Advertisement
ಕುಂದಾಪುರ, ಬೈಂದೂರು ಭಾಗದ ಹಳ್ಳಿಗಳಲ್ಲಿ ಈಗ ಈ ಕೆಂಪು ಕಲ್ಲು ಗಣಿಗಾರಿಕೆ ಸಾಮಾನ್ಯ ಅನ್ನುವಂತಾಗಿದೆ. ಅದು ಅಕ್ರಮವೋ ? ಸಕ್ರಮವೋ ಉತ್ತರಿಸುವವರು ಯಾರಿಲ್ಲ. ಯಾಂತ್ರಿಕ ಗಣಿಗಾರಿಕೆಯಿಂದಾಗಿ ಈ ಕೆಲಸ ನಡೆದ ಸ್ಥಳಗಳಲ್ಲಿ ದೊಡ್ಡ ದೊಡ್ಡ ಕೊಳಗಳೇ ಸೃಷ್ಟಿಯಾಗಿ, ಮಳೆಗಾಲದಲ್ಲಿ ಸಾವಿಗೆ ಆಹ್ವಾನ ಮೃತ್ಯುಕೂಪಗಳಾಗುತ್ತಿವೆ. ಮಳೆ ನೀರು ಸಂಗ್ರಹಗೊಳ್ಳುವ ಮುನ್ನವೇ ಹೊಂಡಗಳನ್ನು ಮಣ್ಣು ಹಾಕಿ ಮುಚ್ಚಬೇಕು ಅನ್ನುವ ಆದೇಶವಿದ್ದರೂ, ಎಲ್ಲೆಡೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ.
ಈ ಕಲ್ಲುಕೋರೆಗಳು ಕೆಲಸ ಮುಗಿದ ಬಳಿಕ ಏನಾಗುತ್ತಿವೆ. ಅದನ್ನು ಮುಚ್ಚಿಸುವ ಹೊಣೆ ಯಾರದು ಅನ್ನುವುದಕ್ಕೆ ಉತ್ತರವಿಲ್ಲ. ಸಾಮಾನ್ಯವಾಗಿ ಕೆಂಪು ಕಲ್ಲಿಗಾಗಿ 12 ರಿಂದ 18 ಅಡಿಯವರೆಗೂ ಅಗೆಯಲಾಗುತ್ತದೆ. ಅಂದರೆ ಪ್ರತೀ ಕೋರೆಯೂ ಎರಡು ಆಳಿಗಿಂತ ಅಧಿಕ ಆಳವಿರುತ್ತದೆ. ಅಲ್ಲಿ ಮಳೆಗಾಲದಲ್ಲಿ ನೀರು ತುಂಬಿ, ಕೆರೆ ಅಥವಾ ಮದಗದ ರೀತಿ ಕಾಣುತ್ತದೆ. ಅದರ ಸಮೀಪಕ್ಕೆ ಹೋಗದಂತೆ ತಡೆ ಬೇಲಿ, ದಂಡೆಯಾಗಲಿ ಯಾವುದೂ ಇಲ್ಲ. ಇಂತಹ ಹೊಂಡಗಳು ಭಾರೀ ಅಪಾಯಕಾರಿಯಾಗಿದ್ದು, ಜೀವ ಬಲಿ ಪಡೆಯುವ ಅಪಾಯವೂ ಇರುತ್ತದೆ. ಮಾತ್ರವಲ್ಲ ಹಳ್ಳಿಗಳಲ್ಲಿ ಜಾನುವಾರುಗಳನ್ನು ಮೇಯಲು ಬಿಡುತ್ತಾರೆ. ಅವುಗಳು ಸಹ ಅಲ್ಲಿಗೆ ಹೋಗಿ, ಬೀಳುವ ಸಂಭವವೂ ಇರುತ್ತದೆ.
Related Articles
ಇಲಾಖೆಯಿಂದ ಯಾವುದೇ ಕೆಂಪು ಕಲ್ಲು ಕೋರೆ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿಲ್ಲ. ಆದರೆ ಕೆಲವರು ಪಟ್ಟ ಜಾಗದಲ್ಲಿ ಮಾಡಿದ್ದಾರೆ. ಅದನ್ನು ಮುಚ್ಚಿಸುವಂತೆ ಆಯಾಯ ಗ್ರಾಮದ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇವೆ. ಇನ್ನೂ ಮುಚ್ಚದಿದ್ದರೆ ಮುಚ್ಚಿಸುವ ಕಾರ್ಯ ಮಾಡಲಾಗುವುದು. – ಸಂದೀಪ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ
Advertisement
ಕಾಲು ಜಾರಿ ಬಿದ್ದರೆ ಸಾವೇ ಗತಿಅಕ್ರಮ ಗಣಿಗಾರಿಕೆಯಿಂದ ಭೂಕುಸಿತ ಆಗಲು ಹೆಚ್ಚು ಸಮಯ ಇಲ್ಲ. ಸರಕಾರಕ್ಕೆ ವಂಚಿಸಿ, ಅಧಿಕಾರಿಗಳು, ಜನಪ್ರತಿನಿಧಿಗಳ ಕೃಪೆಯಿಂದ ಭೂಗರ್ಭ ಅಗೆದು ಕೆಂಪು ಕಲ್ಲುಗಳನ್ನು ತೆಗೆದು, ಗಣಿಧಣಿಗಳು ದೊಡ್ಡ ದೊಡ್ಡ ಹೊಂಡವನ್ನು ತೋಡಿ ಪಶ್ಚಿಮ ಘಟ್ಟ ಪ್ರದೇಶ ಗಳನ್ನು ನಾಶ ಮಾಡುತ್ತಿದ್ದಾರೆ. ಅಪ್ಪಿತಪ್ಪಿ ಜನ, ಜಾನುವಾರುಗಳು, ಕಾಲು ಜಾರಿ ಕೋರೆ ಹೊಂಡಕ್ಕೆ ಬಿದ್ದರೆ ಸಾವೇ ಗತಿ. ಸ್ಥಳೀಯಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ದಾಳಿ ಮಾಡುವ ನಾಟಕ ಮಾಡುವ ಬದಲು, ತುರ್ತು ಸುರಕ್ಷಿತಾ ಕ್ರಮಕೈಗೊಳ್ಳಲಿ. – ಕೆ. ಆನಂದ ಕಾರೂರು, ದಲಿತ ಸಂಘಟನೆ ಮುಖಂಡರು ಎಲ್ಲೆಲ್ಲ ಇವೆ ಕೋರೆಗಳು
ಹಳ್ಳಿಹೊಳೆ, ಆಜ್ರಿ, ಆಲೂರು, ಕಮಲಶಿಲೆ, ಯಡಮೊಗೆ, ಕಾರೂರು, ತಾರೇಕೊಡ್ಲು, ಕುಮ್ಟಿಬೇರು, ಯಳಬೇರು ಹೀಗೆ ಸಾಕಷ್ಟು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸಾಕಷ್ಟು ಕಡೆಗಳಲ್ಲಿ ಈ ಕೆಂಪು ಕಲ್ಲು ಗಣಿಗಾರಿಕೆ ನಡೆದಿವೆ. ಅಲ್ಲೆಲ್ಲ ಇಂತಹ ಅಪಾಯಕಾರಿ ಹೊಂಡಗಳು ಸೃಷ್ಟಿಯಾಗಿವೆ. ನಿರಂತರ ಮಳೆಗೆ ಆ ಹೊಂಡಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿವೆ. – ಪ್ರಶಾಂತ್ ಪಾದೆ