹಬ್ಬ, ದೇವಸ್ಥಾನಗಳ ಕಾರ್ಯಕ್ರಮ ಮುಂತಾದವುಗಳಲ್ಲಿ ನಮ್ಮ ಸಂಸ್ಥೆಯಿಂದ ಕಾರ್ಯಕ್ರಮ ನೀಡಲು ಸಿದ್ಧರಿದ್ದೇವೆ. ನಮ್ಮಂತಹ ಬಡ ಕಲಾವಿದರಿಗೆ ಅವಕಾಶ ನೀಡಿ. ಕಲೆಗೆ ಪ್ರೋತ್ಸಾಹ ನೀಡುವ ಜತೆಗೆ ನಮ್ಮಂತಹ ಕಲಾವಿದರ ಬದುಕಿಗೂ ದಾರಿಯಾಗುತ್ತದೆ.
 -ಗಿರೀಶ್‌, ಅಂಧ ಕಲಾವಿದ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next