ವಾಡಿ: ಪಟ್ಟಣದಲ್ಲಿ ವಿವಿಧ ವ್ಯಾಪಾರಿಗಳು ಕೋವಿಡ್ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದು, ಸೋಂಕು ಮನೆಯ ಬಾಗಿಲಿಗೆ ಬಂದಂತೆ ಭಾಸವಾಗುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿರುವುದರಿಂದ ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ.
ಪಟ್ಟಣದಲ್ಲಿ ಮಾಸ್ಕ್ ಧರಿಸುವ ಜಾಗೃತಿ ಜನರಿಂದಲೇ ಶುರುವಾಗಿದ್ದು, ನಿರ್ಲಕ್ಷಿಸಿಸುವವರು ದಂಡ ಪಾವತಿಸಿ ಮುಜುಗರ ಅನುಭವಿಸುತ್ತಿದ್ದಾರೆ. ಪುರಸಭೆಯ ಹಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕ ಶರಣಪ್ಪ ಮಡಿವಾಳ ಅವರು ಮಾರುಕಟ್ಟೆಯಲ್ಲಿ ಸಂಚರಿಸುವ ಮೂಲಕ ಮಾಸ್ಕ್ ಧರಿಸದ ವ್ಯಾಪಾರಿ ಮತ್ತು ಗ್ರಾಹಕರಿಗೆ ದಂಡ ಹಾಕುತ್ತಿದ್ದಾರೆ. ಇದರಿಂದ ಎಚ್ಚೆತ್ತಿರುವ ಹೋಟೆಲ್, ಕಿರಾಣಿ, ತರಕಾರಿ ಸೇರಿದಂತೆ ಇತರ ಎಲ್ಲಾ ವ್ಯಾಪಾರಿಗಳು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸುತ್ತಿರುವುದು ಕಂಡು ಬರುತ್ತಿದ್ದು, ಉತ್ತಮ ಪರಿವರ್ತನೆ ಎನ್ನಬಹುದು.
ಈಗಾಗಲೇ ತರಕಾರಿ, ಕಿರಾಣಿ, ಹೋಟೆಲ್ ಮತ್ತು ಪಾದರಕ್ಷೆ ವ್ಯಾಪಾರಿಗಳಿಗೆ ಸೋಂಕು ದೃಢಪಟ್ಟಿದ್ದರಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ವ್ಯಾಪಾರಸ್ಥರು, ಮಾಸ್ಕ್ ಧರಿಸದೆ ಅಂಗಡಿಗೆ ಬಂದವರಿಗೆ ಯಾವುದೇ ವಸ್ತು ಖರೀದಿಗೆ ಅವಕಾಶ ನೀಡುತ್ತಿಲ್ಲ. ಬೀದಿ ಬದಿಯಲ್ಲಿರುವ ಕೈ ಬಂಡಿ ಟೀ ಅಂಗಡಿಗಳಲ್ಲೂ ಮಾಸ್ಕ್ ಇದ್ದರೆ ಮಾತ್ರ ಟೀ ನೀಡಲಾಗುತ್ತಿದೆ. ಪಾದಚಾರಿಗಳು ಹಾಗೂ ಬೈಕ್ ಸವಾರರು ನಮಗ್ಯಾರು ಕೇಳುತ್ತಾರೆ ಎಂಬ ಮೊಂಡು ಧೈರ್ಯದಿಂದ ಮಾರುಕಟ್ಟೆಗೆ ಬಂದರೆ ದಂಡ ತೆತ್ತುವುದು ಗ್ಯಾರಂಟಿ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸುರಕ್ಷತೆ ಕಾಪಾಡದಿದ್ದರೆ ಎದುರಾಗುವ ಕೆಟ್ಟ ದಿನಗಳಿಗೆ ನಾವೇ ಹೊಣೆಗಾರರಾಗುತ್ತೇವೆ. ಈ ದಿಸೆಯಲ್ಲಿ ಜನರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬಹುತೇಕ ಜನರು ಸಹಕರಿಸುತ್ತಿದ್ದಾರೆ. ಕೆಲವರು ಅಸಡ್ಡೆಯಾಗಿ ಸ್ವೀಕರಿಸಿದ್ದಾರೆ. ಅಂತಹವರಿಗೆ ತಲಾ 100 ರೂ. ದಂಡ ಹಾಕುತ್ತಿದ್ದೇವೆ. ಬುಧವಾರ ಮಾರುಕಟ್ಟೆಯಲ್ಲಿ 23 ಮಂದಿಗೆ ದಂಡ ಹಾಕಲಾಗಿದ್ದು, 2300 ರೂ. ವಸೂಲಿಯಾಗಿದೆ.
ಶರಣಪ್ಪ ಮಡಿವಾಳ,
ಹಿರಿಯ ಆರೋಗ್ಯ ನಿರೀಕ್ಷಕರು