ದೋಟಿಹಾಳ: ಕಳೆದ ಒಂದು ವಾರದಿಂದ ನೀರಿಲ್ಲದ ಕಾರಣ ಶಾಲಾ ಮಕ್ಕಳು ಮಧ್ಯಾಹ್ನದ ಬಿಸಿಯೂಟದ ನಂತರ ಕೈಯಲ್ಲಿ ತಟ್ಟೆ ಹಿಡಿದುಕೊಂಡು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ವಾರದಿಂದ ಕೊಳವೆಬಾವಿ ಮೋಟರ್ ಕೆಟ್ಟು ಹೋಗಿದ್ದು, ಮಧ್ಯಾಹ್ನದ ಬಿಸಿಯೂಟ ಮಾಡಿ ಮಕ್ಕಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಊಟದ ನಂತರ ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದುಕೊಂಡು ಶಾಲಾ ಪಕ್ಕದಲ್ಲಿರುವ ತೋಟಗಳಿಗೆ ಹಾಗೂ ಗ್ರಾಮಕ್ಕೆ ತೆರಳುತ್ತಿದ್ದಾರೆ.
ಶಾಲೆ ಗ್ರಾಮದ ಹೊರವಲಯದಲ್ಲಿ ಇರುವುದರಿಂದ ಶಾಲೆಯ ಹತ್ತಿರ ಯಾವುದೇ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮಕ್ಕಳು ಗ್ರಾಮಕ್ಕೆ ಆಗಮಿಸಿ ನೀರು ಕುಡಿದು, ಕೈ, ತಟ್ಟೆ ತೊಳೆದುಕೊಂಡು ಹೋಗುತ್ತಿದ್ದಾರೆ. ಈ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ತಿಳಿಸಿದರು. ಈ ಬಗ್ಗೆ ಉಪಪ್ರಾಂಶುಪಾಲರಾದ ಎಸ್.ಬಿ. ಮಸರಕಲ್ ಅವರನ್ನು ವಿಚಾರಿಸಿದಾಗ, ಶಾಲಾ ಆರಣದಲ್ಲಿ ಇರುವ ನೀರಿನ ಮೋಟಾರ್ ಪದೇ ಪದೇ ರಿಪೇರಿ ಬರುತ್ತಿದೆ. ಇದರ ಬಗ್ಗೆ ಮಕ್ಕಳ ಹಕ್ಕು ಗ್ರಾಮಸಭೆಯಲ್ಲಿ ಮಕ್ಕಳು ಪ್ರಸ್ತಾಪ ಮಾಡಿದರು ಹಾಗೂ ನಾವು ಕೂಡ ಮನವಿ ಮಾಡಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ನಾವೇ ಶಾಲಾ ಅನುದಾನದಲ್ಲಿ ರಿಪೇರಿ ಮಾಡಿಸುತ್ತೇವೆ ಎಂದು ಹೇಳಿದರು.
ಪಿಡಿಒ ಸ್ಪಷ್ಟೀಕರಣ: ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಾಗೂ ಮಕ್ಕಳ ಹಕ್ಕು ಗ್ರಾಮಸಭೆಯಲ್ಲಿ ಮಕ್ಕಳು ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿರುವುದು ಗಮನಕ್ಕೆ ಬಂದಿಲ್ಲ. ಒಂದು ವೇಳೆ ಶಾಲೆಯಲ್ಲಿ ಮಕ್ಕಳಿಗೆ ನೀರಿನ ತೊಂದರೆ ಇದ್ದಲ್ಲಿ ಕೂಡಲೇ ನೀರಿನ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಗ್ರಾಪಂ ಪಿಡಿಒ ಶಿವಪುತ್ರಪ್ಪ ತಿಳಿಸಿದರು.