Advertisement

ದಸರಾ ಉತ್ಸವದಲ್ಲಿ ವಾಲಿ ಮೋಕ್ಷ

10:27 AM Oct 17, 2019 | mahesh |

ಸಮಾಜ ಮಂದಿರ ಸಭಾ ಮೂಡಬಿದಿರೆ ಇದರ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಅಂಗವಾಗಿ ಜರುಗಿದ ಪಾರ್ತಿಸುಬ್ಬ ವಿರಚಿತ ವಾಲಿ ಮೋಕ್ಷ ಆಖ್ಯಾನವು ಉತ್ತಮ ಕಲಾವಿದರ ಸಂಯೋಜನೆ , ಉತ್ತಮ ನಿರ್ವಹಣೆ ಹಾಗೂ ಪ್ರಬುದ್ಧ ಪ್ರೇಕ್ಷಕರ ಉಪಸ್ಥಿತಿಯಿಂದ ಒಟ್ಟಂದದ ಯಶಸ್ಸಿಗೆ ಕಾರಣವಾಯಿತು .

Advertisement

ಸೀತಾನ್ವೇಷಣೆಗೆ ಹೊರಟ ಶ್ರೀರಾಮ , ಲಕ್ಷ್ಮಣರು ಕಬಂಧ , ಶಬರಿಯರ ಸೂಚನೆಯಂತೆ ಋಷ್ಯಮೂಕ ಪರ್ವತದಲ್ಲಿ ಸುಗ್ರೀವನನ್ನು ಭೇಟಿಯಾಗಿ , ತುಲ್ಯಾರಿ ಮಿತ್ರತ್ವ ಬೆಳೆಸುತ್ತಾರೆ . ಸುಗ್ರೀವನ ಶತ್ರುವಾದ ವಾಲಿಯನ್ನು ಕೊಂದು , ಸುಗ್ರೀವನಿಗೆ ಕಿಷ್ಕಿಂಧೆಯ ಪಟ್ಟ ಕೊಡಿಸಿ , ಆ ಮೂಲಕ ಕಪಿಸೇನೆಯ ಸಹಾಯದೊಂದಿಗೆ ಸೀತಾಮಾತೆಯನ್ನು ಶ್ರೀರಾಮನಿಗೆ ಒಪ್ಪಿಸಲು ಸುಗ್ರೀವ ನೆರವಾಗುವುದು ವಾಲಿ ಮೋಕ್ಷ ಪ್ರಸಂಗದ ಕಥಾವಸ್ತು . ಶ್ರೀರಾಮನಾಗಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರು ಪ್ರಸಂಗದ ನಡೆಯಲ್ಲೇ ನಿರ್ವಹಿಸಿ ಮಿಂಚಿದರು .ರಾಮನ ಧೀಮಂತ ವ್ಯಕ್ತಿತ್ವ , ಪರಾಕ್ರಮ ಎಲ್ಲವನ್ನೂ ಚೆನ್ನಾಗಿ ಚಿತ್ರಿಸಿದರು . ಸುಗ್ರೀವನಾಗಿ ಉಜ್ರೆ ಅಶೋಕ ಭಟ್ಟರು ಉತ್ತಮವಾಗಿ ನಿರ್ವಹಿಸಿ ಮೆಚ್ಚುಗೆ ಗಳಿಸಿದರು .

