Advertisement

ವೇತನ ಹೆಚ್ಚಳ, ಬಡ್ತಿಗೂ ಕೊಕ್ಕೆ

03:45 AM Feb 12, 2017 | Team Udayavani |

ಬೆಂಗಳೂರು: ಇನ್ಫೋಸಿಸ್‌ನೊಳಗಿನ ಭಿನ್ನಮತದ ಹೊಗೆ ಈಗ ಉದ್ಯೋಗಿಗಳ ಕಾಲು ಬುಡದಲ್ಲಿ ಬಿಸಿ ವಾತಾವರಣವನ್ನು ಸೃಷ್ಟಿಸಿದೆ! ಆಡಳಿತ ಮಂಡಳಿ ಜೊತೆಗಿನ ಭಿನ್ನಮತದ ಕಾರಣದಿಂದ ವೇತನ ಹೆಚ್ಚಳ, ಹುದ್ದೆಯ ಬಡ್ತಿಗೆ ಎಲ್ಲಿ ಕತ್ತರಿ ಬೀಳುತ್ತದೋ ಎಂದು ಉದ್ಯೋಗಿಗಳು ಆತಂಕಗೊಂಡಿದ್ದಾರೆ.

Advertisement

ಸಿಇಒ ಡಾ. ವಿಶಾಲ ಸಿಕ್ಕಾ ವೇತನ ಹೆಚ್ಚಳ ಮತ್ತು ನಿರ್ಗಮಿತ ಇಬ್ಬರು ಉನ್ನತಾಧಿಕಾರಿಗಳಿಗೆ ನೀಡಿರುವ ಪರಿಹಾರ ಕುರಿತ ಪತ್ರವಿವಾದದ ಪರಿಣಾಮವನ್ನು ಸಂಸ್ಥೆಯ ಸಾಮಾನ್ಯ ಉದ್ಯೋಗಿಯೂ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ಫೋಸಿಸ್‌ನಲ್ಲಿ ಕಳೆದವರ್ಷ ಕೆಳ ಮತ್ತು ಮಧ್ಯಮ ಹಂತದ ಉದ್ಯೋಗಿಗಳಿಗೆ ಶೇ.2ರಿಂದ ಶೇ.6ವರೆಗೆ ವೇತನ ಹೆಚ್ಚಳವಾಗಿತ್ತು. ಕೆಲವೇ ಕೆಲವರಿಗಷ್ಟೇ ಶೇ.10ರ ಪ್ರಮಾಣದಲ್ಲಿ ಸಂಬಳ ಜಾಸ್ತಿ ಆಗಿತ್ತು. ಕಾರಣಾಂತರಗಳಿಂದಾಗಿ ಕೆಲವರ ಬಡ್ತಿಯನ್ನು ತಡೆಹಿಡಿಯಲಾಗಿತ್ತು. ಇವೆಲ್ಲ ಕಾರಣದಿಂದ ಎಲ್ಲ ಉದ್ಯೋಗಿಗಳೂ ಈ ವರ್ಷದ ವೇತನ ಹೆಚ್ಚಳಕ್ಕೆ ಕಾಯುತ್ತಿದ್ದರು. ಇನ್ನೇನು ಸಂಬಳ ಏರಿಕೆಗೆ ಒಂದು ತಿಂಗಳು ಇದೆ ಎನ್ನುವಾಗಲೇ ಆಡಳಿತ ಮಂಡಳಿ ವಿರುದ್ಧ ಭಿನ್ನಮತದ ಸಮರ ಶುರುವಾಗಿರುವುದ ತಲೆನೋವಿಗೆ ಕಾರಣವಾಗಿದೆ.

