Advertisement

ಮಕ್ಕಳ ಮನದೊಳಗೆ ವಿವೇಕದ ಬೆಳಕು ವಿವೇಕಾನಂದ

07:30 PM Apr 20, 2021 | Team Udayavani |

ವರದಿ : ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: “ಆ ಮಕ್ಕಳು ಹಾಡುತ್ತಾರೆ, ಕುಣಿಯುತ್ತಾರೆ, ಗಣಿತ ಸೂತ್ರಗಳನ್ನು ಸುಲಭವಾಗಿಸುತ್ತಾರೆ, ವಿಜ್ಞಾನ ಮಾದರಿಗಳನ್ನು ತಯಾರಿಸುತ್ತಾರೆ, ಭಯವಿಲ್ಲದೆ ಭಾಷಣಕ್ಕಿಳಿಯುತ್ತಾರೆ, ಚಿತ್ರ ಬಿಡಿಸುತ್ತಾರೆ, ಕವನ ಬರೆಯುತ್ತಾರೆ, ತಿಥಿ, ಸಂವತ್ಸರ, ಮಳೆ ನಕ್ಷತ್ರಗಳ ಚಾರ್ಟ್‌ ಸಿದ್ಧಪಡಿಸುತ್ತಾರೆ, ಶ್ಲೋಕ, ಪ್ರಾರ್ಥನೆ, ಯೋಗ-ವ್ಯಾಯಾಮದಲ್ಲೂ ಸೈ ಎನ್ನಿಸಿದ್ದಾರೆ. ಒಟ್ಟಾರೆ ಜೀವನ ಸಂಸ್ಕಾರದ ಸಾಕ್ಷಾತ್ಕಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

‘ಇದು ಯಾವುದೋ ಗುರುಕುಲ ಇಲ್ಲವೆ ಖಾಸಗಿ ಶಾಲಾ-ಕಾಲೇಜಿನ ಮಕ್ಕಳ ಚಿತ್ರಣವಲ್ಲ. ಸರಕಾರಿ ಶಾಲೆಗಳ ಗ್ರಾಮೀಣ, ಕೊಳಗೇರಿ ಪ್ರದೇಶ ಮಕ್ಕಳ ಪ್ರತಿಭೆಯಿದು. ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಜೀವನೋತ್ಸಾಹಕ್ಕೆ ಪ್ರೇರಣೆಯ ದೀಕ್ಷೆ, ಮನದೊಳಗಿನ ಪ್ರತಿಭೆ ಅಭಿವ್ಯಕ್ತಿಗೆ ಕಿಚ್ಚು ಹೊತ್ತಿಸುವ ಸಾರ್ಥಕತೆಯ ಕಾಯಕಕ್ಕೆ ವಿವೇಕಾನಂದ ಯುಥ್‌ ಮೂವ್‌ಮೆಂಟ್‌ ಮಹತ್ವದ ಹೆಜ್ಜೆ ಇರಿಸಿದೆ.

ಧಾರವಾಡ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿನ ಗ್ರಾಮೀಣ-ನಗರ ಪ್ರದೇಶಗಳ ಅನೇಕ ಸರಕಾರಿ ಶಾಲೆಗಳಲ್ಲಿ ಇಂತಹ ಮಹತ್ವದ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. 3 ಜಿಲ್ಲೆಗಳಲ್ಲಿ ಸುಮಾರು 105 ಸಮುದಾಯ ಕಲಿಕಾ ಕ್ಲಬ್‌(ಸಿಎಲ್‌ಸಿ )ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಮನದೊಳಗಿನ ಚಿಂತನೆಗಳಿಗೆ ಬಣ್ಣ ತುಂಬುತ್ತಾರೆ, ಪ್ರಯೋಗಕ್ಕಿಳಿಯುತ್ತಾರೆ, ಕನಸುಗಳನ್ನು ಕಾಣುತ್ತಿದ್ದಾರೆ. ಕೋವಿಡ್‌-19 ಮಹಾಮಾರಿಯಿಂದಾಗಿ ಶಾಲೆಗಳು ನಡೆಯದೆ ಮಕ್ಕಳ ಮೇಲೆ ಪರಿಣಾಮ ಬೀರಿತ್ತು. ಆನ್‌ ಲೈನ್‌ ತರಗತಿಗಳಿದ್ದರೂ ಅದೆಷ್ಟೋ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ಸುಲಭವಾಗಿರಲಿಲ್ಲ.

