ವಾಡಿ: ಪಟ್ಟಣದಲ್ಲಿ ಹಂದಿಗಳ ಕಿರಿಕಿರಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಕಾನೂನು ಬಾಹೀರವಾಗಿ ನಗರದಲ್ಲಿ ಹಂದಿ ಸಾಕಾಣಿಕೆಗೆ ಪರವಾನಗಿ ನೀಡಿರುವ ಪುರಸಭೆ ಅಧಿ ಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.
ಪಟ್ಟಣದ ಪುರಸಭೆ ಕಚೇರಿ ಎದುರು ಗುರುವಾರ ಸಾಂಕೇತಿಕ ಧರಣಿ ನಡೆಸುವ ಮೂಲಕ ಪುರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿವಿಧ ಬಡಾವಣೆಗಳಲ್ಲಿ ದಿನೆ-ದಿನೇ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ. ಹಂದಿಗಳ ಓಡಾಟದಿಂದ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಪೌರ ಕಾರ್ಮಿಕರು ಚರಂಡಿ ಸ್ವಚ್ಛತೆ ಮಾಡಿ ಮುಂದೆ ಸಾಗಿದರೆ, ಹಿಂದೆ ಬರುವ ಹಂದಿಗಳ ಹಿಂಡು ಸಾರ್ವಜನಿಕರು ನಡೆದಾಡುವ ರಸ್ತೆಗಳಲ್ಲೇ ಕೊಳೆ ಹರಡುತ್ತಿವೆ. ಇದರಿಂದ ಇಡೀ ನಗರವೇ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.
ಎಲ್ಲೆಂದರಲ್ಲಿ ಹಂದಿಗಳು ರೋಗದಿಂದ ನರಳಿ ಸಾಯುತ್ತಿವೆ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುತ್ತಿದೆ. ಅಕ್ರಮವಾಗಿ ಹಂದಿ ಸಾಕಾಣಿಕೆಗೆ ಪರವಾನಗಿ ನೀಡಿರುವ ಪುರಸಭೆ ಅಧಿಕಾರಿಗಳು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಪೊಲೀಸರು ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಪಟ್ಟಣದಲ್ಲಿರುವ ಎಲ್ಲ ಹಂದಿಗಳನ್ನು ಸ್ಥಳಾಂತರಿಸಬೇಕು. ಜನರ ಆರೋಗ್ಯ ಕಾಪಾಡಲು ವೈದ್ಯಕೀಯ ಸೇವೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್‌ಡಿಪಿಐ ವಾಡಿ ಸಮಿತಿ ಅಧ್ಯಕ್ಷ ಮಹ್ಮದ್ ಆಸೀಫ್, ಕಾರ್ಯದರ್ಶಿ ಮಹ್ಮದ್ ಮೋಹಸೀನ್, ಉಪಾಧ್ಯಕ್ಷ ಲಾಕೇಶ, ಮುಖಂಡರಾದ ಮಹೆಬೂಬ ಶೇಖ, ಸದ್ಧಾಮ್, ಅಲ್ತಾಫ್, ಗೌಸ್ ಪಾಶಾ, ಖಯ್ಯುಮ್ ಶೇಖ, ವಸೀಮ್ ಅಕ್ರಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.