Advertisement

ಚಿತ್ರಗಳ ಮೂಲಕ ಪರಿಸರ ಕಾಳಜಿಯ ಪಾಠ

01:45 AM Aug 24, 2018 | Karthik A |

ಕುಂದಾಪುರ: ಒಂದೆಡೆ ಪ್ರಕೃತಿಯ ಮೇಲಿನ ಮಾನವ ಹಸ್ತಕ್ಷೇಪದಿಂದ ಕುಸಿದು ಬೀಳುತ್ತಿರುವ ಪ್ರಕೃತಿ. ಅದನ್ನೇ ನಂಬಿದ್ದ ಮಾನವನ ಬದುಕು. ಇನ್ನೊಂದೆಡೆ ಅದೇ ಪ್ರಕೃತಿ ಉಳಿಸಿ ಅದು ನಮ್ಮನ್ನು ಉಳಿಸುತ್ತದೆ ಎಂದು ಸಂದೇಶ ಸಾರುವ ಪರಿಸರಪ್ರಿಯರು. ಇದೆಲ್ಲದರ ಮಧ್ಯೆ ಗಮನ ಸೆಳೆಯುತ್ತಿರುವುದು ವಂಡ್ಸೆಯ ಕಾಲೇಜಿಗೆ ಬಂದು ವಿದೇಶೀಯರು ಪ್ರಕೃತಿ ಉಳಿಸಿ ಎಂದು ಸಾರುತ್ತಿರುವ ಸಂದೇಶ.

Advertisement

ಮಾನವನ ಪರಿಸರ ಮಾರಕ ಚಟುವಟಿಕೆಗಳು ಸೃಷ್ಟಿಸುವ ದುರಂತಗಳಿಗೆ ಕೇರಳ ಮತ್ತು ಕೊಡಗಿನ ಪ್ರವಾಹ ಮತ್ತು ಭೂ ಕುಸಿತಗಳು ನಮ್ಮೆದುರಿಗಿವೆ. ನಿಸರ್ಗದ ನಿಯಮಗಳನ್ನು ಮೀರಿ ಪ್ರಕೃತಿಯ ವಿರುದ್ಧ ಯುದ್ಧ ಹೂಡುವ ಪ್ರವೃತ್ತಿಯನ್ನು ಮಾನವ ರೂಢಿಸಿಕೊಂಡಿದ್ದಾನೆ. ‘ಪ್ರಕೃತಿಯ ನಾಶ, ನಮ್ಮ ನಾಶ’ ಎಂಬ ಸಾಮಾನ್ಯ ಪ್ರಜ್ಞೆ ನಮಗಿಲ್ಲವೆಂದಲ್ಲ. ದುರಾಸೆ, ಲಾಭ ಬಡುಕತನ, ಅತಿ ಬುದ್ಧಿವಂತಿಕೆ ಇವೆಲ್ಲ ನಮ್ಮನ್ನು ನಮ್ಮೆದೆಯ ಒಳದನಿಗೆ ನಮ್ಮನ್ನು ಕಿವುಡಾಗಿಸಿವೆ. ಈಗಿನದು ಮಾನವ ಬುದ್ಧಿವಂತಿಕೆಯನ್ನು ಪ್ರಕೃತಿ ಅಣಕಿಸುತ್ತಿದೆಯೇನೋ ಎಂದು ಮನಸ್ಸು ಕಳವಳಗೊಂಡಿರುವ ಸಂದರ್ಭ. ಪ್ರಕೃತಿಯೆಡೆಗಿನ ಕಾಳಜಿಯ ಸೂಕ್ಷ್ಮ ಭಾವನೆಗಳಿಗೆ ನಮ್ಮ ಮನಸ್ಸು, ಹೃದಯ ತೆರೆದಿಟ್ಟುಕೊಳ್ಳುವ ಸಂದರ್ಭ.


