Advertisement

ಸೌಕರ್ಯಗಳಿಲ್ಲದೆ ವಾಗಣಗೇರಾ ಒಣ ಒಣ

12:11 PM Jul 09, 2019 | Suhan S |

ಸುರಪುರ: ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀಟರ್‌ ಅಂತರದಲ್ಲಿರುವ ವಾಗಣಗೇರಾ ಗ್ರಾಮದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಉಂಟಗಿದೆ.

Advertisement

ಗಬ್ಬೆದ್ದು ನಾರುತಿರುವ ಚರಂಡಿಗಳು, ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುವ ಕೊಳಚೆ ನೀರು. ಮನೆಗಳ ಪಕ್ಕದಲ್ಲಿಯೇ ತಿಪ್ಪೆ ಗುಂಡಿ, ಕುಡಿಯುವ ನೀರಿಗೂ ಜನರ ಪರದಾಟ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ.

ಗ್ರಾಮದಲ್ಲಿ ಸುಮಾರು 400 ಕುಟುಂಬಗಳಿವೆ. 6000 ಸಾವಿರಕ್ಕೂ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ. 8 ಜನ ಗ್ರಾಪಂ ಸದಸ್ಯರಿದ್ದು, ಓರ್ವ ತಾಪಂ ಸದಸ್ಯನಿದ್ದು, ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಕಚೇರಿ ಮತ್ತು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.

2014-15ರಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ಟ್ಯಾಂಕ್‌ ಸಂಪೂರ್ಣ ಸೋರುತ್ತಿದೆ. ಹೀಗಾಗಿ ಇದುವರೆಗೂ ಟ್ಯಾಂಕ್‌ಗೆ ನೀರು ಹರಿಸಿಲ್ಲ. ಗುತ್ತಿಗೆದಾರರು ಪೈಪ್‌ಲೈನ್‌ ಕಾಮಗಾರಿ ಅಪೂರ್ಣಗೊಳಿಸಿ ಬಿಲ್ ಎತ್ತಿ ಹಾಕಿದ್ದಾರೆ. ಸರಕಾರದ ಅನುದಾನ ಅನಗತ್ಯ ಪೋಲು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಜನ ಸೇರಿ ತಾಲೂಕು ಪಂಚಾಯಿತಿ ಕಚೇರಿಗೆ ಎರಡು ಬಾರಿ ಮುತ್ತಿಗೆ ಹಾಕಿ ಖಾಲಿ ಕೊಡಗಳ ಪ್ರದರ್ಶನ ಮಾಡಿದ್ದೇವೆ. ಸಮಸ್ಯೆ ಬಗೆಹರಿಸುವಂತೆ ಶಾಸಕರು ಗ್ರಾಮೀಣ ನೀರು ಸರಬರಾಜು ಇಲಾಖೆಯವರಿಗೆ ತಾಕೀತು ಮಾಡಿದ್ದಾರೆ. ಆದರೆ ಇಲಾಖೆ ಎಇಇ ಹಣಮಂತಪ್ಪ ಅಂಬ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ. ಶಾಸಕರ ಮಾತಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ನೀರಿನ ಸಮಸ್ಯೆ ತಪ್ಪುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.

Advertisement

ನೀರಿಗಾಗಿ ಜಮೀನುಗಳತ್ತ ಲಗ್ಗೆ:

ಕುಡಿಯುವ ನೀರು ತರಲು ಗ್ರಾಮದ ಜನರು ಕೊಳವೆ ಬಾವಿ ಇರುವ ಹೊಲ-ಗದ್ದೆಗಳತ್ತ ಲಗ್ಗೆ ಇಟ್ಟಿದ್ದಾರೆ. ಸಂಜೆ ಆಗುತ್ತಿದ್ದಂತೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಕೊಳವೆ ಬಾವಿ ಇರುವ ಜಮೀನುಗಳಿಗೆ ಹೋಗಿ ನೀರು ತರುವ ದೃಶ್ಯ ಸಾಮಾನ್ಯವಾಗಿದೆ. ಆದರೂ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಘಟಕಕ್ಕಿಲ್ಲ ಉದ್ಘಾಟನೆ ಭಾಗ್ಯ:

ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಘಟಕ ಇದುವರೆಗೂ ಉದ್ಘಾಟನೆ ಭಾಗ್ಯವೇ ಕಂಡಿಲ್ಲ. ನೀರು ಸಂಗ್ರಹಿಸಲಿಡುವ ಸಿಂಟೆಕ್ಸ್‌ ಟ್ಯಾಂಕ್‌ ಮುರಿದು ಬಿದ್ದು, ಪಕ್ಕದ ಕಂದಕ ಸೇರಿದೆ. ಶುದ್ಧ ಕುಡಿಯುವ ನೀರಿನ ಘಟಕ ಗ್ರಾಪಂನ ಪಕ್ಕದಲ್ಲಿಯೇ ಇದ್ದರೂ ಕೂಡ ಗ್ರಾಪಂ ಸದಸ್ಯ, ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
•ಸಿದ್ದಯ್ಯ ಪಾಟೀಲ
Advertisement

Udayavani is now on Telegram. Click here to join our channel and stay updated with the latest news.

Next