Advertisement

ಮೆಟ್ರೋಗೆ ಮರ ಕಡಿಯುವುದನ್ನು ವಿರೋಧಿಸಿ ವಾಕಥಾನ್‌

11:20 AM Aug 13, 2017 | |

ಮಹದೇವಪುರ: ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ರೀಚ್‌-1ಗೆ ಐಟಿಪಿಎಲ್‌ ಮುಖ್ಯರಸ್ತೆಯಲ್ಲಿ ಕಾಮಗಾರಿಗೆ ಅಡ್ಡಲಾಗಿರುವ 60ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ವೈಟ್‌ಫೀಲ್ಡ್‌ ನಿವಾಸಿಗಳು ವೃಕ್ಷ ವೈದ್ಯ ವಿಜಯ್‌ ನಿಶಾಂತ್‌ ನೇತೃತ್ವದಲ್ಲಿ ಶನಿವಾರ ವಾಕತ್ತಾನ್‌ ನಡೆಸಿದರು.

Advertisement

ಬೆಳಗ್ಗೆ 8ಕ್ಕೆ ಐಟಿಪಿಎಲ್‌ ಕ್ರಿಕೆಟ್‌ ಮೈದಾನದಿಂದ ಆರಂಭಗೊಂಡ ವಾಕತ್ತಾನ್‌ ಹೋಪ್‌ ಫಾರ್ಮ್ವರೆಗೂ ತೆರಳಿ ಅಂತ್ಯವಾಯಿತು. ಮೆಟ್ರೋ ಕಾಮಗಾರಿಯ ಎರಡನೇ ಹಂತದ ಯೋಜನೆ ಐಟಿಪಿಎಲ್‌ ಮುಖ್ಯರಸ್ತೆಯ ಬದಿಯಲ್ಲಿ ನಡೆಯುತ್ತಿದೆ. ಇದಕ್ಕೆ 60ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆಯಿದ್ದು ಮರಗಳನ್ನು ಕಡಿಯಲು ಬಿಎಂಆರ್‌ಸಿ ಮುಂದಾಗಿದೆ. ಆದರೆ, ಮರಗಳನ್ನು ಕಡಿಯುವ ಬದಲಿಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು. 

ಈ ವೇಳೆ ಮಾತನಾಡಿದ ವೃಕ್ಷ ವೈದ್ಯ ವಿಜಯ್‌ ನಿಶಾಂತ್‌, ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಬೆಂಗಳೂರು ದೇಶದಲ್ಲೇ ಮುಂದಿದೆ. ಆದರೆ, ಪರಿಸರ ರಕ್ಷಣೆಯಲ್ಲಿ ಆಧುನಿಕತೆ ಅಳವಡಿಸಿಕೊಂಡಿಲ್ಲ. ವೈಟ್‌ಫೀಲ್ಡ್‌, ಸಿಲ್ಕ್ಬೋರ್ಡ್‌ನಲ್ಲಿ ನಡೆಯಲಿರುವ ಮೆಟ್ರೋ ಕಾಮಗಾರಿ ಹಾಗೂ ಎಚ್‌ಎಎಲ್‌, ಇಸ್ರೋ ಜಂಕ್ಷನ್‌ಗಳಲ್ಲಿ ಕೈಗೊಳ್ಳಲಿರುವ ಸಿಗ್ನಲ್‌ ಮುಕ್ತ ಕಾರಿಡಾರ್‌ ಸಂಚಾರ ವ್ಯವಸ್ಥೆಯ ಸಲುವಾಗಿ ಈಗಾಗಲೇ ಹಲವು ಮರಗಳನ್ನು ಕಡಿಯಲಾಗಿದೆ, ಮತ್ತಷ್ಟನ್ನು ಕಡಿಯಲು ಗುರುತು ಮಾಡಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು. 

ಹೈಕೋರ್ಟ್‌ ಆದೇಶದ ಉಲ್ಲಂಘನೆ: ಯಾವುದೇ ಯೋಜನೆಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೂ ವೃಕ್ಷ ಸಮಿತಿಯ ಅನುಮತಿ ಬೇಕು, ಸಮಿತಿಯು ಸಾರ್ವಜನಿಕ ಸಭೆ ನಡೆಸಿ ಜನಾಭಿಪ್ರಾಯ ಪಡೆಯಬೇಕೆಂಬ ನಿಮಯವಿದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿ ಒಂದೇ ಯೋಜನೆಯನ್ನು ಒಂದಕ್ಕಿಂತ ಹೆಚ್ಚು ಹಂತಗಳನ್ನಾಗಿ ವಿಂಗಡಿಸುವ ಮೂಲಕ ಈ ನಿಯಮದಿಂದ ತಪ್ಪಿಸಿಕೊಳ್ಳುತ್ತಿವೆ.

ಕಡಿಯ ಬೇಕಾದ ಮರಗಳನ್ನು 49ಕ್ಕಿಂತ ಕಡಿಮೆಯಿರುವಂತೆ ತೋರಿಸುತ್ತಿದ್ದಾರೆ. ಈ ವಿಚಾರ ಗೊತ್ತಿದ್ದರೂ ಅರಣ್ಯ ಘಟಕದವರು ಮರಗಳನ್ನು ಕಡಿಯಲು ಅನುಮತಿ ನೀಡುತ್ತಿದ್ದಾರೆ ಇದು ಹೈಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆ. ಹಸಿರು ಉಳಿಸುವ ಹೈಕೋರ್ಟ್‌ನ ಉದ್ದೇಶವನ್ನೇ ಅಣಕಿಸಲಾಗುತ್ತಿದೆ ಎಂದು ವೃಕ್ಷ ಪ್ರೇಮಿ ವಿ.ಆರ್‌.ಜಾಯ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next