Advertisement
ಅನ್ನಭಾಗ್ಯದಿಂದ ಹಿಡಿದು ವಿವಿಧ ಭಾಗ್ಯಗಳೊಂದಿಗೆ ಸುಮಾರು 1.08 ಕೋಟಿ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಿದ್ದೇವೆ. ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ ಎಂಬುದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಕಾಂಗ್ರೆಸ್ ನಾಯಕರ ಹೇಳಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ವಿಭಾಗ ಮಟ್ಟದ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಲವು ಸಮಾವೇಶಗಳನ್ನು ಸರಣಿ ರೂಪದಲ್ಲಿ ಕೈಗೊಳ್ಳಲು ಕಾಂಗ್ರೆಸ್ ಮುಂದಾಗಿದೆ.
Related Articles
Advertisement
ಸರ್ಕಾರದ ಭಾಗ್ಯ-ಯೋಜನೆಗಳ ಸೌಲಭ್ಯ ಪಡೆದ ಅಂದಾಜು 3-4 ಕೋಟಿ ಫಲಾನುಭವಿಗಳ ಮನೆ, ಮನೆಗೆ ಸರ್ಕಾರದ ಸೌಲಭ್ಯಗಳ ಮನವರಿಕೆ ಹಾಗೂ ಮನವೊಲಿಕೆ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಪೂರಕವಾಗಿಯೇ ಮನೆ ಮನೆಗೆ ಕಾಂಗ್ರೆಸ್ ಎಂಬ ಸುಮಾರು 30 ಪುಟಗಳ ಕಿರುಹೊತ್ತಿಗೆ ಮುದ್ರಿಸಿ ಅದನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ರೈತರ ಮನವೊಲಿಕೆಗೂ ಯತ್ನ: ಕಾಂಗ್ರೆಸ್ ಸರ್ಕಾರ ರೈತರ ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಆ ಮೂಲಕ ರೈತರ ಮನವೊಲಿಕೆಗೂ ಮುಂದಾಗಿದೆ. ಸಹಕಾರಿ ಸಂಘಗಳಲ್ಲಿ 50 ಸಾವಿರ ರೂ.ವರೆಗಿನ ಅಂದಾಜು 8,000 ಕೋಟಿ ರೂ.ನಷ್ಟು ಸಾಲ ಮನ್ನಾ ಮಾಡುವ ಮೂಲಕ ಸುಮಾರು 22 ಲಕ್ಷ ರೈತರಿಗೆ ಪ್ರಯೋಜನವಾಗುವಂತೆ ಮಾಡಿದ್ದು,
ಈ ರೈತರ ಮನವೊಲಿಕೆ ಕಾರ್ಯಕ್ಕೆ ಕಾಂಗ್ರೆಸ್ ತನ್ನದೇ ಯೋಜನೆ ರೂಪಿಸಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸಹಕಾರಿ ಸಂಘಗಳ ಒಟ್ಟು ರೈತರ ಸಾಲ ಅಂದಾಜು 10,500 ಕೋಟಿ ರೂ.ನಷ್ಟು ಆಗಿದ್ದು, ಬಾಕಿ ಉಳಿದಿರುವ 2,500 ಕೋಟಿ ರೂ. ಸಾಲವನ್ನು ಸಹ ಮನ್ನಾ ಮಾಡುವ ಗಂಭೀರ ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಮನ್ನಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಹಕಾರಿ ಸಂಘಗಳಲ್ಲಿನ ಎಲ್ಲ ಸಾಲವನ್ನು ಮನ್ನಾ ಮಾಡುವ ಮೂಲಕ ಕಾಂಗ್ರೆಸ್ ರೈತರಪರ ತಾವು ಎಂಬುದನ್ನು ತೋರಿಸಿಕೊಳ್ಳುವ ಹಾಗೂ ಕೇಂದ್ರ ಸರ್ಕಾರಕ್ಕೆ ವಾಣಿಜ್ಯ ಬ್ಯಾಂಕ್ ಗಳ ರೈತರ ಸಾಲ ಮನ್ನಾ ಒತ್ತಡ ಹೆಚ್ಚಿಸಲು ಮುಂದಾಗಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಮೊದಲು ರೈತರ ಸಾಲ ಮನ್ನಾ ಮಾಡಲಿ ಕೇಂದ್ರದ ಮೇಲೆ ಸಾಲ ಮನ್ನಾಕ್ಕೆ ನಾವು ಒತ್ತಡ ತರುತ್ತೇವೆ ಎಂದು ಅಬ್ಬರಿಸಿದ್ದ ಬಿಜೆಪಿ ನಾಯಕರ ಹೇಳಿಕೆಗಳನ್ನೇ ರೈತರ ಮುಂದಿಟ್ಟು, ಬಿಜೆಪಿ ನಾಯಕರನ್ನು ಮುಜಗರಕ್ಕೀಡು ಮಾಡಲು ಕಾಂಗ್ರೆಸ್ ಯೋಜಿಸಿದೆ.
ಸರ್ಕಾರದ ಆಡಳಿತ, ಭಾಗ್ಯಗಳ ಬಗ್ಗೆ ವಿರೋಧ ಪಕ್ಷಗಳು ಏನೇ ಟೀಕೆ ಮಾಡಿದರು, ಎಲ್ಲ ವರ್ಗಗಳಿಗೂ ಒಂದಲ್ಲ ಒಂದು ಭಾಗ್ಯದ ಸೌಲಭ್ಯ ತಲುಪಿಸಿದ್ದರಿಂದ ಅಂದಾಜು 3-4 ಕೋಟಿ ಫಲಾನುಭವಿಗಳ ಮನವೊಲಿಕೆಯಲ್ಲಿ ಯಶಸ್ವಿಯಾದರೆ ನಿರೀಕ್ಷೆಗೆ ಮೀರಿದ ಗೆಲುವು ನಮ್ಮದಾಗಬಲ್ಲದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇದಕ್ಕೆ ಮತದಾರರು ಯಾವ ರೀತಿ ಸ್ಪಂದಿಸುತ್ತಾರೋ ಕಾದು ನೋಡಬೇಕಷ್ಟೆ.
* ಅಮರೇಗೌಡ ಗೋನವಾರ