ವಾಡಿ: ಹೆತ್ತ ಮೂವರು ಮಕ್ಕಳಲ್ಲಿ ಪುತ್ರಿಗೆ ವಿವಾಹವಾಗಿದೆ. ಒಬ್ಬ ಪುತ್ರ ಬೆಂಗಳೂರು ಸೇರಿಕೊಂಡು ದಶಕಗಳಾಗಿವೆ. ಜತೆಗಿರುವ ಮಗ ರಾಮಚಂದ್ರ ರೈಲಿಗೆ ಸಿಕ್ಕು ಕಾಲು ಕಳೆದುಕೊಂಡಿದ್ದಾನೆ. ಹೊಟ್ಟೆಗೆ ಅನ್ನ ಒದಗಿಸುತ್ತಿದ್ದ ಭಿಕ್ಷೆ ನಿಂತು ಹೋಗಿದೆ. ಲಾಕ್‌ಡೌನ್ ಘೋಷಣೆಯಿಂದ ಮನೆಯಲ್ಲಿಯೇ ಉಳಿದಿರುವ ಅಂಗವಿಕಲ ಮಗ, ಸೊಸೆ, ಮೂವರು ಮೊಮ್ಮಕ್ಕಳ ಹಸಿವು ನೀಗಿಸಲಾಗದೆ 65 ವರ್ಷದ ಈ ತಾಯಿ ಕಣ್ಣೀರು ಹಾಕುತ್ತಿದ್ದಾಳೆ.
ಲಾಕ್‌ಡೌನ್ ಉಲ್ಲಂಘಿಸಿ ರಥೋತ್ಸವ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ರಾವೂರ ಗ್ರಾಮದ ಪುಟ್ಟ ತಗಡಿನ ಮನೆಯೊಂದರಲ್ಲಿ ಆಶ್ರಯ ಪಡೆದಿರುವ ಸಿದ್ದಮ್ಮಳ ಕುಟುಂಬದ ಬದುಕಿನ ಕರುಣಾಜನಕ ಕಥೆಯಿದು. ಸಿದ್ದಮ್ಮ ಮತ್ತು ಮಗ ರಾಮಚಂದ್ರ ಇಬ್ಬರೂ ವಾಡಿ ನಗರದಿಂದ ಸೊಲ್ಲಾಪುರವರೆಗೆ ಪ್ರಯಾಣಿಸಿ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದರು. ಬೇಡಿ ತಂದ ಬಿಡಿಗಾಸಿನಿಂದ ಹೊಲೆ ಹೊತ್ತಿಸಬೇಕಿತ್ತು. ಕಳೆದ ಒಂದು ತಿಂಗಳಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅಕ್ಷರಶಃ ಇವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಊರಿನಲ್ಲಿ ಹೊಲ, ಮನೆಯಿಲ್ಲ. ರಸ್ತೆ ಬದಿಯಲ್ಲಿ ತಗಡು ಹಾಕಿಕೊಂಡು ಮಗ, ಸೊಸೆ, ಮೊಮ್ಮಕ್ಕಳನ್ನು ಸಾಕುತ್ತಿದ್ದೇನೆ. ಕಾಲು ಇಲ್ಲದ ಮಗನ ಹಿಂದೆ ಹೋಗಿ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದೇವು. ಇದರಿಂದ ಮನೆ ನಡೆಯುತ್ತಿತ್ತು. ಈಗ ರೈಲು ಗಾಡಿಗಳು ಬಂದ್ ಆಗಿವೆ. ಭಿಕ್ಷೆ ಬಿಟ್ಟು ಮನೆಯಲ್ಲಿದ್ದೇವೆ. ನಾವಿರುವ ಊರಿನಲ್ಲಿ ಭಿಕ್ಷೆ ಬೇಡುವುದಿಲ್ಲ. ಅಕ್ಕಪಕ್ಕದವರು ಯಾರಾದರೂ ಊಟ ಕೊಟ್ಟರೆ ಉಣಬೇಕು. ದಿನ ಬೆಳಗಾದರೆ ಮೊಮ್ಮಕ್ಕಳು ಊಟಕ್ಕೆ ಕೈ ಚಾಚುತ್ತವೆ. ಪಡಿತರ ಚೀಟಿಯಿಂದ ಅಕ್ಕಿ ಕೊಟ್ಟಿದ್ದಾರೆ. ಉಪ್ಪು, ಖಾರ, ಎಣ್ಣಿ, ತರಕಾರಿ, ಬೇಳೆಗಾಗಿ ಮತ್ತೂಬ್ಬರಿಗೆ ಕೈಯೊಡ್ಡಲೇಬೇಕು. ಮಗನಿಗೆ ಅಂಗವಿಕಲ ಮಾಸಾಶನವಾಗಲಿ ಅಥವ ನನಗೆ ವೃದ್ಧಾಪ್ಯ ವೇತನವಾಗಲಿ ಮಂಜೂರಾಗಿಲ್ಲ. ತುತ್ತು ಅನ್ನಕ್ಕಾಗಿ ಹಪಹಪಿಸಬೇಕಾಗಿದೆ. ರೈಲು ಗಾಡಿ ಶುರುವಾದ್ರೆ ಭಿಕ್ಷೆಗೆ ಹೋಗ್ತೀವ್ರೀ ಎಂದು ಉದಯವಾಣಿಗೆ ಪ್ರತಿಕ್ರಿಯಿಸುತ್ತಿದ್ದ ಆ ತಾಯಿ ಮಗನ ಆಸೆಗಣ್ಣಿನಲ್ಲಿ ಹಸಿವಿನ ಆಕ್ರಂದನ ಎದ್ದು ಕಾಣುತ್ತಿತ್ತು. ಕೋವಿಡ್ ಹೊಡೆತಕ್ಕೆ ಇಂತಹ ಅದೆಷ್ಟೋ ಜೀವಗಳು ಜರ್ಜರಿತವಾಗಿವೆಯೋ ಗೊತ್ತಿಲ್ಲ.