Advertisement

ವಾಡಿ: ನೀರು-ನೈರ್ಮಲ್ಯ ಶುಚಿತ್ವಕ್ಕೆ ಬಿಜೆಪಿ ಸದಸ್ಯರ ಪಟ್ಟು

10:44 AM Aug 07, 2018 | Team Udayavani |

ವಾಡಿ: ನೈರ್ಮಲ್ಯ, ಶುಚಿತ್ವ ಹಾಗೂ ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಸಾರ್ವಜನಿಕರ ಲಕ್ಷಾಂತರ ರೂ. ತೆರಿಗೆ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಪುರಸಭೆ ಆಡಳಿತ ಜನರಿಗೆ ಕಲುಷಿತ ನೀರು ಪೂರೈಸುತ್ತಿದೆ ಎಂದು ಪುರಸಭೆಯ ಪ್ರತಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿದರು.

Advertisement

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ 2017-18ನೇ ಸಾಲಿನ (ನವೆಂಬರ್‌-ಮೇ) ಆದಾಯ-ಖರ್ಚು ಕುರಿತು ನಡೆದ ಚರ್ಚೆಯಲ್ಲಿ ಅಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆಗೈದ ಬಿಜೆಪಿ ಸದಸ್ಯರು, ಪಟ್ಟಣದ ಹಲವು ಬಡಾವಣೆಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಕುಡಿಯಲು ರಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಬ್ಲೀಚಿಂಗ್‌ ಪೌಡರ್‌, ಮುರಂ (ಗರ್ಚು ಮಣ್ಣು) ಹಾಗೂ ಪೈಪ್‌ಲೈನ್‌ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂ. ಬೋಗಸ್‌ ಬಿಲ್‌ ಸೃಷ್ಟಿಸಲಾಗಿದೆ. ಇವುಗಳ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಪ್ರಕಾಶ ನಾಯಕ ಸೇರಿದಂತೆ ಭೀಮಶಾ ಜಿರೊಳ್ಳಿ, ರಾಜೇಶ
ಅಗರವಾಲ, ಮಹ್ಮದ್‌ ಗೌಸ್‌ ಆಗ್ರಹಿಸಿದರು. 

ವಸತಿ ಯೋಜನೆಯಡಿ ಸೂರು ಕಲ್ಪಿಸಲು ಈಗಾಗಲೇ ಒಂಭತ್ತು ಸ್ಲಂ ಬಡಾವಣೆಗಳ ಸರ್ವೇ ನಡೆಯುತ್ತಿದೆ. ಆದರೆ ಇತರ ಬಡಾವಣೆಗಳಲ್ಲೂ ಕಡುಬಡ ಕುಟುಂಬಗಳು ವಾಸ ಮಾಡುತ್ತಿವೆ. ಅವರನ್ನು ಸ್ಲಂ ಪಟ್ಟಿಯಲ್ಲಿ ಸೇರಿಸಬೇಕು ಎಂದು
ಕಾಂಗ್ರೆಸ್‌ ಸದಸ್ಯರಾದ ಶರಣು ನಾಟೀಕಾರ, ಸುಗಂಧಾ ಎನ್‌. ಜೈಗಂಗಾ ಅಧ್ಯಕ್ಷರ ಗಮನ ಸೆಳೆದರು. ಸ್ಥಾಯಿ ಸಮಿತಿ ರಚನೆ ಮತ್ತು ಮಹಾತ್ಮಾ ಗಾಂಧಿ ವೃತ್ತದಲ್ಲಿ ಗಾಂಧಿಧೀಜಿ ಪ್ರತಿಮೆ ನಿರ್ಮಿಸಬೇಕು ಎಂದು ಸದಸ್ಯ ದೇವಿಂದ್ರ ಕರದಳ್ಳಿ
ಆಗ್ರಹಿಸಿದ್ದಕ್ಕೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರು ಒಪ್ಪಿಗೆ ಸೂಚಿಸಿದರು.

ತೈಬಜಾರ್‌ ಹರಾಜು ಪ್ರಕ್ರಿಯೆ ಆರಂಭಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದರೆ, ಕಾಂಗ್ರೆಸ್‌ನ ಸದಸ್ಯರು ಪರ-ವಿರೋಧ ನಿಲುವು ಪ್ರದರ್ಶಿಸಿ ಮುಜುಗರಕ್ಕೀಡಾದರು. 16 ಎಕರೆ ಜಾಗದಲ್ಲಿ ವಸತಿ ಸೌಲಭ್ಯ ಒದಗಿಸಲು ಈ ಹಿಂದೆ
ಸ್ವೀಕರಿಸಲಾದ ಅರ್ಜಿಗಳನ್ನು ಸಂಪೂರ್ಣ ರದ್ದುಪಡಿಸಿ, ಹೊಸದಾಗಿ ಅರ್ಜಿ ಸ್ವೀಕರಿಸಬೇಕು ಎಂದು ಸದಸ್ಯ ದೇವಿಂದ್ರ ಕರದಳ್ಳಿ ಸಲಹೆ ನೀಡಿದರು. ಕೋಟಿ ರೂ. ಖರ್ಚಿನಲ್ಲಿ ನಿರ್ಮಾಣವಾದ ಮುಖ್ಯ ಚರಂಡಿ ಕಾಮಗಾರಿ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. 

ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಭೀಮಶಾ ಜಿರೊಳ್ಳಿ ಒತ್ತಾಯಿಸಿದರು. 2018-19ನೇ ಸಾಲಿನ 14ನೇ ಹಣಕಾಸು ನಿ 253.83 ಲಕ್ಷ ಹಾಗೂ ಎಸ್‌ಎಫ್‌ಸಿ ಮುಕ್ತ ನಿಧಿ229.83 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ
ಸಿದ್ಧಪಡಿಸಲಾಯಿತು. ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ಘನತ್ಯಾಜ್ಯ ನಿರ್ವಹಣೆ, ಮಳೆನೀರು ಚರಂಡಿ, ರಸ್ತೆ, ಪುಟ್‌ ಪಾತ್‌, ವಿದ್ಯುತ್‌ ದೀಪ, ಸ್ಮಶಾನಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಅನುಮೋದನೆ ಪಡೆಯಲಾಯಿತು. ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಲೆಕ್ಕಾಧಿಕಾರಿ ಕೆ.ವಿರೂಪಾಕ್ಷಿ ಆದಾಯ-ಖರ್ಚು ಲೆಕ್ಕ ಓದಿದರು. 

Advertisement

ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಮುಖ್ಯಾಕಾರಿ ಮಲ್ಲೇಶ ಅಕ್ಕರಕಿ, ಕಿರಿಯ ಅಭಿಯಂತರಾದ ಅಶೋಕ ಪುಟ್‌ಪಾಕ್‌, ಶರಪ್ಪ ಹೊಸೂರ, ಸ್ಲಂ ಬೋರ್ಡ್‌ ಕಿರಿಯ ಅಭಿಯಂತರ ಸುಧಾಕರ ಕೊಳ್ಳೂರ, ಡಾ| ಸಾಹೇರಾ ಮಝರ್‌, ಎಸಿಸಿಯ ಮುದ್ದಣ್ಣ ಸಭೆಯಲ್ಲಿದ್ದರು. ವಿವಿಧ ಬಡಾವಣೆಗಳ ಸದಸ್ಯರು ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

Advertisement

Udayavani is now on Telegram. Click here to join our channel and stay updated with the latest news.

Next