Advertisement

ಉಸ್ತುವಾರಿ ಸಚಿವರಿಂದ ನಗರ ಪ್ರದಕ್ಷಿಣೆ

09:25 PM Sep 25, 2019 | Team Udayavani |

ಚಾಮರಾಜನಗರ: ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಬುಧವಾರ ಜಿಲ್ಲೆಗೆ ಭೇಟಿ ನೀಡಿ ವಿವಿಧ ಯೋಜನೆ, ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿದರು. ತಾಲೂಕಿನ ಬ್ಯಾಡಮೂಡ್ಲು ಸರ್ಕಾರಿ ಶಾಲೆಗೆ ಭೇಟಿ ಕೊಟ್ಟು, ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿದರು.

Advertisement

ಸಚಿವರಲ್ಲಿ ಮನವಿ: ಮೊದಲಿಗೆ ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದ ನದಿ ಬಳಿ ಕುಡಿಯುವ ನೀರಿನ ಯೋಜನೆಗಾಗಿ ಗುರುತಿಸಲಾಗಿರುವ ಲಿಫ್ಟ್ ಪಾಯಿಂಟ್‌, ಅಂತರ್ಜಲ ವೃದ್ಧಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಪರಿಶೀಲನೆ ನಡೆಸಿದರು. ಇದೇ ವೇಳೆ ಶಾಸಕ‌ ಆರ್‌. ನರೇಂದ್ರ ಅವರು ಕುಡಿಯುವ ನೀರಿನ ಯೋಜನೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪ್ರಾಮುಖ್ಯತೆ ಹಾಗೂ ಅಗತ್ಯತೆ ಬಗ್ಗೆ ಸಚಿವರಲ್ಲಿ ಮನವಿ ಮಾಡಿದರು.

ಮಕ್ಕಳೊಂದಿಗೆ ಸಮಾಲೋಚನೆ: ಬಳಿಕ ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಸ್ತುವಾರಿ ಸಚಿವರು ಭೇಟಿ ನೀಡಿದರು. ಶಾಲಾ ಮಕ್ಕಳು ಬ್ಯಾಂಡ್‌ ವಾದನದ ಮೂಲಕ ಸಚಿವರನ್ನು ಸಂಭ್ರಮದಿಂದ ಬರಮಾಡಿಕೊಂಡರು. ತರಗತಿಗಳಿಗೆ ಭೇಟಿ ನೀಡಿದ ಸಚಿವರು ಶಾಲಾ ಮಕ್ಕಳೊಂದಿಗೆ ಪರೀಕ್ಷೆ, ಪಾಠ- ಪ್ರವಚನ ಸಂಬಂಧ ಕೆಲ ಸಮಯ ಸಮಾಲೋಚನೆ ನಡೆಸಿದರು.

ವಿದ್ಯಾರ್ಥಿಗಳಿಗೆ ಕಿವಿಮಾತು: ಪರೀಕ್ಷೆ ಬಗ್ಗೆ ಅನಗತ್ಯ ಭಯ ಪಡಬಾರದು, ಪೂರ್ವ ಸಿದ್ಧತೆಯೊಂದಿಗೆ ಅಧ್ಯಯನ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಸಚಿವರು ಇದೇ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲೆ ಆವರಣದಲ್ಲಿ ಇದ್ದ ಕೈತೋಟವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ ಸಚಿವರು ಹಣ್ಣು- ತರಕಾರಿಯಂತಹ ಗಿಡಗಳನ್ನು ಬೆಳೆಯಲು ಸಲಹೆ ನೀಡಿದರು.

ಇತರೆ ಸೌಲಭ್ಯಕ್ಕೆ ಮನವಿ: ಇದೇ ವೇಳೆ ಶಾಲಾ ಶಿಕ್ಷಕರು ಹೆಚ್ಚುವರಿಯಾಗಿ ಕೊಠಡಿಗಳು ಅಗತ್ಯವಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಇದೇ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಗ್ರಾಮಸ್ಥರು ಬ್ಯಾಡಮೂಡ್ಲುವಿನಲ್ಲಿ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡುವಂತೆ ಮನವಿ ಮಾಡಿದರು. ರಸ್ತೆ, ಆಸ್ಪತ್ರೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕೋರಿ ಮನವಿ ಪತ್ರವನ್ನು ಸಲ್ಲಿಸಿದರು. ಗ್ರಾಮಸ್ಥರ ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವರು ಸಮಸ್ಯೆಗಳ ನಿವಾರಣೆ ಸಂಬಂಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗುವುದಾಗಿ ತಿಳಿಸಿದರು.

