Advertisement
ಶಾಂತಿಗುರಿ, ಬಲತ್ತನೆ, ಜಯಂಪಾಡಿ, ಕೇವಳ, ಗುತ್ತುಪಾಲು, ಗುರಿಯಡ್ಕ ಮುಂತಾದ ಪ್ರದೇಶಗಳ ಪರಿಶಿಷ್ಟ ಜಾತಿ-ಪಂಗಡದ ಕಾಲನಿಗಳ ಜತೆಗೆ ಶಾಂತಿಗುರಿಯಿಂದ ಕುಂತೂರಿಗೆ ಸಂಪರ್ಕಿಸುವ ಏಕೈಕ ರಸ್ತೆ ಇದು. ಪರಿಶಿಷ್ಟರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ 125ಕ್ಕೂ ಅಧಿಕ ಮನೆಗಳಿದ್ದು, ಮಳೆಗಾಲದಲ್ಲಿ ತುರ್ತು ಅಗತ್ಯಗಳಿಗೆ ಆಲಂಕಾರು ಅಥವಾ ಕುಂತೂರನ್ನು ಸಂಪರ್ಕಿಸ ಬೇಕಾಗುತ್ತದೆ. ಸುಮಾರು 5 ಕಿ.ಮೀ. ಉದ್ದದ ರಸ್ತೆಗೆ ಕ್ಷೇತ್ರದ ಶಾಸಕರ ವಿಶೇಷ ಅನುದಾನ ಹಾಗೂ ಮುತುವರ್ಜಿಯಿಂದ ಡಾಮರು ಹಾಗೂ ಕಾಂಕ್ರೀಟ್ ಮಾಡಲಾಗಿದೆ. ಆದರೆ 800 ಮೀ. ಉದ್ದದ ಕಚ್ಚಾ ರಸ್ತೆ ಅಭಿವೃದ್ಧಿಗೆ ಬಾಕಿ ಉಳಿದಿರುವ ಕಾರಣ ಇಡೀ ಅಭಿವೃದ್ಧಿ ಕಾರ್ಯ ಗ್ರಾಮಸ್ಥರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಅಲ್ಲದೆ ಆಲಂಕಾರು ಅಥವಾ ಕುಂತೂರನ್ನು ಸಂಪರ್ಕಿಸಬೇಕಾದಲ್ಲಿ 4 ಕಿ.ಮೀ. ಸುತ್ತು ಬಳಸಿ ಪ್ರಯಾಣ ಮಾಡಬೇಕಾಗಿದೆ.
ಶಾಂತಿಗುರಿ ಎಂಬಲ್ಲಿ ಹರಿಯುವ ಬೃಹತ್ ತೋಡು ಮಳೆಗಾಲದಲ್ಲಿ ಈ ಭಾಗದ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಿ ದ್ವೀಪವಾಗಿಸುತ್ತಿತ್ತು. ಸೇತುವೆ ನಿರ್ಮಿಸುವಂತೆ ಕ್ಷೇತ್ರದ ಶಾಸಕರಿಗೆ ಈ ವ್ಯಾಪ್ತಿಯ ಜನತೆಯಿಂದ ನಿರಂತರವಾಗಿ ಮನವಿ ಮಾಡಿದ ಪರಿಣಾಮ 2006-2007ನೇ ಸಾಲಿನಲ್ಲಿ 32 ಲಕ್ಷ ರೂ. ಅನುದಾನ ಒದಗಿಸಿ ಕಿಂಡಿ ಅಣೆಕಟ್ಟಿನ ಜತೆಗೆ ಸಂಪರ್ಕ ಸೇತುವೆಯನ್ನು ನಿರ್ಮಿಸಲಾಯಿತು. ಇದರ ಪರಿಣಾಮ, ಬೇಸಗೆಯಲ್ಲಿ ನೀರಿನ ಸಮಸ್ಯೆ ನೀಗಿತು, ಮಳೆಗಾಲದಲ್ಲಿ ದ್ವೀಪದಂತಾಗಿ ಹೊಸ ಜಗತ್ತಿನ ಸಂಪರ್ಕ ಇಲ್ಲದಿರುವ ಸ್ಥಿತಿಯೂ ತಪ್ಪಿತು. ಶಾಸಕರ ಪ್ರಯತ್ನಕ್ಕೆ ಪುತ್ತೂರು ಎಪಿಎಂಸಿ, ಸ್ಥಳೀಯಾಡಳಿತ ಕೈಜೋಡಿಸಿದವು. ಈ ರಸ್ತೆಯ ಅಭಿವೃದ್ಧಿಗೆ ಎಪಿಎಂಸಿ 2007-08ನೇ ಸಾಲಿನಲ್ಲಿ
ಒಂದು ಲಕ್ಷ ರೂ. ಅನುದಾನವನ್ನು ನೀಡಿತು. ಪೆರಾಬೆ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆಯಡಿ ಒಂದು ಲಕ್ಷ ರೂ. ಅನುದಾನ ನೀಡಿ ಶಾಂತಿಗುರಿ ಎಂಬಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕಿಸಿತು.
