ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಮುಖವಾಣಿ ಸಾಮ್ನಾ ಹೊಸ ಸಂಪಾದಕೀಯದಲ್ಲಿ ಪ್ರತಿಪಕ್ಷಗಳನ್ನು ರಷ್ಯಾದ ವ್ಯಾಗ್ನರ್ ಪಡೆಗೆ ಹೋಲಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವ್ಯಾಗ್ನರ್ ಗುಂಪಿನ ಬಂಡಾಯವನ್ನು ವಿಪಕ್ಷಗಳು ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ಸಂಘರ್ಷ ಎಂದು ಬಿಂಬಿಸಿದೆ.
ಸಾಮ್ನಾ ಸಂಪಾದಕೀಯವು ವ್ಯಾಗ್ನರ್ ಗುಂಪನ್ನು ಭಾರತದ ವಿರೋಧ ಪಕ್ಷಗಳಿಗೆ ಹೋಲಿಸಿ “ಪ್ರಜಾಪ್ರಭುತ್ವದ ರಕ್ಷಕ” ಎಂದು ಕರೆದಿದೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಪುಟಿನ್ ವಿರುದ್ಧ ಬಂಡಾಯವೆದ್ದಂತೆ, ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಲು ಪ್ರತಿಪಕ್ಷಗಳು ಪಾಟ್ನಾದಲ್ಲಿ ಒಗ್ಗೂಡಿದ್ದವು ಎಂದು ಕರೆದಿದೆ.
ಪುಟಿನ್ ಅವರಂತೆ ಮೋದಿ-ಶಾ ಕೂಡ ಸರ್ವಾಧಿಕಾರಿ. ಸಂಪೂರ್ಣ ಸರ್ವಾಧಿಕಾರವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಇದು ಪ್ರಸ್ತುತ ರಷ್ಯಾದಂತೆ ಗೋಚರಿಸುತ್ತಿದೆ ಎಂದು ಸ್ಯಾಮ್ನಾ ಹೇಳಿದೆ.
ಇದನ್ನೂ ಓದಿ:Congress ಪಕ್ಷಕ್ಕೆ ಎರಡುವರೆ ವರ್ಷ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ: ಜೋಶಿ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ಬಗ್ಗೆ ಮಾತನಾಡಿರುವ ಸಂಪಾದಕೀಯದಲ್ಲಿ, ಮೋದಿಯವರು ಅಸಮರ್ಪಕ ಆಂಗ್ಲ ಭಾಷೆಯಲ್ಲಿ ಮಾತನಾಡುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಹೇಳಿದೆ.
ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಂದಾಗಿ ಪ್ರಧಾನಿ ಮೋದಿಯವರ ಕಾಲಿನ ಕೆಳಗೆ ನೆಲ ಜಾರಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅದು ಹೇಳಿದೆ.