Advertisement

ನಾಡಕಚೇರಿಗೆ ಕೂಡಿಬಾರದ ಕಟ್ಟಡ ಭಾಗ್ಯ!

05:39 AM May 14, 2019 | Team Udayavani |

ಉಪ್ಪಿನಂಗಡಿ: ಹೋಬಳಿ ಮಟ್ಟದ ನಾಡ ಕಚೇರಿ ಕಟ್ಟಡ ಸ್ಥಳಾಂತರಗೊಂಡರೂ ಸ್ವಂತ ಕಟ್ಟಡ ರಚನೆಗೆ ಇನ್ನೂ ಕಾಲ ಕೂಡಿ ಬಾರದೆ ಪಾಳು ಬಿದ್ದುಕೊಂಡಿದೆ. ಕಂದಾಯ ಇಲಾಖೆಗೆ ಸೇರಿದ ಕಟ್ಟಡ ಹಲವು ವರ್ಷಗಳಿಂದ ಅಪಾಯದಲ್ಲಿದ್ದು, ಕರ್ತವ್ಯ ನಿಭಾಯಿಸಲು ಕಷ್ಟ ಎಂಬುದನ್ನು ಮನಗಂಡ ಜಿಲ್ಲಾಧಿಕಾರಿಗಳು ಬದಲಿ ಸರಕಾರಿ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಆದೇಶಿಸಿದ್ದರು. ಅದರಂತೆ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿ ನೂತನ ಪಂಚಾಯತ್‌ ಕಟ್ಟಡದಲ್ಲಿ ಸ್ಥಳಾವಕಾಶ ಕೋರಿ ಮನವಿ ಸಲ್ಲಿಸಿದ್ದರು.

Advertisement

ಮನವಿಗೆ ಸ್ಪಂದಿಸಿದ ಪಂಚಾಯತ್‌ ಆಡಳಿತ ಸ್ಥಳಾವಕಾಶಕ್ಕೆ ಸರ್ವ ಸದಸ್ಯರ ಒಪ್ಪಿಗೆಯಂತೆ ಸಮ್ಮತಿ ಸೂಚಿಸಿದ ಮೇರೆಗೆ ನಾಡಕಚೇರಿಗೆ ಅವಕಾಶ ಕೊಟ್ಟಿತ್ತು. ಅದಾಗಿ ಮೂರು ತಿಂಗಳು ಕಳೆದರೂ ಇನ್ನೂ ನಾಡಕಚೇರಿ ನೂತನ ಸ್ವಂತ ಕಟ್ಟಡ ರಚನೆ ಯಾವುದೇ ತಯಾರಿ ನಡೆದಿಲ್ಲ.

ಕಟ್ಟಡ ರಚನೆ ಮಂಜೂರಾತಿ ದೊರಕಿದ ಕುರಿತು ಯಾವುದೇ ಮಾಹಿತಿ ಈತನಕ ಇಲ್ಲ. ಅಧಿಕಾರಿಗಳು ಪಂಚಾಯತ್‌ ಕಟ್ಟಡ ಸ್ಥಳಾಂತರಕ್ಕೆ ಮುನ್ನ ಶೀಘ್ರವೇ ಸರಕಾರದ ಬಜೆಟ್‌ನಲ್ಲಿ 10 ಲಕ್ಷ ರೂ. ಕ್ರೋಡೀಕರಿಸಿ ತತ್‌ಕ್ಷಣವೇ ಕಾಮಗಾರಿ ಆರಂಭಿಸಿ ಸುಸಜ್ಜಿತ ಕಟ್ಟಡ ರಚಿಸುವ ಕುರಿತು ಮಾತುಕತೆ ನಡೆದಿತ್ತು.

ಪ್ರಕ್ರಿಯೆ ಆರಂಭಿಸಿಲ್ಲ
ನಾಡಕಚೇರಿ ಸ್ಥಳಾಂತರಗೊಂಡು ಮೂರು ತಿಂಗಳು ಕಳೆದರೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಈ ಮಳೆಗಾಲದಲ್ಲಿ ಹಳೆಯ ಕಟ್ಟಡ ಮುರಿದು ಬೀಳುವ ಅಪಾಯವಿದೆ. ಪುತ್ತೂರು ತಾಲೂಕಿನ ಬಜತ್ತೂರು, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಬನ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ ಸಹಿತ 13 ಗ್ರಾಮ ವ್ಯಾಪ್ತಿ ಹೊಂದಿದೆ. ಮಳೆಗಾಲ ಆರಂಭವಾದರೆ ಈ ಕಟ್ಟಡದ ಪಕ್ಕ ನಡೆದಾಡುವುದೂ ಅಪಾಯಕಾರಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
ನಾಡಕಚೇರಿ ಪಂಚಾಯತ್‌ ಕಟ್ಟಡಕ್ಕೆ ಸ್ಥಳಾಂತರ ಆಗುವ ಮುನ್ನವೇ ಪಂಚಾಯತ್‌ ಅಧ್ಯಕ್ಷ ಅಬ್ದುಲ್ ರಹಿಮಾನ್‌ ಅವರು, ನೂತನ ಕಟ್ಟಡ ರಚನೆಗೆ ಸರಕಾರದಿಂದ ಮಂಜೂರಾತಿ ಪಡೆಯುವುದು ಕಷ್ಟಸಾಧ್ಯವಾದಲ್ಲಿ, ನೆಲ ಅಂತಸ್ತಿನಲ್ಲಿ ಗ್ರಾ.ಪಂ. ವಾಣಿಜ್ಯ ಕಟ್ಟಡ ರಚನೆಗೆ ಅವಕಾಶ ನೀಡುವುದಾದಲ್ಲಿ 2‌ನೇ ಮಹಡಿಯಲ್ಲಿ ನಾಡಕಚೇರಿ ಕಟ್ಟಡ ನಿರ್ಮಿಸಿಕೊಡುವುದಾಗಿ ತಿಳಿಸಿದ್ದರು. ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ, ಪಂಚಾಯತ್‌ ಆಡಳಿತ ಸಾರ್ವಜನಿಕ ಸೇವೆಯಡಿ ನಾಡಕಚೇರಿಗೆ ತಾತ್ಕಾಲಿಕ ಅವಕಾಶ ಕಲ್ಪಿಸಿತ್ತು. ತತ್‌ಕ್ಷಣವೇ ಅವರು ಸ್ವಂತ ಕಟ್ಟಡ ರಚನೆಗೆ ಚಾಲನೆ ನೀಡದಿದ್ದಲ್ಲಿ ಪಂಚಾಯತ್‌ ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

ಪ್ರಸ್ತಾವನೆ ಸಲ್ಲಿಸಲಾಗಿದೆ
ಉಪ್ಪಿನಂಗಡಿ ನಾಡ ಕಚೇರಿಯ ನಿವೇಶನದಲ್ಲಿ ಕಟ್ಟಡವು ಅಪಾಯದ ಸ್ಥಿತಿಯಲ್ಲಿದ್ದು, ಈಗಾಗಲೇ ಪಂಚಾಯತ್‌ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ, ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ರಚನೆಗಾಗಿ 25 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮಂಜೂರಾತಿ ದೊರಕಿದ ತತ್‌ಕ್ಷಣವೇ ಸ್ವಂತ ಕಟ್ಟಡ ರಚನೆಯಾಗಲಿದೆ.
– ಡಾ| ಪ್ರದೀಪ್‌ ಕುಮಾರ್‌ ಪುತ್ತೂರು ತಾಲೂಕು ದಂಡಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next