Related Articles
ಈ ಹಿಂದೆ 14ನೇ ಹಣಕಾಸು ಯೋಜನೆ ಜಿ.ಪಂ. ಅಧೀನದಲ್ಲಿರುವಾಗ ಅನುದಾನಗಳಿಗೆ ಕೊರತೆಯಿರಲಿಲ್ಲ. ಆದರೆ ಈ ಯೋಜನೆಯನ್ನು ಗ್ರಾ.ಪಂ.ಗಳಿಗೆ ವರ್ಗಾಯಿಸಿದ ಪರಿಣಾಮ ಜಿ.ಪಂ.ಗಳಲ್ಲಿ ಅನುದಾನದ ಕೊರತೆಯಿದೆ. ಆದ್ದರಿಂದ ಜಿ.ಪಂ.ನಿಂದ ಅನುದಾನ ಒದಗಿಸಲು ಅಸಾಧ್ಯವಾಗಿದೆ. 800 ಮೀಟರ್ ರಸ್ತೆಯನ್ನು ಕೇವಲ ಒಂದೆರಡು ಲಕ್ಷ ರೂ.ಗಳಿಂದ ದುರಸ್ತಿ ಮಾಡಲು ಆಗುವುದಿಲ್ಲ. ಈ ಬಗ್ಗೆ ಶಾಸಕರಿಗೆ ಮನವಿ ಮಾಡಿ, ಶೀಘ್ರವೇ ಅನುದಾನ
ಬಿಡುಗಡೆಗೊಳಿಸಿ ಈ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಡ ಹೇರಲಾಗುವುದು.
– ಪ್ರಮೀಳಾ ಜನಾರ್ದನ್
ಜಿ.ಪಂ. ಸದಸ್ಯೆ
Advertisement
ಶಾಸಕರಿಗೆ ಮನವಿಶಾಸಕರು ಕ್ಷೇತ್ರದ ನೂರಕ್ಕೂ ಅಧಿಕ ಕಾಲನಿಗಳ ರಸ್ತೆಗಳನ್ನು ತಮ್ಮ ಅಧಿಕಾರದ ಸಮಯದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಈ ಬಾರಿ ಹದಗೆಟ್ಟಿರುವ ರಸ್ತೆಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗುವುದು. ಇದಕ್ಕಾಗಿ ಬೇಡಿಕೆಯ ಸಹಿಯುಳ್ಳ ಮನವಿಯನ್ನು ಸಾರ್ವಜನಿಕ ನಿಯೋಗದೊಂದಿಗೆ ಕಚೇರಿಗೆ ತೆರಳಿ ಶೀಘ್ರದಲ್ಲೇ ನೀಡಲಾಗುವುದು.
– ಎಸ್. ಪೂವಪ್ಪ ನಾೖಕ್
ಸ್ಥಳೀಯ ನಿವಾಸಿ ಸದಾನಂದ ಆಲಂಕಾರು