Advertisement

ವಕ್ಫ್ ಬೋರ್ಡ್‌ ಆಸ್ತಿ ಅಭಿವೃದ್ಧಿಗೆ ಬಳಕೆ: ಸಚಿವ ಜಮೀರ್‌

09:53 AM Mar 06, 2019 | Team Udayavani |

ಹರಿಹರ: ರಾಜ್ಯಾದ್ಯಂತ ವಿವಿಧೆಡೆ ಹಂಚಿ ಹೋಗಿರುವ ವಕ್ಫ್ಬೋರ್ಡ್‌ ಆಸ್ತಿಗಳ ದಾಖಲೆ ಸಂಗ್ರಹಿಸಿ ಕ್ರಮಬದ್ಧಗೊಳಿಸಿ ಬಡ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್‌ ಅಹಮದ್‌ ತಿಳಿಸಿದರು.

Advertisement

ಹಾವೇರಿಯಲ್ಲಿ ಫೆ. 9ರಂದು ಆಯೋಜಿಸಿರುವ ಚುನಾವಣಾ ರ್ಯಾಲಿಯ ಪರಿಶೀಲನೆಗೆ ತೆರಳುವ ಮಾರ್ಗ ಮಧ್ಯ ಶಾಸಕ ಎಸ್‌. ರಾಮಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಬೋರ್ಡ್‌ ಆಸ್ತಿಗಳನ್ನು ಹದ್ದುಬಸ್ತ್ ಮಾಡಿಸಿ ಸಮಾಜದ ಬಡವರಿಗೆ ಸೂರು ಕಲ್ಪಿಸುವ ಯೋಜನೆ ರೂಪಿಸಲಾಗುವುದು ಎಂದರು.
 
ರಾಜ್ಯಾದ್ಯಂತ ಜನವಸತಿ ಪ್ರದೇಶದ ಸಮೀಪವಿರುವ ವಕ್ಫ್  ಬೋರ್ಡ್‌ಗೆ ಸೇರಿದ ಭೂಮಿಯಲ್ಲಿ 20 ಸಾವಿರ ಮನೆಗಳನ್ನು ಕಟ್ಟಿಸುವ ಗುರಿ ಹೊಂದಿದೇªವೆ. ಈ ಯೋಜನೆಗಾಗಿ ಬಜೆಟ್‌ನಲ್ಲಿ 1 ಸಾವಿರ ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅನುದಾನ ಲಭ್ಯವಾಗಿಲ್ಲ. 

ಆದರೂ ಮುಖ್ಯಮಂತ್ರಿಗಳು ಈ ಯೋಜನೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು. ವಕ್ಫ್ ಬೋರ್ಡ್‌ನ 4863 ಆಸ್ತಿಗಳು ಖಾತೆ ಹಾಗೂ ಪಹಣಿಯಾಗಿಲ್ಲ. ಬೆಂಗಳೂರು ನಗರದಲ್ಲೇ ಸುಮಾರು 2 ಸಾವಿರ ಕೋಟಿ ಬೆಲೆ ಬಾಳುವ 42 ಆಸ್ತಿಗಳ ದಾಖಲೆಗಳೇ
ಇರಲಿಲ್ಲ. ಈಗ ನನ್ನ ಪ್ರಯತ್ನದಿಂದ 36 ಖಾತೆಗಳು ನೋಂದಣಿಯಾಗಿವೆ ಎಂದು ಹೇಳಿದರು.

ವಕ್ಫ್  ಬೋರ್ಡ್‌ನ ಒಟ್ಟು 2,900 ಕೋಟಿ ರೂ. ಅನುದಾನಲ್ಲಿ 1,400 ಕೋಟಿ ರೂ. ಅನುದಾನವನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ. ಪ್ರತಿ ತಾಲೂಕಿನಲ್ಲಿ ಮಾಹಿತಿ ಕೇಂದ್ರ, ಅಬ್ದುಲ್‌ ಕಲಾಂ ಅಜಾದ್‌ ವಸತಿಯುತ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ತಾಲೂಕಿನಲ್ಲಿ ಭೂಮಿಯ ಸಮಸ್ಯೆ ಬಗೆಹರಿದರೆ ಸುಸಜ್ಜಿತ ಅಬ್ದುಲ್‌ ಕಲಾಂ ಅಜಾದ್‌ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.

ಈಗಾಗಲೇ ರಾಜ್ಯದಿಂದ ಹಜ್‌ ಯಾತ್ರೆಗಾಗಿ 6,700 ಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಹೆಚ್ಚುವರಿ 2 ಸಾವಿರ ಯಾತ್ರಿಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

Advertisement

ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಕೆಯಿಂದ ಪಡಿತರದ ಅಪವ್ಯಯ ತಪ್ಪಿ, ಸರ್ಕಾರಕ್ಕೆ 580 ಕೋಟಿ ರೂ. ಆದಾಯ ಬಂದಿದೆ. ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕಮೀಷನ್‌ ಹೆಚ್ಚಳ ಮಾಡಲಾಗಿದೆ. ಪಡಿತರ ಕಾಳಸಂತೆ ದಂಧೆಯಲ್ಲಿ ತೊಡಗಿರುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ  ಕಠಿಣ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಧಾರವಾಡ ಹಾಗೂ ಹಾವೇರಿ ಲೋಕಸಭೆ ಕ್ಷೇತ್ರಗಳ ಮಧ್ಯ ಭಾಗದ ಬಂಕಾಪುರದಲ್ಲಿ ಮಾರ್ಚ್‌ 9ರಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರ ಚುನಾವಣಾ ಪ್ರಚಾರ ಆಯೋಜಿಸಲಾಗಿತ್ತು. ಆದರೆ, ವರಿಷ್ಠರ ನಿರ್ಣಯದಂತೆ ಈ ಸಭೆಯನ್ನು ಹಾವೇರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹುಸಿ ಭರವಸೆಗಳಿಂದ ಮತದಾರರು ಆಕ್ರೋಶಗೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟ 22 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಶಾಸಕ ಎಸ್‌.ರಾಮಪ್ಪ, ನಗರಸಭೆ ಸದಸ್ಯರಾದ ಬಿ.ಕೆ. ಸೈಯ್ಯದ್‌ ರೆಹಮಾನ್‌, ಸೈಯದ್‌ ಎಜಾಜ್‌, ಎಸ್‌.ಎಂ. ವಸಂತ್‌, ಬ್ಲಾಕ್‌ ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ಎಲ್‌.ಬಿ. ಹನುಮಂತಪ್ಪ, ಗ್ರಾಮಾಂತರ ಘಟಕ ಅಧ್ಯಕ್ಷ ಅಬೀದ್‌ ಅಲಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸೀಫ್‌ ಜುನೇದಿ, ಮುಖಂಡರಾದ ಕೆ. ಸನಾವುಲ್ಲಾ, ಸೈಯ್ಯದ್‌ ಜಾಕೀರ್‌ ಅಹಮದ್‌, ಅಲಿ ಹಾಶ್ಮೀ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next