ಹಳೆಯಂಗಡಿ: ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ತಡೆಗೋಡೆಯೊಂದು ಪಕ್ಕದ ಮನೆಯ ಮೇಲೆಯೇ ಕುಸಿದು ಸಾಕಷ್ಟು ಹಾನಿ ಉಂಟಾದ ಘಟನೆ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ನಗರದ ಬಳಿ ನಡೆದಿದೆ.
ನಿರಂತರವಾಗಿ ಸುರಿದ ಮಳೆಯ ಕಾರಣ ಸ್ಥಳೀಯ ನಿವಾಸಿ ಸುರೇಶ್ ದೇವಾಡಿಗ ಅವರ ಮನೆಗೆ ಪಕ್ಕದ ಮನೆಯ ಆವರಣ ಗೋಡೆಯು ಏಕಾಏಕಿ ಅವರ ಮನೆಯ ಗೋಡೆಯ ಮೇಲೆ ಕುಸಿದು ಬಿದ್ದ ಪರಿಣಾಮ ಗೋಡೆಯು ಸಂಪೂರ್ಣವಾಗಿ ಬಿರುಕು ಬಿಟ್ಟು ಮನೆಯೇ ಕುಸಿತ ಕಾಣುವಂತಹ ಆತಂಕ ಸೃಷ್ಟಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಬನ್ನಂಜೆ ಗರಡಿ ರಸ್ತೆಯ 30ಕ್ಕೂ ಅಧಿಕ ಮನೆಗಳು ಜಲಾವೃತ: ಉಕ್ಕಿ ಹರಿಯುತ್ತಿದೆ ಇಂದ್ರಾಣಿ ನದಿ
ವಿಷಯ ತಿಳಿದ ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿ ತತ್‌ಕ್ಷಣ ಕಾರ್ಯಾಚರಣೆ ನಡೆಸುವ ಮೂಲಕ ಗೋಡೆಯ ಮೇಲೆ ಬಿದ್ದಿದ್ದ ಕಲ್ಲು ಮಣ್ಣುಗಳ ಅವಶೇಷಗಳನ್ನು ತೆರೆವುಗೊಳಿಸಿ ಹೆಚ್ಚಿನ ಅಪಾಯಕ್ಕೆ ತಡೆ ಒಡ್ಡಿದ್ದಾರೆ. ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ ಇನ್ನಷ್ಟು ಕುಸಿಯಲು ಅವಕಾಶ ನೀಡದೆ ಸಹಕರಿಸಿದ್ದಾರೆ.
ಘಟನೆಯಿಂದ ಸುರೇಶ್ ದೇವಾಡಿಗ ಅವರ ಮನೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಎಂ.ಎ. ಖಾದರ್,. ಅಬ್ದುಲ್ ಅಝೀಝ್ ಬೊಳ್ಳೂರು, ಗ್ರಾಮ ಕರಣಿಕ ಮೋಹನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯವರಿಗೆ ಪರಿಹಾರದ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.