Advertisement

ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಭೇಟಿ: ತದನಂತರ ನಗರದ ಡಾ. ಬಿ. ಆರ್‌. ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಶಾಸಕ‌ ಸಿ. ಪುಟ್ಟರಂಗಶೆಟ್ಟಿ ಅವರು ಈ ವೇಳೆ ಕ್ರೀಡಾಂಗಣ ಅಭಿವೃದ್ಧಿ ಸಂಬಂಧ ಕೈಗೊಳ್ಳಬೇಕಿರುವ ವಿಷಯಗಳ ಕುರಿತು ಸಚಿವರೊಂದಿಗೆ ಸಮಾಲೋಚಿಸಿದರು.

ದೊಡ್ಡರಸನ ಕೊಳ ವೀಕ್ಷಣೆ: ನಿರ್ಮಾಣ ಹಂತದಲ್ಲಿರುವ ಖಾಸಗಿ ಬಸ್‌ ನಿಲ್ದಾಣಕ್ಕೂ ಭೇಟಿ ಕೊಟ್ಟು, ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿದರು. ಆದಷ್ಟು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ದೊಡ್ಡರಸನ ಕೊಳ ವೀಕ್ಷಿಸಿದರು.

ಬಳಿಕ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕು ಪಂಚಾಯಿತಿ ಉಪಾಧ್ಯಕ್ಷರೊಂದಿಗೆ ಜಿಲ್ಲೆಯ ಅಭಿವೃದ್ಧಿ ಇನ್ನಿತರ ವಿಷಯಗಳ ಕುರಿತು ಸಭೆ ನಡೆಸಿದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್‌. ನರೇಂದ್ರ, ಎನ್‌. ಮಹೇಶ್‌, ಸಿ. ಎಸ್‌. ನಿರಂಜನ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ. ಎಸ್‌. ಮಹೇಶ್‌, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ. ಬಸವಣ್ಣ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಮಾಲೋಚನೆ ನಡೆಸಿದರು.

ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಬಿ. ಎಚ್‌. ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌. ಡಿ. ಆನಂದ್‌ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಎಲ್‌. ಆನಂದ್‌, ಉಪ ವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ ಇತರರು ಇದ್ದರು.

ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಿ
ಚಾಮರಾಜನಗರ: ಜಿಲ್ಲೆಯನ್ನು ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸಿ, ರಾಜ್ಯದ ಗಮನ ಇತ್ತ ಹರಿಯುವಂತೆ ಮಾಡಬೇಕು. ಇದು ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಯ ಮುಖ್ಯ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದರು. ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸಕಾಲ ಯೋಜನೆಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಅಷ್ಟರ ಮಟ್ಟಿಗೆ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಸ್ನೇಹಿಯಾಗಿ ನಡೆಯುತ್ತಿದೆ. ಅದರಂತೆ ಇತರ ಎಲ್ಲಾ ಕಾರ್ಯಗಳು ಯಾವುದೇ ವಿಳಂಬವಿಲ್ಲದೇ ನಡೆಯಬೇಕು. ಜನರ ಸಮಸ್ಯೆಗಳು ನಿಗದಿತ ಸಮಯದೊಳಗೆ ಪರಿಹಾರವಾಗುವಂತೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ, ಅದನ್ನು ನಿವಾರಿಸುವುದು ನಮ್ಮ ಮುಖ್ಯ ಉದ್ದೇಶವಾಗಬೇಕು. ಅದಕ್ಕಾಗಿ ಕೆಲಸಕ್ಕೆ ಸಮಯದ ಗಡುವು ಹಾಕಿಕೊಳ್ಳದೇ, ಜನರ ಏಳಿಗೆಯ ದೃಷ್ಟಿಯಿಂದ ಹೆಚ್ಚುವರಿ ಸಮಯದಲ್ಲಿ ದುಡಿಯಲು ಸಿದ್ಧರಾಗಬೇಕು ಎಂದು ಸುರೇಶ್‌ಕುಮಾರ್‌ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next