Advertisement
ಎಲ್ಲರಿಗೂ ತಮ್ಮ ಮನೆ ಎಂದರೆ ಅದು ನೆಮ್ಮದಿಯ ತಾಣ. ಪ್ರತಿದಿನ ಒಳ ಪ್ರವೇಶಿಸಿದೊಡನೆ ಹೊರಗಿನ ಕಿರಿಕಿರಿಗಳಿಂದ ಮುಕ್ತಿ ಪಡೆದ ಅನುಭವ ನೀಡುವ ಸ್ಥಳ ಎಂಬ ಭಾವವಿರುತ್ತದೆ. ಅದು ಸ್ವಂತದ್ದು ಆಗಿರಲೇಬೇಕು ಎಂದೇನಿಲ್ಲ, ಒಮ್ಮೆ “ನಮ್ಮದು’ ಎಂಬ ಭಾವನೆ ಬಂದೊಡನೆ ಅದೇನೋ ಒಂದು ಆತ್ಮೀಯತೆ ಬೆಳೆದು ನಮ್ಮಗೆ ರಕ್ಷಣೆ ನೀಡುವ ತಾಣ ಆಗಿರುತ್ತದೆ. ಮನೆ ಎಂದರೆ ಅದು ಗಟ್ಟಿಮುಟ್ಟಾಗಿದ್ದು, ಮಳೆ ಗಾಳಿ ಕಳ್ಳಕಾಕರು ಇರಲಿ, ಭೂಕಂಪವೇ ಆದರೂ ಏನೂ ಆಗದಷ್ಟು ಸದೃಢವಾದದ್ದು ಎಂದೆನಿಸಿರುತ್ತದೆ. ಆದರೆ ಕೆಲವೊಮ್ಮ ಸಣ್ಣಪುಟ್ಟ ಬಿರುಕುಗಳು ಬಿಟ್ಟರೂ, ನಮ್ಮನ್ನು ಆತಂಕ ಕಾಡಲು ತೊಡಗುತ್ತದೆ. ಇನ್ನು ದೊಡ್ಡಬಿರುಕು ಬಿಟ್ಟರಂತೂ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗುತ್ತದೆ. ಕೆಲವೊಮ್ಮೆ ದಿನಪತ್ರಿಕೆಗಳಲ್ಲಿ ಮನೆ ವಾಲಿದ ಇಲ್ಲವೇ ಕುಸಿದ ಸುದ್ದಿ ಓದಿದರೆ, ಸಹಜವಾಗೇ ನಮ್ಮ ಮನೆಯ ಭದ್ರತೆಯ ಬಗೆಗೇ ಯೋಚಿಸುವಂತಾಗುತ್ತದೆ. ನಮ್ಮ ಮನೆ ಗಟ್ಟಿಮುಟ್ಟಾಗಿರಲು ಕೆಲ ಮೂಲಭೂತ ಅಂಶಗಳ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ಸಣ್ಣಪುಟ್ಟ ನಿವೇಶನಗಳಲ್ಲಿ ಒಳಚರಂಡಿ ಸಂಪರ್ಕ ಇಲ್ಲದಿದ್ದರೆ ಗುಂಡಿ ತೋಡಿ ಕೊಳಚೆ ನೀರು ಹಾಯಿಸಿದರೆ ಕ್ರಮೇಣ ಅದು ಪಾಯಕ್ಕೆ ಅಪಾಯಕಾರಿ ಆಗಬಲ್ಲದು. ಬಹುತೇಕ ಬಗೆಯ ಮಣ್ಣುಗಳು ನೀರು ಕುಡಿದರೆ ತಮ್ಮ ಭಾರ ಹೊರುವ ಶಕ್ತಿಯನ್ನು ಸ್ವಲ್ಪವಾದರೂ ಕಳೆದುಕೊಳ್ಳುತ್ತವೆ. ಮಣ್ಣಿನಲ್ಲಿ ಸೂಕ್ಷ್ಮಾಣು ಅಂದರೆ ಜೇಡಿ ಮಣ್ಣಿನ ಅಂಶ ಹೆಚ್ಚಾದಷ್ಟೂ ಅದರ ಭಾರ ಹೊರುವ ಶಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಜೇಡಿಮಣ್ಣಿನ ನೆಲ ಇದ್ದಲ್ಲಿ ಪಾಯ ಅಗೆಯುವುದು ಕಷ್ಟ ಎಂದು ಸಾಮಾನ್ಯವಾಗೇ ಕಡಿಮೆ ಆಳಕ್ಕೆ ಅಗೆಯಲಾಗಿರುತ್ತದೆ. ಇದರ ಜೊತೆಗೆ ಸ್ಯಾನಿಟರಿ ನೀರನ್ನು ಇಂಗಿಸಲು ಗುಂಡಿ ತೋಡಿದರೆ, ಇಂಗಿದ ನೀರು ಬಹುತೇಕ ಪಾಯಕ್ಕೇ ಸೇರಿ, ಅದನ್ನು ದುರ್ಬಲಗೊಳಿಸುತ್ತದೆ. ಕ್ರಮೇಣ ಗೋಡೆ ಇಲ್ಲವೇ ಪಾಯದಲ್ಲಿ ಬಿರುಕು ಬಿಡುವುದು, ಗೋಡೆ ವಾಲುವುದು, ಇಲ್ಲ ನೆಲಹಾಸು- ನಡೆದಾಡಿದರೆ ಕೆಳಗೆ “ಡಬ್ ಡಬ್’ ಎಂದು ಶಬ್ದ ಬಂದು ಕೆಳಗೆ ಮಣ್ಣು ಇಳಿದಿರುವುದೂ ಗೊತ್ತಾಗುತ್ತದೆ. ಪಾಯದ ಪಕ್ಕದಲ್ಲಿ ಇಂಗು ಗುಂಡಿ ಹಾಗೂ ನೀರು ಸೋರಿಬರುವ ಇತರೆ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಮಾಡಬಾರದು. ಪಾಯಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ
ಗಟ್ಟಿಮುಟ್ಟಾದ ಮಣ್ಣು ಇರುವ ಜಾಗದಲ್ಲಿ ಮಳೆ ನೀರು ಹರಿದುಹೋದರೂ ಹೆಚ್ಚಿಗೆ ಏನೂ ತೊಂದರೆ ಆಗುವುದಿಲ್ಲ. ಆದರೆ ಮೃದುಮಣ್ಣು ಇರುವ ಸ್ಥಳದಲ್ಲಿ ಸೂರಿನಿಂದ ಕೆಳಗಿಳಿದು ಪಾಯದ ಪಕ್ಕದಲ್ಲಿ ಹರಿದು ಹೋದರೂ, ಅದರಲ್ಲಿ ಒಂದಂಶ ಕೆಳಗೆ ಇಂಗಿ, ಮನೆಗೆ ಹಾನಿ ಮಾಡಬಹುದು. ಈ ಕಾರಣದಿಂದ ಮನೆಯ ಸುತ್ತ ಕಡ್ಡಾಯವಾಗಿ “ಫ್ಲಾಗಿಂಗ್ ಕಾಂಕ್ರಿಟ್’ ಅಂದರೆ ಸುಮಾರು ಮೂರು ಇಂಚು ದಪ್ಪ ಹಾಗೂ ಒಂದೂವರೆ ಅಡಿ ಅಗಲದ ಕಾಂಕ್ರಿಟ್ ಹಾಸನ್ನು ಇಳಿಜಾರಿನೊಂದಿಗೆ ಹಾಕಬೇಕು. ಆಗ ಎಷ್ಟೇ ಜೋರಾಗಿ ಮಳೆ ಬಂದರೂ, ಗೋಡೆ ಹಾಗೂ ಮಳೆನೀರನ್ನು ಹೊತ್ತುತರುವ ಕೊಳೆಯಿಂದ ಬರುವ ನೀರನ್ನೂ ಪಾಯದಿಂದ ದೂರ ತಳ್ಳಿ ಹಾನಿಯಾಗದಂತೆ ತಡೆಯುತ್ತದೆ.