ಈ ಭಾವನೆಗಳನ್ನೆಲ್ಲ ಸಾಂಕೇತಿಕವಾಗಿ ಚಿತ್ರಗಳ ಮೂಲಕ ಬಿಂಬಿಸುವ ಯತ್ನ ವಿದೇಶಿ ವಿದ್ಯಾರ್ಥಿಗಳು ಮಾಡಿದ್ದಾರೆ. ಸರಕಾರಿ  ಪ.ಪೂ. ಕಾಲೇಜು ವಂಡ್ಸೆಯಲ್ಲಿ ತರಗತಿ ಕೋಣೆಯ ಗೋಡೆಗಳನ್ನೇ ಕ್ಯಾನ್ವಾಸನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಪಾಠ ಹೇಳಲು ಎಫ್‌.ಎಸ್‌.ಎಲ್‌. ಇಂಡಿಯಾದ ಕುಂದಾಪುರ ಶಾಖೆಯ ಸ್ವಯಂಸೇವಕರು ಪ್ರಯತ್ನಿಸಿದ್ದಾರೆ.

ಭಾರತಕ್ಕೆ ಅಧ್ಯಯನ ಪ್ರವಾಸಕ್ಕೆಂದು ಬಂದಿರುವ ಇಟಲಿಯ ಕಿಯಾರಾ, ಜರ್ಮನಿಯ ಅನ್ನಾ ಮತ್ತು ಫ್ಲೋರಿಯಾನಾ ತಮ್ಮ ಸಮಾಜ ಸೇವಾ ಕಾರ್ಯದ ಭಾಗವಾಗಿ ಇಲ್ಲಿ ಚಿತ್ರ ರಚನೆ ಮಾಡಿದ್ದಾರೆ. ಕೃಷಿ ಅಧ್ಯಯನ ವಿದ್ಯಾರ್ಥಿಗಳಾದ ಇವರು ಸಹಜವಾಗಿ ಪ್ರಕೃತಿ ಕಾಳಜಿಯುಳ್ಳವರು. ನಿರಂತರ ಮೂರು ದಿನಗಳ ಕಾಲ ಕಾಲೇಜಿನ ಗೋಡೆಗಳಲ್ಲಿ ಚಿತ್ರ ರಚಿಸಿರುವ ಈ ಮೂವರು ‘ಪ್ಲಾಸ್ಟಿಕ್‌ ತ್ಯಾಜ್ಯ ತೊಲಗಿಸಿ’ ಎಂಬ ಸಂದೇಶವಿರುವ ಸುಮಾರು ಎಂಟೂವರೆ ಅಡಿ ಎತ್ತರದ ಇನ್ನೊಂದು ಚಿತ್ರವನ್ನೂ ರಚಿಸಿದ್ದಾರೆ. ಮರ ಮತ್ತು ಮನುಷ್ಯನನ್ನು ಸಮ್ಮಿಳಿತಗೊಳಿಸಿದ ಹೃದ್ಯಚಿತ್ರಣವೊಂದನ್ನು ಬಿಡಿಸಿದ್ದಾರೆ. ಮರದ ಬುಡವೇ ಮನುಷ್ಯನಂತೆ. ಮನುಷ್ಯನ ಹೃದಯ ಮರದ ಆತ್ಮದಂತೆ ಬರೆದಿದ್ದಾರೆ. ಅಲ್ಲೇ ಸಮುದ್ರ, ಸೂರ್ಯೋದಯ ಹೀಗೆ ಅನೇಕ ಸಂದೇಶಗಳನ್ನು ಸಾರುವ ಚಿತ್ರ ಇದಾಗಿದೆ.

ಪ್ರಕೃತಿ ಕಾಳಜಿ ಚಿತ್ರಗಳಿಗಿದೆ
‘ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಕಾಳಜಿ, ಸೂಕ್ಷ್ಮತೆ ಹಾಗೂ ಬದ್ಧತೆ ಹೊಂದಿರಬೇಕು. ಪ್ರಕೃತಿಯೆಡೆಗೆ ತುಡಿಯುವ ಅರಿವಿನ ಗಿಡವೊಂದನ್ನು ತಮ್ಮ ಹೃದಯದಲ್ಲಿ ಸದಾ ಹಸಿರಾಗಿಡಬೇಕು. ಮುಖ್ಯವಾಗಿ ಯುವ ಮನಸ್ಸುಗಳಲ್ಲಿ ಪ್ರಕೃತಿ ಕಾಳಜಿಯನ್ನು, ಸೂಕ್ಷ್ಮ ಭಾವನೆಗಳನ್ನು ಎಚ್ಚರಿಸುವ ಆಶಯ ಈ ಚಿತ್ರಗಳಿಗಿದೆ’.
– ಕಿಯಾರಾ, ಇಟಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next