ತುಮಕೂರು: ಸಿದ್ದಗಂಗಾಮಠದ ಕಾಯಕ ಯೋಗಿ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ(111ವರ್ಷ) ಸೋಮವಾರ ಶಿವೈಕ್ಯರಾಗಿದ್ದು, ಮಂಗಳವಾರ ಸಂಜೆ ಲಿಂಗಶರೀರದ ಕ್ರಿಯಾ ಸಮಾಧಿಯ ಅಂತಿಮ ವಿಧಿ ವಿಧಾನ ವೀರಶೈವ ಲಿಂಗಾಯತ ಆಗಮೋಕ್ತ ಸಂಪ್ರದಾಯದ ಪ್ರಕಾರ ನೆರವೇರಲಿದೆ.
ಶ್ರೀಗಳ ಕ್ರಿಯಾ ಸಮಾಧಿ ಹೇಗೆ ನಡೆಯುತ್ತೆ?
ಸಿದ್ದಗಂಗಾಶ್ರೀಗಳ ಆಸೆಯಂತೆಯೇ ಕ್ರಿಯಾ ವಿಧಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಮೊದಲಿಗೆ ನಾಡಿನ ಪುಣ್ಯ ನದಿಗಳಿಂದ ತರಲಾದ ತೀರ್ಥಗಳಿಂದ ಪಾರ್ಥಿವ ಶರೀರಕ್ಕೆ ಪುಣ್ಯಸ್ನಾನ ನೆರವೇರಿಸಲಾಗುತ್ತದೆ. ಬಳಿಕ ಹೊಸ ಕಾಷಾಯ ವಸ್ತ್ರ ಧಾರಣೆ ಮಾಡಲಾಗುತ್ತದೆ. ತದನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳಿಗೆ ಮಠದ ಅಧಿಕಾರ ಹಸ್ತಾಂತರ ನೆರವೇರಿಸಲಾಗುತ್ತದೆ.
ಈ ಎಲ್ಲಾ ವಿಧಿವಿಧಾನ ನಡೆದ ನಂತರ ಪಾರ್ಥಿವ ಶರೀರವನ್ನು ಗದ್ದುಗೆ ಒಳಗೆ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. ಕೈಗೆ ಇಷ್ಟಲಿಂಗವನ್ನು ಇಟ್ಟು, ತಂಬಿಟ್ಟು ಚಗಲಿ. ಹಸಿ ಕಡೆಕಾಳು ನೈವೇದ್ಯ ನೆರವೇರಿಸಲಾಗುತ್ತದೆ. ನಂತರ ರುದ್ರಾಕ್ಷ ಚಮಕ ಪಠಣ ಮಾಡುತ್ತ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ಮಾಡಲಾಗುತ್ತದೆ. ನಂತರ ಮಹಾಮಂಗಳಾರತಿ ನಡೆಸಲಾಗುತ್ತದೆ.
ಪಾರ್ಥಿವ ಶರೀರದ ಕೆಳಭಾಗದಲ್ಲಿ ಉಪ್ಪು, ಮೆಣಸು, ಪುಷ್ಪಾಂಜಲಿ ವಿಭೂತಿ ಗಟ್ಟಿಗಳಿಂದ ಪಾರ್ಥಿವ ಶರೀರ ಮುಚ್ಚಲಾಗುತ್ತದೆ. ಪಾರ್ಥಿವ ಶರೀರದ ಶಿರೋ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಲಾಗುವುದು. ಅದರ ಮೇಲೆ ಮಣ್ಣು ಹಾಕಿದ ನಂತರ ಚಪ್ಪಡಿ ಕಲ್ಲನ್ನು ಇಟ್ಟು ಗದ್ದುಗೆ ನಿರ್ಮಾಣ ಮಾಡಲಾಗುತ್ತದೆ. ಗದ್ದುಗೆ ಮೇಲೆ ಲಿಂಗ ಸ್ಥಾಪನೆ ಮಾಡಲಾಗುತ್ತದೆ.