ಬೆಂಗಳೂರು: “ಇಂದಿನ ರಾಜಕಾರಣಿಗಳ ನಡೆ-ನುಡಿ ಅತ್ಯಂತ ತಳಮಟ್ಟಕ್ಕೆ ಕುಸಿದಿದೆ,’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ ಬೇಸರ ವ್ಯಕ್ತಪಡಿಸಿದರು. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಿಂದಿನ ರಾಜಕಾರಣಿಗಳು ಮಾತನಾಡುತ್ತಿದ್ದ ರೀತಿ ಮತ್ತು ನಡತೆಗೂ ಈಗಿನ ನಾಯಕರುಗಳು ಮಾತನಾಡುತ್ತಿರುವ ರೀತಿಗೂ ಸಾಕಷ್ಟು ವ್ಯತ್ಯಾಸ ಇದೆ. ವಿವಿಧ ಪಕ್ಷಗಳ ನಾಯಕರು ಮಾನ-ಮರ್ಯಾದೆ ಇಲ್ಲವೆಂದು ಪರಸ್ಪರ ಬೈದಾಡಿಕೊಳ್ಳುತ್ತಾರೆ. ಈ ಮಧ್ಯೆ ಟಿಕೆಟ್ ಕೊಡುವಾಗಲೇ “ಎಷ್ಟು ಕೋಟಿ ಖರ್ಚು ಮಾಡುತ್ತೀರಾ’ ಎಂದು ಕೇಳಲಾಗುತ್ತದೆ. ಜತೆಗೆ ಪಾರ್ಟಿಗೆ ಫಂಡ್ ಬೇರೆ ಕೊಡಬೇಕು. ಇದೆಲ್ಲವನ್ನೂ ನೋಡಿದರೆ, ಒಟ್ಟಾರೆ ಇವರಾರಿಗೂ ಮಾನ-ಮರ್ಯಾದೆ ಇಲ್ಲವೆಂಬುದು ಸ್ಪಷ್ಟ ಎಂದು ಹೇಳಿದರು.
ಉತ್ತಮ ಆಡಳಿತ ನಡೆಸಿದ್ದೇವೆ ಎಂದು ಯಾರು ಎಷ್ಟೇ ಹೇಳಿಕೊಳ್ಳಬಹುದು. ಆದರೆ, ಅಂತಿಮವಾಗಿ ತಾಲ್ಲೂಕು ಕಚೇರಿಗಳಲ್ಲಿ ಈಗಲೂ ಲಂಚ ಕೊಡದೆ ಕೆಲಸ ಆಗುತ್ತದೆಯೇ? ಪ್ರತಿ ಹಂತದಲ್ಲೂ ಇದು ನಡೆಯುತ್ತದೆ. ಹಾಗಿದ್ದರೆ, ಇವರೆಲ್ಲರಿಗೂ (ಅಧಿಕಾರಿಗಳಿಗೆ) ಕಮೀಷನ್ ಸಂಗ್ರಹಿಸಿ ಕೊಡಿ ಎಂದು ಆಡಳಿತ ನಡೆಸುವವರು ಸೂಚನೆ ನೀಡಿದ್ದಾರೆಯೇ ಎಂದು ಕೇಳಿದ ಕೃಷ್ಣ, ಇಷ್ಟೆಲ್ಲಾ ಕಣ್ಮುಂದೆ ನಡೆಯುತ್ತಿದ್ದರೂ ಇದರ ವಿರುದ್ಧ ಹೋರಾಟ ಮಾಡುವ ಸ್ಥಿತಿಯಲ್ಲಿ ನಾವಿಲ್ಲ.
ಯಾಕೆಂದರೆ, ಜಾತಿ ಹೆಸರಲ್ಲಿ ಜನರನ್ನೂ ಒಡೆಯಲಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ರಾಜಕಾರಣಿಗಳ ಮೇಲೆ ಜನರಿಗೆ ನಂಬಿಕೆ ಹೋಗಿದೆ. ಸಮಾಜದ ಹಿತದೃಷ್ಟಿಯಿಂದ ಸಾಹಿತ್ಯ ಕ್ರಾಂತಿಯ ಅವಶ್ಯಕತೆ ಇದೆ. ಇದಕ್ಕೆ ಕಾಲವೂ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ಲೇಖಕರು ಪೆನ್ನಿನ ಮೂಲಕ ಕ್ರಾಂತಿಯ ಕಿಡಿ ಹಚ್ಚಬೇಕಿದೆ. ಅನೇಕ ರಾಷ್ಟ್ರಗಳಲ್ಲಿ ಇದು ಸಾಬೀತು ಕೂಡ ಆಗಿದೆ ಎಂದರು.
ರಾಜಕಾರಣ ಗಳಿಕೆ ದಂಧೆ; ಕಂಬಾರ: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ರಾಜಕಾರಣ ಕೆಲವರಿಗೆ ಹಣ ಗಳಿಕೆಯ ದಂಧೆ ಆಗಿಬಟ್ಟಿದೆ. ಆದರೆ, ಅದೊಂದು ಜನರ ಸೇವೆ ಮಾಡಲು ಇರುವ ಅಪರೂಪದ ಅವಕಾಶ ಎಂದು ತಿಳಿಸಿದರು. “ಪರಸ್ಪರ ದೂಷಣೆ, ಗಳಿಕೆಯೇ ರಾಜಕಾರಣವಲ್ಲ; ಇದರಲ್ಲಿ ಖರೇತನದಿಂದ ಹೋರಾಡಬೇಕು. ಖರೇತನದಿಂದ ಆಟ ಆಡಬೇಕು.
ಆಗ ಅದರ ಮಜಾನೇ ಬೇರೆ. ಅದು ಕೊಳಕಾದರೆ, ರಾಜಕಾರಣವೇ ಅನ್ನಿಸಿಕೊಳ್ಳುವುದೇ ಇಲ್ಲ’ ಎಂದು ಸೂಚ್ಯವಾಗಿ ಹೇಳಿದ ಅವರು, ಪ್ರಜಾಪ್ರಭುತ್ವ ಒಪ್ಪಿಕೊಂಡಾಗಲೇ ನಾವೆಲ್ಲರೂ ರಾಜಕಾರಣಿ ಆಗಿಬಿಟ್ಟಿದ್ದೇವೆ. ಒಂದಿಲ್ಲೊಂದು ರೀತಿಯಲ್ಲಿ ಅದು ನಮ್ಮ ಜೀವನದಲ್ಲಿ ಸೇರಿಕೊಂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಅಭಿನಂದನಾ ಭಾಷಣ ಮಾಡಿದರು.