ವೀಸಾ ಬೇಡಿಕೆ ಪೂರೈಸಿಲ್ಲ: “ವಿದೇಶಕ್ಕೆ ಹೋಗುವ ಮತ್ತು ಬರುವ ಸಿಸ್ಟಮ್‌ ಎಂಜಿನಿಯರುಗಳ ವೀಸಾ ಬೇಡಿಕೆಯನ್ನೂ ಕಂಪನಿ ಪೂರೈಸಿಲ್ಲ. ಆಡಳಿತ ಮಂಡಳಿ ವಿರುದ್ಧ ಎದ್ದಿರುವ ಭಿನ್ನಮತದಿಂದಾಗಿ ಈ ಬೇಡಿಕೆಗಳು ಈಡೇರುವುದು ಇನ್ನೂ ತಡವಾಗಬಹುದು. ವಿದೇಶದಲ್ಲಿನ ಶಾಖೆಗಳಿಗೂ ಇದರ ಪರಿಣಾಮ ತಟ್ಟಬಹುದು. ಸಿಇಒ ಸಿಕ್ಕಾ ಅವರೊಂದಿಗೆ ಕೆಲಸ ಮಾಡಲು ಎಲ್ಲರಿಗೂ ಖುಷಿ ಇದೆ. ಆದರೆ, ಅವರ ವೇತನ ಹೆಚ್ಚಳ ಎಲ್ಲರಿಗೂ ಅಸಮಾಧಾನ ತಂದಿದೆ” ಎಂದು ಪುಣೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಬದಲಾವಣೆ ಪಕ್ಕಾ!: “ಸಿಕ್ಕಾ ಬಂದಮೇಲೆ ಸಂಸ್ಥೆಯ ಒಳಗಿನ ವಾತಾವರಣದಲ್ಲಿ ಹಲವು ಬದಲಾವಣೆಗಳಾಗಿದ್ದವು. ಸಾಂಪ್ರದಾಯಿಕ ಹಾದಿಯಲ್ಲಿರುವ ಉದ್ಯೋಗಿಗಳಿಗೆ ಈ ಬದಲಾವಣೆ ಅರಗಿಸಿಕೊಳ್ಳುವುದು ಕಷ್ಟವಾಯಿತು. ಈಗ ಭಿನ್ನಮತದ ನಂತರ ಮೇಲ್ಮಟ್ಟದ ಅನೇಕ ಹುದ್ದೆಗಳಲ್ಲೂ ಬದಲಾವಣೆ ಆಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಪುಣೆಯ ಮಹಿಳಾ ಉದ್ಯೋಗಿ ಕೊಲೆ, ಅದರ ನಂತರ ಈ ಭಿನ್ನಮತ ಎಲ್ಲ ಉದ್ಯೋಗಿಗಳಲ್ಲೂ ಕಸಿವಿಸಿ ಸೃಷ್ಟಿಸಿದೆ’ ಎಂದಿದ್ದಾರೆ.

ಸಿಕ್ಕಾ ಸ್ಥಾನಮಾನಕ್ಕೆ ಇಲ್ಲ ಧಕ್ಕೆ: ಇನ್ಫಿಯೊಳಗೆ ಇವೆಲ್ಲ ಬೆಳವಣಿಗೆಯಿಂದ ಸಿಇಒ ಸ್ಥಾನಮಾನಕ್ಕೆ ದಕ್ಕೆಯಿಲ್ಲ ಎನ್ನುವುದು ಹೂಡಿಕೆ ವ್ಯವಸ್ಥಾಪಕರ ಅಭಿಪ್ರಾಯ. “ಇಲ್ಲಿ ಪ್ರಶ್ನೆಗಳು ಎದ್ದಿರುವುದು ಆಡಳಿತ ಮಂಡಳಿಯ ನಿರ್ಧಾರಗಳ ಮೇಲಷ್ಟೇ. ಸಂಸ್ಥೆಯನ್ನು ಸಿಇಒ ಧನಾತ್ಮಕ ಹಾದಿಯಲ್ಲಿಯೇ ಕೊಂಡೊಯ್ಯುತ್ತಿದ್ದಾರೆ. ಆಡಳಿತ ಮಂಡಳಿ ಇಂಥ ಬೆಳವಣಿಗೆಯನ್ನು ನಿಯಂತ್ರಿಸುವುದು ಹೇಗೆಂದು ಯೋಚಿಸಬೇಕು. ಭವಿಷ್ಯದಲ್ಲಿ ಬಹಳ ಎಚ್ಚರ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದಿದ್ದಾರೆ.

Advertisement

“ಆಡಳಿತ ಮಂಡಳಿ ಮತ್ತು ಮುಖ್ಯ ಷೇರುದಾರರ ಒಪ್ಪಿಗೆಯಿಂದಲೇ ಸಿಕ್ಕಾ ಸಿಇಒ ಸ್ಥಾನಕ್ಕೆ ಬಂದಿದ್ದಾರೆ. ಅವರ ವೇತನ ಹೆಚ್ಚಳವೂ ಕಾನೂನುಬದ್ಧವೇ ಆಗಿದೆ. ಮಾಜಿ ಸಿಎಫ್ಒ ರಾಜೀವ್‌ ಬನ್ಸಾಲಿ ಅವರಿಗೆ ನೀಡಲಾಗಿರುವ ಬೇರ್ಪಡಿಕೆ ಪರಿಹಾರವೂ ಕಾನೂನುಬದ್ಧವೇ. ಇವೆಲ್ಲವೂ ಮಂಡಳಿ ಮೂಲಕವೇ ಆದ ಬೆಳವಣಿಗೆ. ಹೀಗಿದ್ದೂ ಇಲ್ಲಿ ಆಡಳಿತಾತ್ಮಕ ವಿವಾದ ಆಗಿದ್ದಾದರೂ ಹೇಗೆ?’ ಎಂದು ದೇಶದ ಉನ್ನತ ಹೂಡಿಕೆ ವ್ಯವಸ್ಥಾಪಕರು ಅಚ್ಚರಿ ಸೂಚಿಸಿದ್ದಾರೆ.

ಭಿನ್ನಮತಕ್ಕೆ 33,421 ಕೋಟಿ ರೂ. ಕಾರಣ?
ಇನ್ಫೋಸಿಸ್‌ನ ಸಂಸ್ಥಾಪಕ ಸದಸ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಎದ್ದಿರುವ ಭಿನ್ನಮತಕ್ಕೆ 33,421 ಕೋಟಿ ರೂ. ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಂಪನಿಯ ಯಾವುದೋ ಸಂದರ್ಭದಲ್ಲಿ ಉಳಿಕೆಯಾದ ಮೊತ್ತ ಇದಾಗಿದ್ದು, ಇದು ಇನ್ನೂ ಷೇರುದಾರರಿಗೆ ಹಂಚಿಕೆಯಾಗಿಲ್ಲ. ಡಿವಿಡೆಂಟ್‌ ರೂಪದಲ್ಲೂ ಅವರ ಕೈಸೇರಿಲ್ಲ ಎನ್ನಲಾಗಿದೆ. ಈಗಿನ ಆಡಳಿತ ಮಂಡಳಿ ಆ ಹಣವನ್ನೇ ಬೇರೆ ಬೇರೆ ಪ್ಯಾಕೇಜ್‌ ರೂಪದಲ್ಲಿ ಮತ್ತು ಪರಿಹಾರಗಳ ರೂಪದಲ್ಲಿ ಬಳಸಿಕೊಳ್ಳುತ್ತಿದೆ ಎಂದು ಸಂಸ್ಥೆಯ ಹಳೆಯ ಸದಸ್ಯರು ನಂಬಿದ್ದಾರೆ. ಆಡಳಿತ ಮಂಡಳಿ ಮತ್ತು ಹೂಡಿಕೆದಾರರ ನಡುವಿನ ಭಿನ್ನಮತಕ್ಕೂ ಇದೇ ಕಾರಣವಾಗಿದೆ ಎನ್ನಲಾಗಿದೆ.

ಸಂಸ್ಥೆಗೆ ಹೊಸತಾಗಿ ಕಾಲಿಟ್ಟ ಉದ್ಯೋಗಳಿಗೆ ಕೆಲವು ವರ್ಷಗಳಿಂದ ಸಂಬಳವೇ ಏರಿಕೆ ಆಗಿಲ್ಲ. ಕಂಪನಿ ತೊರೆಯುವಾಗ ಉದ್ಯೋಗಿಗಳಿಗೆ ಮೂರು ತಿಂಗಳ ಮಟ್ಟಿಗೆ ಶೇ.80ರಷ್ಟು ಪರಿಹಾರ ಸಿಗುತ್ತದೆ. ಆದರೆ, ರಾಜೀವ್‌ ಬನ್ಸಾಲ್‌ ಅಂಥವರಿಗೆ ಶೇ.100ರ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ಫಿಯಲ್ಲಿ ಎಲ್‌ಐಸಿಯ ಶೇ.2 ಷೇರು ಹೆಚ್ಚಳ
ಇನ್ಫೋಸಿಸ್‌ನಲ್ಲಿ ಈ ಮೂರು ವರ್ಷದಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇ.2ರಷ್ಟು ಹೆಚ್ಚುವರಿ ಷೇರುಗಳನ್ನು ಖರೀದಿಸಿದೆ. 4.63 ಕೋಟಿ ಷೇರುಗಳನ್ನು ಖರೀದಿಸಿದ್ದು, 5 ರೂಪಾಯಿ ಮೌಲ್ಯದ ಷೇರುಗಳ ಇವಾಗಿವೆ. ಈ ಮೂಲಕ ಎಲ್‌ಐಸಿಯು ಇನ್ಫೋಸಿಸ್‌ನಲ್ಲಿ ಶೇ.7.23ರಷ್ಟು ಷೇರುಗಳನ್ನು ಹೊಂದಿದಂತಾಗಿದೆ. ಆಡಳಿತ ಮಂಡಳಿ ಮತ್ತು ಸಂಸ್ಥಾಪಕ ಸದಸ್ಯರ ಭಿನ್ನಮತದ ನಡುವೆ ಈ ಮಾಹಿತಿ ಹೊರಬಿದ್ದಿದ್ದು, ಸಿಇಒ ವಿಶಾಲ್‌ ಸಿಕ್ಕಾ ಅವರ ಕಾರ್ಯವೈಖರಿಗೆ ಎಲ್‌ಐಸಿಯೂ ಮೆಚ್ಚುಗೆ ಸೂಚಿಸಿದಂತಾಗಿದೆ.

2013ರ ಸೆಪ್ಟೆಂಬರ್‌ 26ರಿಂದ 2017ರ ಫೆಬ್ರವರಿ 7ರ ವರೆಗೆ ಎಲ್‌ಐಸಿಯು ಹೆಚ್ಚುವರಿ ಷೇರುಗಳನ್ನು ಖರೀದಿಸಿ ಇನ್ಫೋಸಿಸ್‌ನಲ್ಲಿ ವಹಿವಾಟು ನಡೆಸಿದ್ದು, ಸಿಇಒ ಅವರ ವೇತನದ ಜೊತೆಗೆ ಬೋನಸ್‌ ಅನ್ನೂ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next