ಕೊಪ್ಪಳ: ಬೇಸಿಗೆ ಮುಗಿಯುತ್ತಾ ಬಂದರೂ ಜನರ ನೀರಿನ ಬವಣೆ ಕೊನೆಯಾಗುತ್ತಿಲ್ಲ. ತುಂಗಭದ್ರಾ ಹಿನ್ನೀರು ತಟದಲ್ಲಿರುವ ತಾಲೂಕಿನ ಬೆಟಗೇರಿಯಲ್ಲಿ ನೀರಿನ ಬವಣೆ ಉಲ್ಭಣಿಸಿದ್ದು, ಗ್ರಾಮಸ್ಥರು ನೀರಿಗಾಗಿ ಸಂಪ ಸೇರಿದಂತೆ ಇತರೆ ಸ್ಥಳಗಳತ್ತ ಅಲೆದಾಡುವಂತ ಪರಿಸ್ಥಿತಿ ಎದುರಾಗಿದೆ.
ಪ್ರತಿ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುತ್ತಿದೆ. ಜನತೆ ನೀರಿಗಾಗಿ ಕೆರೆ, ಕಟ್ಟೆ ಬಾವಿಗಳೆ ಇಂದಿಗೂ ಆಸರೆಯಾಗುತ್ತಿವೆ. ಆದರೆ ಪ್ರಸ್ತುತ ವರ್ಷದ ಬರದ ಪರಿಸ್ಥಿತಿ ತೀವ್ರವಾದ ಹಿನ್ನೆಲೆಯಲ್ಲಿ ಅಂತರ್ಜಲ ಪ್ರಮಾಣ ಕುಸಿತ ಕಂಡಿದ್ದು, ಬೋರ್‌ವೆಲ್ ಸೇರಿದಂತೆ ತೆರೆದ ಬಾವಿಗಳಲ್ಲೂ ನೀರು ಬತ್ತಿ ಹೋಗಿದೆ. ಹೀಗಾಗಿ ಜನರ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಮಾತ್ರ ನೀರಿನ ಸಮಸ್ಯೆ ನಿವಾರಣೆ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ ಎನ್ನುವ ಮಾತು ಕೇಳಿ ಬಂದರೂ ಗ್ರಾಮೀಣ ಪ್ರದೇಶದಲ್ಲಿನ ಜನರ ನೀರಿನ ದಾಹ ಇನ್ನೂ ನೀಗಿಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಒಂದು ತಿಂಗಳಿಂದ ನೀರಿನ ಸಮಸ್ಯೆ ಉಲ್ಭಣಿಸಿದೆ. ತುಂಗಭದ್ರಾ ಹಿನ್ನೀರಿನ ತಟದಲ್ಲಿರುವ ಈ ಗ್ರಾಮದಲ್ಲಿ ಮೊದಲು ನೀರಿನ ಸಮಸ್ಯೆ ಅಷ್ಟೊಂದು ಕಾಣಸಿಕೊಂಡಿರಲಿಲ್ಲ. ಆದರೆ ಪ್ರಸಕ್ತ ಬೇಸಿಗೆಯಲ್ಲಿ ನೀರಿನ ತೊಂದರೆ ಎಲ್ಲೆಡೆ ಹೆಚ್ಚಾಗಿದೆ. ಗ್ರಾಮ ವ್ಯಾಪ್ತಿಯಲ್ಲಿ ಮೂರು ಬೋರ್‌ವೆಲ್ ಕೊರೆಸಲಾಗಿತ್ತು. ಆದರೆ ಅಂತರ್ಜಲ ಕುಸಿತದಿಂದ ಎರಡು ಬೋರ್‌ವೆಲ್ ಬತ್ತಿ ಹೋಗಿವೆ. ಇರುವ ಒಂದೇ ಪಂಪ್‌ಸೆಟ್ನಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.
ಸಂಪ್‌ನಲ್ಲೇ ನೀರಿಗೆ ಬಡಿದಾಟ: ಗ್ರಾಮದಲ್ಲಿ ಹಳೆಯದಾದ ಸಂಪ್ ಇದೆ. ತುಂಗಭದ್ರಾ ಹಿನ್ನೀರಿನ ಬೋರ್‌ವೆಲ್ನಿಂದ ಈ ಸಂಪ್‌ಗೆ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಇಲ್ಲಿಂದಲೇ ಗ್ರಾಮದ ಓವರ್ ಟ್ಯಾಂಕ್‌ಗೆ ನೀರು ಪೂರೈಸುವ ವ್ಯವಸ್ಥೆ ಈ ಹಿಂದಿನಿಂದ ಮಾಡಲಾಗಿದೆ. ಆದರೆ ಮೋಟರ್ ದುರಸ್ತಿ ಸೇರಿದಂತೆ ನೀರಿನ ಪೂರೈಕೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಜನತೆ ಸಂಪಗೆ ಬಂದು ನೀರು ತಗೆದುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಪ ಸಂಪೂರ್ಣ ಹಳೆಯದಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇದೇ ಸಂಪ್‌ಗೆ ಬಂದು ನೀರು ತಗೆದುಕೊಂಡು ಹೋಗಬೇಕಿದೆ.
ಸಂಪ್ ಮೇಲ್ಭಾಗದಲ್ಲಿ ಕಿರಿದಾದ ಕೊಳವೆಯಲ್ಲೇ ಜನತೆ ಹಗ್ಗ ಹಾಕಿ ನೀರು ಮೇಲೆತ್ತುವ ಪರಿಸ್ಥಿತಿ ಎದುರಾಗಿದೆ. ಸಂಪ್ ಒಳ ಭಾಗದಲ್ಲಿ ಸಿಮೆಂಟ್ ಉದುರುತ್ತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಗ್ರಾಪಂಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಜನತೆ. ಅಲ್ಲದೇ ಈ ಸಂಪ್ ಒಳಗೆ ಹಿಂದೆ ಹಲ್ಲಿ ಸತ್ತು ಬಿದ್ದಿತ್ತು. ಯಾರೂ ಅದನ್ನು ತೆಗೆದು ಹಾಕಿಲ್ಲ. ನಾವೇ ತೆಗೆದು ಹಾಕುತ್ತಿದ್ದೇವೆ. ಗ್ರಾಪಂ ಅವರು ಇದಕ್ಕೆ ಭದ್ರತೆ ನೀಡಿಲ್ಲ. ಯಾರಾದರೂ ಕಿಡಿಗೇಡಿಗಳು ಸಂಪ ಒಳಗೆ ಕ್ರಿಮಿನಾಶಕ ಹಾಕಿದರೆ ಇಡೀ ಗ್ರಾಮದ ಜನರ ಜೀವಕ್ಕೆ ಕುತ್ತು ಬರಲಿದೆ. ಈ ಬಗ್ಗೆ ಹಲವು ಬಾರಿ ಗ್ರಾಪಂ ಗಮನಕ್ಕೆ ತಂದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಜನತೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಗ್ರಾಪಂ ಪಿಡಿಒ, ಅಧ್ಯಕ್ಷರು ಈ ಬಗ್ಗೆ ಕಾಳಜಿ ವಹಿಸಿ ಸಂಪ ಪುನರ್ ನಿರ್ಮಾಣ ಮಾಡಬೇಕು. ಇಲ್ಲವೇ ಅದಕ್ಕೆ ಭದ್ರತೆ ಒದಗಿಸಬೇಕಾಗಿದೆ.