Advertisement

ISRO: ಏಳಿ, ಎದ್ದೇಳಿ ವಿಕ್ರಮ್‌, ಪ್ರಜ್ಞಾನ್‌! ಲ್ಯಾಂಡರ್‌, ರೋವರ್‌ ಎಚ್ಚರಿಸಲು ಇಸ್ರೋ ಯತ್ನ

11:35 PM Sep 20, 2023 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಇಳಿದಿರುವಂಥ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಕತ್ತಲು ಸರಿದು ಬೆಳಕು ಮೂಡುವ ಸಮಯ ಸಮೀಪಿಸಿದೆ. ಅಲ್ಲಿ ಸೂರ್ಯೋದಯವಾಗುತ್ತಿದ್ದಂತೆ, ನಮ್ಮ ವಿಕ್ರಮ್‌ ಮತ್ತು ಪ್ರಜ್ಞಾನ್‌ ನಿದ್ದೆಯಿಂದ ಎದ್ದೇಳುವರೇ ಎಂಬ ಕುತೂಹಲ ಎಲ್ಲರದ್ದು!

Advertisement

ಹೌದು, ಸೆ. 22ರ ಶುಕ್ರವಾರ ಚಂದ್ರನಲ್ಲಿ ಸೂರ್ಯೋ ದಯವಾಗಲಿದೆ. ಸದ್ಯಕ್ಕೆ ಸುಷುಪ್ತ ಸ್ಥಿತಿಯಲ್ಲಿರುವ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಅಂದು ಮರುಚಾಲನೆ ಗೊಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ. ಒಂದು ವೇಳೆ, ಇವೆರಡೂ ಎಚ್ಚೆತ್ತು ಮತ್ತೆ ತಮ್ಮ ಕೆಲಸವನ್ನು ಆರಂಭಿಸಿದರೆ, ಅದು ಇಸ್ರೋದ ಮಟ್ಟಿಗೆ ದೊಡ್ಡ ಯಶಸ್ಸೇ ಸರಿ. ಚಂದಿರನ ಮೇಲ್ಮೆ„ನಲ್ಲಿ ಮತ್ತಷ್ಟು ಪ್ರಯೋಗಗಳನ್ನು ಕೈಗೊಳ್ಳಲು ಇಸ್ರೋಗೆ ಇದರಿಂದ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ.

ಜು.14ರಂದು ಉಡಾವಣೆಯಾದ ಚಂದ್ರ ಯಾನ-3 ಈಗಾಗಲೇ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಶಶಾಂಕನ ಮೇಲ್ಮೆ„ನಲ್ಲಿ ಕೆಲವು ಅಧ್ಯಯನಗಳನ್ನೂ ನಡೆಸಿ, ದತ್ತಾಂಶಗಳನ್ನು ಭೂಮಿಗೆ ರವಾನಿಸಿದೆ. ಅನಂತರ ಅಲ್ಲಿ ಸೂರ್ಯಾಸ್ತವಾದ ಕಾರಣ ವಿಕ್ರಮ್‌ ಮತ್ತು ಪ್ರಜ್ಞಾನ್‌ ಅನ್ನು ಸುಷುಪ್ತ ಸ್ಥಿತಿಗೆ ತರಲಾಗಿತ್ತು. ಈಗ ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯ ಉದಯಿಸುತ್ತಿರುವ ಕಾರಣ, ವಿಕ್ರಮ್‌ ಮತ್ತು ಪ್ರಜ್ಞಾನ್‌ನ ಬ್ಯಾಟರಿಗಳು ರೀಚಾರ್ಜ್‌ ಆಗುವ ಸಾಧ್ಯತೆಗಳಿವೆ. ನಿಗದಿತ ಮಟ್ಟಕ್ಕಿಂತ ಮೇಲೆ ತಾಪಮಾನ ಹೆಚ್ಚುವವರೆಗೂ ಕಾದು, ಅನಂತರ ಅವುಗಳೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಇಸ್ರೋ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next