ಶ್ರೀರಾಮ – ಸುಗ್ರೀವ ಸಂಭಾಷಣೆಯು ಆಕರ್ಷಕವಾಗಿತ್ತು . ಸುಗ್ರೀವನಾಗಿ ಅಶೋಕ ಭಟ್ಟರು , ಮಾಯಾವಿಯೊಂದಿಗೆ ಯುದ್ಧ ಮಾಡಲು ವಾಲಿಯ ಗುಹೆಗೆ ಹೋದಾಗ , ಗುಹೆಯಿಂದ ರಕ್ತ ಹೊರ ಬಂದುದು ನೋಡಿದ ಕಾರಣ ವಾಲಿ ಸತ್ತಿರಬಹುದೆಂದೆಣಿಸಿ ಆ ಗುಹೆಯ ದ್ವಾರದಲ್ಲಿ ದೊಡ್ಡ ಬಂಡೆಕಲ್ಲನ್ನು ಇಟ್ಟೆ ಎಂದಾಗ ಶ್ರೀರಾಮನಾಗಿ ಕುಕ್ಕುವಳ್ಳಿಯವರು , ವಾಲಿಯನ್ನು ಕೊಂದ ಮಾಯಾವಿಗೆ ನೀನು ಇಟ್ಟ ಕಲ್ಲು ಸರಿಸಲು ಅಸಾಧ್ಯವೇ ಎಂದಾಗ ಭಟ್ಟರು ,ಕಪಿಗಳು ಇಟ್ಟ ಕಲ್ಲನ್ನು ಸರಿಸಲು ಇನ್ನೊಂದು ಕಪಿಗೆ ಮಾತ್ರ ಸಾಧ್ಯ .ಮಾಯಾವಿಗೆ ಅದು ಸಾಧ್ಯವಾಗದು . ಒಂದು ವೇಳೆ ಸತ್ತದ್ದು ಮಾಯಾವಿಯಾದರೆ , ವಾಲಿಗೆ ಆ ಕಲ್ಲನ್ನು ಸರಿಸಲು ಸಾಧ್ಯ ಎಂಬ ಯೋಚನೆಯಿಂದ ಬಂಡೆ ಕಲ್ಲನ್ನು ಇಟ್ಟಿದ್ದೆ ಎಂದು ಹೊಸ ಸಾಧ್ಯತೆಯನ್ನು ವಾದದ ಮೂಲಕ ಹೇಳಿದರು . ಸಪ್ತಜನಾಶ್ರಮದ ದಾರಿಯಾಗಿ ಧರ್ಮಿಷ್ಠರು ಮಾತ್ರ ಹೋಗಲು ಸಾಧ್ಯ . ಆದ ಕಾರಣ ನನಗೆ ಬರಲು ಅಳುಕುಂಟಾಗುತ್ತದೆ ಎಂದು ಭಟ್ಟರು ಹೇಳಿದಾಗ , ಕುಕ್ಕುವಳ್ಳಿಯವರು ,ನೀನು ಧರ್ಮಕ್ಕೆ ವಿರುದ್ಧವಾಗಿ ವರ್ತಿಸಿದ್ದಿಯಾ ಎಂದಾಗ ಉಜ್ರೆಯವರು ಹಾಗಲ್ಲ , ನನ್ನ ಅಣ್ಣ ವಾಲಿಯು ಜೀವಂತನಾಗಿರುವಾಗಲೇ ಆತನಿಗೆ ಪಿಂಡ ಅರ್ಪಿಸಿದ ಅಳುಕು ಎಂದದ್ದು ಮೆಚ್ಚುಗೆ ಮೂಡಿಸಿತು .ಆದರೂ ಸುಗ್ರೀವನು ಶ್ರೀರಾಮಚಂದ್ರನಲ್ಲಿ ಸಂಭಾಷಣೆ ಮಾಡುವಾಗ ಇನ್ನಷ್ಟು ವಿನಯತೆ ತೋರಿದ್ದರೆ ಚೆನ್ನಾಗಿತ್ತು ಎನಿಸಿತು . ವಾಲಿಯಾಗಿ ಹಿರಿಯ ಅರ್ಥಧಾರಿಗಳಾದ ಡಾ| ಪ್ರಭಾಕರ ಜೋಷಿಯವರ ನಿರ್ವಹಣೆ ಉತ್ತಮ ಮಟ್ಟದಲ್ಲಿತ್ತು . ವಾಲಿ – ಸುಗ್ರೀವರ ಯುದ್ಧದ ಸಂಭಾಷಣೆಯು ಹಲವಾರು ಹೊಸ ವಿಚಾರಗಳಿಗೆ ದಾರಿ ಮಾಡಿ ಕೊಟ್ಟಿತು .ಶ್ರೀರಾಮನ ನಡೆಯನ್ನು ಖಂಡಿಸಿ ಹೇಳುವ ಭಾಗವು ಚೆನ್ನಾಗಿ ಮೂಡಿಬಂತಲ್ಲದೆ ಡಾ| ಜೋಷಿಯವರ ವಾಲಿ ಪಾತ್ರದ ಅನುಭವವು ಎದ್ದು ಕಂಡಿತು . ತಾರೆಯಾಗಿ ಉದಯೋನ್ಮುಖ ಕಲಾವಿದರಾದ ಹರೀಶ ಬಳಂತಿಮೊಗರು ಅವರ ಅರ್ಥದಲ್ಲಿ ಭಾವನೆ ಇತ್ತು . ಪತಿವ್ರತೆ ಹೆಣ್ಣೊಬ್ಬಳ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು . ಭಾಗವತಿಕೆಯಲ್ಲಿ ರವಿಚಂದ್ರ ಕನ್ನಡಿಕಟ್ಟೆಯವರು ಸುಶ್ರಾವ್ಯವಾಗಿ ಹಾಡಿ ಮನ ಗೆದ್ದರು . ಕೆಲವೊಂದು ಹಾಡುಗಳನ್ನು ಅಗರಿ ಶೈಲಿಯಲ್ಲಿ ಹಾಡಿ ರಂಜಿಸಿದರು . ಚಿತ್ರತರಾಂಗಿ ಕೇಳ್‌ ಬಾಲೆ… , ಜಾಣನಹುದಹದೋ… ಮುಂತಾದ ಪದ್ಯಗಳು ಉತðಷ್ಟವಾಗಿತ್ತು . ಚೆಂಡೆಯಲ್ಲಿ ದಯಾನಂದ ಮಿಜಾರು ಹಾಗೂ ಮದ್ದಲೆಯಲ್ಲಿ ಚೈತನ್ಯಕೃಷ್ಣ ಪದ್ಯಾಣರ ಕೈ ಚಳಕವು ಚೇತೋಹಾರಿಯಾಗಿದ್ದು ಪದ್ಯಗಳಿಗೆ ಪೂರಕವಾಗಿತ್ತು . ಚಕ್ರತಾಳದಲ್ಲಿ ಪುರುಷೋತ್ತಮ ಆಚಾರಿ ಸಹಕರಿಸಿದರು .

ಎಂ .ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next