Advertisement

ಕುಶಾಲನಗರದಿಂದ ಕಾರವಾರದವರೆಗೆ ಪಾದಯಾತ್ರೆ

06:35 AM Jan 05, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮತ್ತು ಇದರ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೊಡಗು ಜಿಲ್ಲೆ ಕುಶಾಲನಗರದಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದವರೆಗೆ ಪಾದಯಾತ್ರೆ ನಡೆಸಲು ಬಿಜೆಪಿ ಮುಂದಾಗಿದೆ.

Advertisement

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, ಪಾದಯಾತ್ರೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ, ಹತ್ಯೆಗಳನ್ನು ನಡೆಸುತ್ತಿರುವ ತಾಲೀಬಾನಿಗಳ ಬಗ್ಗೆ ಮೃದು ಧೋರಣೆ ಹೊಂದಿರುವುದರಿಂದ ಮಂಗಳೂರಿನ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್‌ ರಾವ್‌ ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ 24 ಹತ್ಯೆಗಳು ನಡೆದಿವೆ. ಆದ್ದರಿಂದ ಜನರನ್ನು ರಕ್ಷಿಸಲು ವಿಫ‌ಲವಾಗಿರುವ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಮತ್ತು ನರಹಂತಕ ತಾಲೀಬಾನಿಗಳಿಂದ ರಾಜ್ಯವನ್ನು ರಕ್ಷಿಸಿ ಎಂಬ ಒತ್ತಾಯದೊಂದಿಗೆ ಈ ಹೋರಾಟ ನಡೆಸಲು ಪಕ್ಷ ಮುಂದಾಗಿರುವುದಾಗಿ ತಿಳಿಸಿದರು.

ಹತ್ಯೆಗಳಿಗೆ ಕಾಂಗ್ರೆಸ್‌ ಮೃದು ನೀತಿ ಕಾರಣ:
ಮೈಸೂರಿನ ರಾಜು ಹತ್ಯೆಯಿಂದ ಆರಂಭವಾಗಿ ದೀಪಕ್‌ರಾವ್‌ವರೆಗೆ ಇದುವರೆಗೆ 24 ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಈ ಹತ್ಯೆಗಳ ಹಿಂದೆ ಕೆಎಫ್ಡಿ, ಪಿಎಫ್ಐ, ಎಸ್‌ಡಿಪಿಐ ಮುಂತಾದ ಸಂಘಟನೆಗಳ ಕೈವಾಡವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಆದರೂ ಸರ್ಕಾರ ಇಂತಹ ತಾಲೀಬಾನಿಗಳ ಬಗ್ಗೆ ಮೃದು ಧೋರಣೆ ಹೊಂದಿದೆ.2015ರ ಜೂನ್‌ ತಿಂಗಳಲ್ಲಿ ಎಸ್‌ಡಿಪಿಐ, ಕೆಎಫ್ಡಿ, ಪಿಎಫ್ಐ ಸಂಘಟನೆಗಳ 1600ಕ್ಕೂ ಹೆಚ್ಚು ಜನರ ಮೇಲಿನ 175 ಕೇಸ್‌ಗಳನ್ನು ವಾಪಸ್‌ ಪಡೆದ ಬಳಿಕ ಈ ಸರಣಿ ಹತ್ಯೆಗಳ ಸಂಖ್ಯೆ ಹೆಚ್ಚಾಯಿತು ಎಂದು ಆರೋಪಿಸಿದರು.

ರಾಷ್ಟ್ರವಾದಿ ಸಂಘಟನೆಗಳು ಬಲಗೊಂಡರೆ ಕಾಂಗ್ರೆಸ್‌ ರಾಜಕೀಯವಾಗಿ ದುರ್ಬಲವಾಗುತ್ತವೆ ಎಂಬ ಕಾರಣದಿಂದ ಎಸ್‌ಡಿಪಿಐ, ಪಿಎಫ್ಐ, ಕೆಎಫ್ಡಿ ಮಧ್ಯೆ ಒಳಒಪ್ಪಂದ ನಡೆದಿದೆಯೇ? ನೀವು ನಮಗೆ ವೋಟ್‌ಬ್ಯಾಂಕ್‌ ಆಗಿ, ನಿಮಗೆ ನಾವು ರಕ್ಷಣೆ ಕೊಡುತ್ತೇವೆ ಎಂದು ಕಾಂಗ್ರೆಸ್‌ ಕುಟಿಲ ರಾಜಕೀಯ ನೀತಿ ಅನುಸರಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅದು ಇಲ್ಲದೇ ಇದ್ದರೆ ಈ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ಏಕೆ ಹಿಂಪಡೆಯಲಾಯಿತು? ಅವರೇನು ದೇಶಭಕ್ತರೇ, ರೈತ ಹೋರಾಟಗಾರರೇ, ನಾಡು-ನುಡಿಯ ಹೋರಾಟಗಾರರೇ ಎಂದು ಪ್ರಶ್ನಿಸಿದರು.

Advertisement

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚುತ್ತಿವೆ. ಗೌರಿ ಲಂಕೇಶ್‌, ಎಂ.ಎಂ.ಕಲಬುರ್ಗಿಯವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಯಾರಿಗೂ ರಕ್ಷಣೆ ನೀಡಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ. ಆದ್ದರಿಂದ ನೈತಿಕ ಹೊಣೆ ಹೊತ್ತು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
– ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next