ವಿವೇಕಾನಂದ ಯುಥ್‌ ಮೂವ್‌ಮೆಂಟ್‌ ನಡೆಸಿದ ಸಮೀಕ್ಷೆಯಲ್ಲಿ ಶೇ.57 ಮಕ್ಕಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದರು. ಶೇ.22 ಪಾಲಕರು ಶಾಲೆಗಳಿಲ್ಲದೆ ಮಕ್ಕಳು ವಿವಿಧ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡೇ ವಿವೇಕಾನಂದ ಯುಥ್‌ ಮೂವ್‌ಮೆಂಟ್‌ ಮಕ್ಕಳಿಗಾಗಿ ಕಲಿಕಾ ಕ್ಲಬ್‌ಗಳ ಆರಂಭಕ್ಕೆ ಮುಂದಾಗಿತ್ತು. ಧಾರವಾಡ, ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳನ್ನು ಗುರುತಿಸಿ, ಅಲ್ಲಿ ಕೋವಿಡ್‌-19 ನಿಯಮಗಳ ಕಟ್ಟುನಿಟ್ಟು ಪಾಲನೆಯೊಂದಿಗೆ ಮಕ್ಕಳಿಗೆ ಕಲಿಕಾ ಕಾರ್ಯ ಕೈಗೊಳ್ಳಲಾಗುತ್ತಿದೆ.

Advertisement

ಏನೆಲ್ಲಾ ತರಬೇತಿ: ಸಮುದಾಯ ಕಲಿಕಾ ಕೇಂದ್ರಗಳಲ್ಲಿ 3ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆವರೆಗ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ, ಮಧ್ಯಾಹ್ನ 2 ರಿಂದ ಸಂಜೆ 5:30 ಗಂಟೆವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.

ಒಂದು ಕಲಿಕಾ ಕೇಂದ್ರಕ್ಕೆ ಒಬ್ಬರು ಸುಗಮಕಾರರು(ಫೆಸಿಲಿಟೇಟರ್‌) ಹಾಗೂ ಹತ್ತು ಶಾಲೆಗೆ ಒಬ್ಬರು ಹಿರಿಯ ಸುಗಮಕಾರರನ್ನು ನೇಮಿಸಲಾಗಿದ್ದು, ಸಂಸ್ಥೆಯಿಂದ ಗೌರವಧನ ನೀಡಲಾಗುತ್ತಿದೆ. ಮಕ್ಕಳ ಚಟುವಟಿಕೆಗೆ ಬೇಕಾಗುವ ಡ್ರಾಯಿಂಗ್‌ ಶೀಟ್‌, ಪೆನ್ಸಿಲ್‌, ಸ್ಕೆಚ್‌ ಪೆನ್‌, ಕತ್ತರಿ, ಕ್ರಯಾನ್ಸ್‌, ಫೆವಿಕಾಲ್‌, ಆಕ್ಯಾìಲಿಕ್‌ ಪೇಂಟ್‌ ಬಾಕ್ಸ್‌, ಪೇಂಟ್‌ ಬ್ರಷ್‌, ಸ್ಕಿಪ್ಪಿಂಗ್‌ ರೋಪ್‌, ವೈಟ್‌ ಬೋರ್ಡ್‌, ಥೆÅಡ್‌ ಎಂಬ್ರಾಯಡರಿ, ನೀಡಲ್‌, ಹುಕ್‌, ಬಟನ್‌, ಚೆಸ್‌ ಬೋರ್ಡ್‌ ಮುಂತಾದ ಸಲಕರಣೆಗಳನ್ನು ಸಂಸ್ಥೆಯಿಂದ ಎಲ್ಲಾ ಕೇಂದ್ರಗಳಿಗೆ ಒದಗಿಸಲಾಗಿದೆ. ಮಕ್ಕಳು ಚಿತ್ರಕಲೆ, ನೃತ್ಯ, ಹಾಡು, ಕ್ರಾಫ್ಟ್‌, ಕಸೂತಿ, ಮಾನಸಿಕ ಬೆಳವಣಿಗೆಗೆ ಸಂಬಂ ಧಿಸಿದ ಆಟಗಳು, ತಮ್ಮ ಗ್ರಾಮದ ಐತಿಹಾಸಿಕ ಹಿನ್ನೆಲೆ, ಕಥೆ ಹೇಳುವುದು, ಕವನ ರಚಿಸುವುದು, ವಿವಿಧ ವೃತ್ತಿಯವರಿಂದ ಕೌಶಲಗಳನ್ನು ಕಲಿಯುವುದು, ಬೀಜದ ಉಂಡೆ ತಯಾರಿಸುವುದು, ವಿನೋದ ಗಣಿತ, ಮೋಜಿನ ವಿಜ್ಞಾನ, ಕಸದಿಂದ ರಸ, ಕೃಷಿ ಜ್ಞಾನ ಪಡೆಯುವುದು, ಭಾಷಣ ಮಾಡುವುದು, ರಂಗೋಲಿಯಲ್ಲೇ ಹೃದಯ, ಕಿಡ್ನಿ, ಮೆದುಳು, ನಕ್ಷೆ ಇನ್ನಿತರ ಚಿತ್ರಗಳನ್ನು ಬಿಡಿಸುವ ಮೂಲಕ ಪಠ್ಯಕ್ಕೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಕೈ ತೊಳೆಯುವ ವಿಧಾನ, ಶೌಚಾಲಯ ಮಹತ್ವ, ಮನೆ ಸುತ್ತಮುತ್ತಲು ಸ್ವತ್ಛತೆ ಹಾಗೂ ಶುಚಿತ್ವ, ಸಾಮಾಜಿಕ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶಿಸುತ್ತಾರೆ.

