ಹನೂರು: ಗುಡುಗು ಸಿಡಿಲಿನ ಸಹಿತ ಸುರಿದ ಧಾರಾಕಾರ ಮಳೆಗೆ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದಿರುವ ಘಟನೆ ತಾಲೂಕಿನ ತೋಮಿಯರ್‍ಪಾಳ್ಯ ಸಮೀಪದ ಲಾಸರ್‍ದೊಡ್ಡಿ ಗ್ರಾಮದಲ್ಲಿ ಜರುಗಿದೆ.
ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮಿಯರ್‍ಪಾಳ್ಯ ಸಮೀಪದ ಲಾಸರ್‍ದೊಡ್ಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ವೇಳೆ ಗುಡಗು ಸಿಡಿಲಿನ ಸಮೇತ ಧಾರಾಕಾರ ಮಳೆಯಾಗಿದೆ. ಈ ವೇಳೆ ಗುಡುಗು ಸಿಡಿಲಿನ ಆರ್ಭಟಕ್ಕೆ ರಾಮಸ್ವಾಮಿ ಕುಪ್ಪಮ್ಮ ದಂಪತಿ ವಾಸವಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟುಗಳು, ಮನೆಯ ಒಂದು ಬದಿಯ ಗೋಡೆ, ಮನೆಯ ಗೋಡೆಗೆ ಅಳವಡಿಸಿರುವ ವಿದ್ಯುತ್ ತಂತಿಗಳ ಮಾರ್ಗವರುವ ಕಡೆ ಗೋಡೆಗಳು ಬಿರುಕು ಬಿಟ್ಟಿದೆ. ಅಲ್ಲದೆ ಮನೆಯ ಒಳಗಿದ್ದ ದಿನಬಳಕೆಯ ಬೀರು, ಟಿವಿ, ಫ್ಯಾನ್ ಸೇರಿದಂತೆ ಗೃಹಬಳಕೆ ಉಪಕರಣಗಳಿಗೂ ಹಾನಿಯುಂಟಾಗಿದೆ.
ಇದನ್ನೂ ಓದಿ:ಕೋಳಿ ಕೊಡದ್ದಕ್ಕೆ ಕಾಲು ಮುರಿದ! ಸಿಂಘು ಗಡಿಯಲ್ಲಿ ಮತ್ತೊಂದು ಕೃತ್ಯ
ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ: ಈ ದುರ್ಘಟನೆ ನಡೆದಾಗ ರಾಮಸ್ವಾಮಿ ಮತ್ತು ಆಕೆಯ ಪತ್ನಿ ಕುಪ್ಪಮ್ಮ ಮನೆಯಲ್ಲಿಯೇ ಇದ್ದರು. ಕುಪ್ಪಮ್ಮನ ಮನೆಯ ಒಳಗಡೆ ನಿದ್ರೆಗೆ ಜಾರಿದ್ದರೆ, ರಾಮಸ್ವಾಮಿ ಮನೆಯ ಹೊರಗಡೆ ಮಲಗಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಹಾರಿಗೋಗುತ್ತಿರುವ ಸದ್ದಿಗೆ ಎಚ್ಚರಗೊಂಡ ರಾಮಸ್ವಾಮಿ ಕೂಡಲೇ ಮನೆಯ ಒಳಗಡೆ ಹೋಗಿ ಕುಪ್ಪಮ್ಮ ಅವರನ್ನು ಕರೆತಂದಿದ್ದಾರೆ. ಕುಪ್ಪಮ್ಮನನ್ನು ಹೊರ ಕರೆತರುತ್ತಿದ್ದಂತೆ ಒಂದು ಬದಿಯ ಗೋಡೆ ಕುಸಿದಿದ್ದು, ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.
ಸೂಕ್ತ ಪರಿಹಾರಕ್ಕೆ ಆಗ್ರಹ: ಘಟನೆಯಿಂದಾಗಿ ಅಂದಾಜು 3.5 ಲಕ್ಷದಿಂದ 4 ಲಕ್ಷದವರೆಗೆ ನಷ್ಟ ಸಂಭವಿಸಿದೆ. ಮನೆಯ ಗೋಡೆಯು ಅಲ್ಲಲ್ಲಿ ಬಿರುಕು ಬಿಟ್ಟರುವುದರಿಂದ ಮನೆಯನ್ನು ಸಂಪೂರ್ಣ ಕೆಡವಿ ನಿರ್ಮಾಣ ಮಾಡಬೇಕಿದೆ. ಇದಲ್ಲದೆ ಗೃಹ ಬಳಕೆಯ ವಸ್ತುಗಳೂ ಸಂಪೂರ್ಣವಾಗಿ ಹಾಳಾಗಿವೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕು ಎಂದು ಮನೆಯ ಮಾಲೀಕ ರಾಮಸ್ವಾಮಿ ಆಗ್ರಹಿಸಿದ್ದಾರೆ.