ಹೊಸದಿಲ್ಲಿ/ಲಂಡನ್: ದೇಶದಲ್ಲಿ ಮೂರು ಕಂಪೆನಿಗಳ ಲಸಿಕೆಗಳನ್ನು ವಿತರಿಸುವ ಬಗ್ಗೆ ಯೋಚಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಭಾರತ್ ಬಯೋಟೆಕ್, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಫೈಜರ್ ಕಂಪೆನಿಗಳು ಭಾರತೀಯ ಔಷಧ ನಿಯಂತ್ರಣಾಧಿಕಾರಿಗೆ (ಡಿಸಿ ಜಿಐ) ತುರ್ತು ಬಳಕೆ ಮಾಡುವ ಬಗ್ಗೆ ಅನುಮತಿ ನೀಡ ಬೇಕು ಎಂದು ಕೋರಿಕೆ ಸಲ್ಲಿಸಿವೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಸೋಂಕಿನ ಸಕ್ರಿಯ ಪ್ರಕರಣಗಳು ತಗುತ್ತಿವೆ ಎಂದು ಹೇಳಿದ ಪೌಲ್, ಇತರ ದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಅಂಥ ಪರಿಸ್ಥಿತಿ ಇಲ್ಲವೆಂದರು.
ಈ ಮೂರು ಸೇರಿ ದೇಶದಲ್ಲಿ ಒಟ್ಟು ಎಂಟು ಲಸಿಕೆಗಳ ಪ್ರಯೋಗ ನಡೆಯುತ್ತಿದೆ ಎಂದರು. ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ದೇಶದಲ್ಲಿ ಎರಡು ಮತ್ತು ಮೂರನೇ ಹಂತದ ಪ್ರಯೋಗದಲ್ಲಿದೆ. ದೇಶಿಯ ಸಂಸ್ಥೆಯಾಗಿರುವ ಹೈದರಾಬಾದ್‌ನ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್, ಅಹಮದಾಬಾದ್‌ನ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಅಭಿವೃದ್ಧಿಪಡಿ ಸುತ್ತಿರುವ “ಜೆಡ್‌ವೈಸಿ ಒವಿ-ಡಿ’ (ZyCOV-D) ಎರಡನೇ ಹಂತದ ಪ್ರಯೋಗದಲ್ಲಿದೆ ಎಂದರು.
ರಷ್ಯಾದ “ಸ್ಪುಟ್ನಿಕ್-5′ ದೇಶದಲ್ಲಿ ಪ್ರಯೋಗದ ಹಂತ ದಲ್ಲಿರುವ ನಾಲ್ಕನೇ ಲಸಿಕೆಯಾಗಿದೆ. ಅದನ್ನು ಡಾ| ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಉತ್ಪಾದಿಸಲಾಗು ತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನೊವಾಕ್ಸ್ ಜತೆಗೆ “ಎನ್‌ವಿಎಕ್ಸ್-ಸಿಒವಿ2373 (NVX-CoV2373) ಎಂಬುದನ್ನು ಅಭಿವೃದ್ಧಿಪಡಿಸುತ್ತಿದೆ. ರೆಕಂಬಿಯಂಟ್ ಪ್ರೊಟೀನ್ ಆ್ಯಂಟಿಜೆನ್ ಆಧಾರಿತ ಲಸಿಕೆ 7ನೇಯದ್ದಾಗಿದ್ದು, ಅದನ್ನು ಹೈದರಾಬಾದ್‌ನ ಬಯಲಾಜಿಕಲ್ ಇ ಲಿಮಿಟೆಡ್ ಅಮೆರಿಕದ ಮೆಸ್ಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜತೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಮತ್ತು ಅಮೆರಿಕದ ಥಾಮಸ್ ಜೆಫರ್ಸನ್ ವಿವಿ ಜತೆಗೆ ಸಂಶೋಧಿಸುತ್ತಿರುವ ಲಸಿಕೆ ಕ್ಲಿನಿಕಲ್ ಪ್ರಯೋಗದ ಪೂರ್ವ ಭಾವೀ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಲಸಿಕೆ ಪಡೆದ ಮೊದಲ ಎನ್‌ಆರ್‌ಐ ದಂಪತಿ: ಯುನೈ ಟೆಡ್ ಕಿಂಗ್ ಡಮ್ ನಲ್ಲಿ ಜನರಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ. ಇಂಗ್ಲೆಂಡ್‌ನ ಈಶಾನ್ಯ ಭಾಗದಲ್ಲಿ ವಾಸಿಸುತ್ತಿರುವ ಭಾರತ ಮೂಲದ ಡಾ| ಹರಿ ಶುಕ್ಲಾ (87) ಮತ್ತು ಉತ್ನಿ ರಂಜನ್ (83)ಗೆ ಲಸಿಕೆ ನೀಡಲಾಗಿದೆ. ಯು.ಕೆ.ಯಲ್ಲಿ ಲಸಿಕೆ ಪಡೆದ ಮೊದಲ ವಿದೇಶಿ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜು.10ರ ಬಳಿಕ ಕನಿಷ್ಠ ಪ್ರಕರಣ
ದೇಶದಲ್ಲಿ ಸೋಮವಾರದಿಂದ ಮಂಗಳವಾರದ ಅವಧಿಯಲ್ಲಿ 26, 567 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಜು. 10ರ ಬಳಿಕ ಕನಿಷ್ಠ ಸಂಖ್ಯೆಯ ಒಟ್ಟು ಪ್ರಕರಣಗಳು. ಜತೆಗೆ 835 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.83 ಲಕ್ಷಕ್ಕೆ ಇಳಿಕೆಯಾಗಿದೆ. ಶೇಕಡವಾರು ಹೇಳುವುದಿದ್ದರೆ ದೇಶದಲ್ಲಿ ಗುಣ ಪ್ರಮಾಣ ಶೇ.94.59 ಆಗಿದೆ. ದೇಶದಲ್ಲಿ ಈಗ ಒಟ್ಟು ಪ್ರಕರಣಗಳ ಸಂಖ್ಯೆ 97,17,966 ಆಗಿದ್ದು, ಸಾವಿನ ಸಂಖ್ಯೆ 1,41, 141ಕ್ಕೆ ಏರಿಕೆಯಾಗಿದೆ.
250 ರೂ.ಗೆ ಸೀರಂ ಲಸಿಕೆ?
ದೇಶದಲ್ಲಿ ಆಕ್ಸ್‌ಫರ್ಡ್ ವಿವಿ-ಆಸ್ಟ್ರಾಜೆನೆಕಾದ ಲಸಿಕೆಯನ್ನು ಸಿದ್ಧಪಡಿಸಿ ದೇಶದಲ್ಲಿ ಮಾರಾಟ ಮಾಡಲಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರತಿ ಡೋಸ್‌ಗೆ 250 ರೂ. ದರ ನಿಗದಿ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ “ಬ್ಯುಸಿನೆಸ್ ಸ್ಟಾಂಡರ್ಡ್’ ಪತ್ರಿಕೆ ವರದಿ ಮಾಡಿದೆ. ಸಂಸ್ಥೆಯ ಸಿಇಒ ಅಡಾರ್ ಪೂನಾವಾಲ ಕೂಡ ಪ್ರತಿ ಡೋಸ್‌ಗೆ 1 ಸಾವಿರ ರೂ.ಗಳಿಗಿಂತ ಕಡಿಮೆ ದರ ಇರಲಿದೆ ಎಂದು ತಿಳಿಸಿದ್ದರು.