ದೇಸಿ ಕ್ರೀಡೆಗಳ ಕಸರತ್ತು ಪ್ರದರ್ಶಿಸುತ್ತಾರೆ. ದೇಶದ ಎಲ್ಲ ರಾಜ್ಯಗಳ ರಾಜಧಾನಿ, ಕೇಂದ್ರಾಡಳಿತ ಪ್ರದೇಶಗಳು, ಕನ್ನಡ-ಇಂಗ್ಲಿಷ್‌ ವ್ಯಾಕರಣ, ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರ ಸಹಿತ ಮಾಹಿತಿ, ವಿಶ್ವದ ಪ್ರಮುಖ ವಿಜ್ಞಾನಿಗಳು, ಮಹಾನ್‌ ಸಾಧಕರು, ಸ್ವಾತಂತ್ರÂ ಯೋಧರು ಸೇರಿದಂತೆ ವಿವಿಧ ವಿಷಯಗಳ ಮಾಹಿತಿ, ಜ್ಞಾನವನ್ನು ಸುಲಭ ರೀತಿಯಲ್ಲಿ ತಿಳಿಯುವ ರೀತಿಯಲ್ಲಿ ಮಕ್ಕಳು ತಮ್ಮದೇ ಚಿಂತನೆಯಲ್ಲಿ ಸಿದ್ಧಪಡಿಸಿದ್ದಾರೆ. ಕಸೂತಿ ಕಲೆಯಲ್ಲಿ ವಿವಿಧ ವಸ್ತುಗಳನ್ನು ತಯಾರಿಸಿದ್ದಾರೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲ್‌, ಕಾಗದಗಳಿಂದ ಹೂಗಳು ಅರಳುವಂತೆ ಮಾಡಿದ್ದಾರೆ. ವ್ಯಾಸಂಗದ ಪಠ್ಯಗಳ ಜತೆಗೆ ಪಠ್ಯೇತರ ಚಟುವಟಿಕೆಗಳು, ಜೀವನ ಸಂಸ್ಕಾರದ ಮನನ ಜತೆಗೆ, ಸ್ವಾವಲಂಬಿ ಬದುಕು, ರಾಷ್ಟ್ರಪ್ರೇಮ, ಜವಾಬ್ದಾರಿಯುತ ನಾಗರಿಕನಾಗು ಎಂದು ಮಕ್ಕಳ ಮನದೊಳಗೆ ಅಚ್ಚೊತ್ತುವ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next