Related Articles
ಸ್ಯಾನಿಟರಿ ನೀರು ಸರಾಗವಾಗಿ ಹರಿದು ಹೋಗಲಿ ಎಂದು ಕೊಳವೆಗಳನ್ನು ಅಳವಡಿಸಿದ್ದರೂ, ಅವು ಕಾಲಕ್ರಮೇಣ ಕಟ್ಟಿಕೊಂಡು ಇಲ್ಲವೆ ಸಂದಿಗಳು ಸವೆದು ನೀರು ಸೋರಲು ಶುರುಮಾಡಬಹುದು. ಇದು ಭೂಮಟ್ಟದಿಂದ ಕೆಳಗೆ ಆಗುವುದರಿಂದ ನಮಗೆ ಇದರ ಪರಿವೆ ಇರುವುದಿಲ್ಲ. ಆದರೆ ಕಾಲಕ್ರಮೇಣ ಸ್ವಲ್ಪ ಸ್ವಲ್ಪ ಸೋರಿ, ಇಡೀ ಪಾಯ ತೇವವಾಗಿ ಮನೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿ ನಾವು ನಮ್ಮ ಮನೆಯಲ್ಲಿ ಟಾಯ್ಲೆಟ್‌ಗಳ ಹೊರಗೆ ಹಾಗೂ ನಿವೇಶನದ ಮೂಲೆಗಳಲ್ಲಿ ಹಾಕುವ ಇನ್‌ಸ್ಪೆಕ್ಷನ್ ಚೇಂಬರ್‌ಗಳನ್ನು ಆಗಾಗ ತೆಗೆದು, ನೀರು ಸರಾಗವಾಗಿ ಹರಿದುಹೋಗುತ್ತಿದೆಯೇ ಎಂದು ಪರಿಶೀಲಿಸಬೇಕು. ಕೆಲವೊಮ್ಮೆ ಒಂದು ಬಕೆಟ್ ನೀರನ್ನು ಒಂದು ಚೇಂಬರ್ ನಲ್ಲಿ ಹಾಕಿದರೆ, ಅದು ಮೂರನೆ ಚೇಂಬರ್ ಗೆ ಬರುವ ಹೊತ್ತಿಗೆ ಕೇವಲ ಒಂದು ಚೆಂಬಿನಷ್ಟು ಮಾತ್ರ ಆಗಿ ಹರಿಯುತ್ತಿದ್ದರೆ, ಆಗ ನಮಗೆ ಈ ಎರಡು ಸ್ಥಳದ ಮಧ್ಯೆ ಎಲ್ಲೋ ಸೋರಿಕೆ ಇದೆ ಎಂಬುದು ತಿಳಿಯುತ್ತದೆ. ಇಂಥ ಸಂದರ್ಭದಲ್ಲಿ, ಅನಿವಾರ್ಯವಾಗಿ ಹಳೆಯ ಕೊಳವೆಗಳನ್ನು ತೆಗೆದು, ಹೊಸದನ್ನು ಹಾಕಬೇಕು, ಇಲ್ಲವೆ ಕಡೇ ಪಕ್ಷ ಎಲ್ಲಿ ಸೋರಿಕೆ ಇದೆ ಇಂದು ಗಮನಿಸಿ, ಅಲ್ಲಾದರೂ ಮತ್ತೆ ಸೋರದಂತೆ ಸಿಮೆಂಟ್ ಗಾರೆ ತುಂಬಬೇಕು.
Advertisement
ಪಾಯದ ಕೊರೆತಮನೆಗಳಿಗೆ ಆಗಬಹುದಾದ ಮತ್ತೂಂದು ಅಪಾಯಕಾರಿ ಸಂಗತಿ ಎಂದರೆ- ಕೊಳಚೆ ನೀರಿನೊಂದಿಗೆ ಪಾಯದ ಮಣ್ಣು ಹೊರಗೆ ಹರಿದುಹೋಗುವುದು! ಹೆಗ್ಗಣ ಇಲ್ಲವೇ ಚರಂಡಿ ಇಲಿ ಎಂಬ ಪ್ರಭೇದದ ದೊಡ್ಡ ಗಾತ್ರದ ಇಲಿಗಳು ಒಳಚರಂಡಿಗಳಲ್ಲೇ ವಾಸವಿದ್ದು ಇವು ಗೂಡುಕಟ್ಟಲು ಮಣ್ಣು ಅಗೆಯುತ್ತವೆ. ಹೀಗೆ ತೋಡಿದ ಮಣ್ಣು ನೀರಿನಲ್ಲಿ ಕೊಚ್ಚಿಹೋಗುವುದರಿಂದ ನಮಗೆ ಅದರ ಅರಿವೇ ಆಗುವುದಿಲ್ಲ! ಕಾಲಕ್ರಮೇಣ ಇಲಿಗಳ ಸಂತತಿ ಬೆಳೆದಂತೆಲ್ಲ, ಗೂಡುಗಳ ಸಂಖ್ಯೆ ಹೆಚ್ಚಿ ನಾಲ್ಕಾರು ಡೊಂಗರುಗಳನ್ನು ಮಾಡಿಬಿಡಬಹುದು. ಈ ಡೊಂಗರುಗಳು ಪಾಯದ ಭಾರ ಹೊರುವ ಶಕ್ತಿಯನ್ನು ಕಡಿಮೆ ಮಾಡಿ ಮನೆ ಒಂದು ಕಡೆ ವಾಲುವಂತೆ ಮಾಡಬಹುದು. ಅಕ್ಕಪಕ್ಕದಿಂದ ಪಾಯಕ್ಕೆ ತೊಂದರೆ
ಪಾಯದ ಮಣ್ಣು ಘನವಸ್ತು ಎಂದೇ ನಮಗೆ ಭಾಸವಾದರೂ ಕೆಲವೊಮ್ಮೆ ಅದು ದ್ರವದಂತೆ ವರ್ತಿಸುವುದೂ ಇದೆ. ಬರೀ ನೀರು ಸೇರಿಕೊಂಡರೆ ಹೀಗೆ ಆಗುವುದಲ್ಲದೆ, ಭಾರ ಹೆಚ್ಚಾದರೂ, ಮಣ್ಣು ಮರಳು ಹರಿದುಹೋಗುವಂತೆ ಅಕ್ಕಪಕ್ಕಕ್ಕೆ ಸರಿದು, ಪಾಯ ಕುಸಿಯಬಹುದು. ನೀರಿನಲ್ಲಿ ಸಾವಿರಾರು ಟನ್ ಭಾರದ ದೊಡ್ಡ ದೊಡ್ಡ ಹಡಗುಗಳು ಯಾವುದೇ ತೊಂದರೆ ಇಲ್ಲದೆ ತೇಲುತ್ತಾದರೂ ಅದರ ತಳಭಾಗ ಸಾಕಷ್ಟು ವಿಸ್ತಾರವಾಗಿ ಇರಬೇಕಾಗುತ್ತದೆ. ಜೊತೆಗೆ ಒಂದೆರಡು ತೂತು ಬಿದ್ದರೂ ಮುಳುಗುವುದು ಖಂಡಿತ. ಅದೇ ರೀತಿ, ಪಾಯವನ್ನೂ ಕೂಡ ನಮ್ಮ ಅಕ್ಕ ಪಕ್ಕದ ಮನೆಗಳು ಹಿಡಿದಿಟ್ಟುಕೊಂಡಿರುತ್ತವೆ. ಹಾಗೆಯೇ ನಮ್ಮ ಮನೆಯ ಪಾಯವೂ ಪಕ್ಕದ ಮನೆಯ ಪಾಯಕ್ಕೆ ಆಧಾರವಾಗಿರುತ್ತದೆ. ಹೀಗೆ ಸಮತೋಲನ ಕಾಯ್ದುಕೊಂಡಿರುವ ವ್ಯವಸ್ಥೆಯಲ್ಲಿ ಒಂದು ಡೊಂಗರ ಅಂದರೆ ಅಕ್ಕ ಪಕ್ಕದಲ್ಲಿ ಪಾಯ ತೆಗೆಯುವುದು, ಸಂಪ್ ಮಾಡುವುದು ಇತ್ಯಾದಿಗೆಂದು ಮಣ್ಣು ಇಲ್ಲವೇ ಇತರೆ ಆಧಾರಗಳನ್ನು ತೆಗೆದರೆ, ಮಣ್ಣು ಪಕ್ಕಕ್ಕೆ ಸರಿದು ಪಾಯ ವಾಲಬಹುದು. ಸದೃಢವಾಗಿ ಕಟ್ಟಿದ ಮನೆ ನೂರಾರು ವರ್ಷ ಬಾಳಿಕೆ ಬರುವುದು ನಿಶ್ಚಿತ. ಆದರೆ ಮನೆಯ ಬುನಾದಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬಾœರಿಯೂ ನಮ್ಮ ಮೇಲೆಯೇ ಇರುತ್ತದೆ. ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ. ಜಯರಾಮ್