Advertisement

ಎಸಿಸಿ ಸಿಮೆಂಟ್‌ ಸಾಗಾಣಿಕೆಗೆ ಪುರಸಭೆ ಸದಸ್ಯರ ವಿರೋಧ

04:29 PM Apr 26, 2020 | Naveen |

ವಾಡಿ: ಲಾಕ್‌ಡೌನ್‌ ಸಡಿಲಗೊಂಡ ಪರಿಣಾಮ ಸರಕಾರದ ಆದೇಶದಂತೆ ಶನಿವಾರ ಸಿಮೆಂಟ್‌ ಸಾಗಾಣಿಕೆಗೆ ಮುಂದಾದ ಎಸಿಸಿ ಸಿಮೆಂಟ್‌ ಕಂಪನಿಯ ನಿರ್ಧಾರದ ವಿರುದ್ಧ ಪುರಸಭೆ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Advertisement

ತಿಂಗಳ ಕಾಲ ಸ್ತಬ್ಧವಾಗಿದ್ದ ಎಸಿಸಿ ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಸಿಮೆಂಟ್‌ ಲೋಡಿಂಗ್‌ ಕಾರ್ಯಕ್ಕೆ ಕಾರ್ಮಿಕರು ಮುಂದಾಗಿರುವುದನ್ನು ತಿಳಿದ ಪುರಸಭೆ ಸದಸ್ಯ ದೇವೇಂದ್ರ ಕರದಳ್ಳಿ ಹಾಗೂ ಪೃಥ್ವಿರಾಜ ಸೂರ್ಯವಂಶಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಎಸಿಸಿ ಕಂಪನಿಗೆ ಭೇಟಿ ನೀಡಿದರು. ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟು ನಾಲ್ಕು ಬಡಾವಣೆಗಳು ಸೀಲ್‌ಡೌನ್‌ ತೆಕ್ಕೆಗೆ ಜಾರಿವೆ. ಸೀಲ್‌ಡೌನ್‌ ಬಡಾವಣೆಗಳಿಂದ ಕೇವಲ 100 ಮೀ. ಅಂತರದಲ್ಲಿರುವ ಎಸಿಸಿ ಕಂಪನಿ, ಸಿಮೆಂಟ್‌ ಸಾಗಾಣಿಕೆ ಮುಂದಾಗಿರುವುದು ಸರಿಯಲ್ಲ. ಕಂಪನಿ ವಿರುದ್ಧ ಜಿಲ್ಲಾ ಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಎಸಿಸಿ ಕಂಪನಿಗೆ ಬರುವ ಕಾರ್ಮಿಕರು ಸೀಲ್‌ಡೌನ್‌ ಏರಿಯಾಗಳ ಮುಖ್ಯ ರಸ್ತೆ ಬಳಕೆ ಅನಿವಾರ್ಯ. ಸೀಲ್‌ಡೌನ್‌ ಬಡಾವಣೆಗಳಲ್ಲೂ ಎಸಿಸಿಯ ಕಾರ್ಮಿಕರು ವಾಸವಿದ್ದಾರೆ. ಕೊರೊನಾ ಸೋಂಕು ಪತ್ತೆಯಾದ ಬಡಾವಣೆಯಲ್ಲಿ ಹೆಚ್ಚು ಟ್ರಾನ್ಸ್‌ಪೊàರ್ಟ್‌ ಕಚೇರಿಗಳಿವೆ. ಸಿಮೆಂಟ್‌ ಸಾಗಾಣಿಕೆಗೆ ಚಾಲನೆ ದೊರೆತರೆ ಸೀಲ್‌ಡೌನ್‌ ಬಡಾವಣೆಗಳು ಕಾನೂನು ಚೌಕಟ್ಟು ಮೀರುವ ಸಾಧ್ಯತೆಯಿದೆ. ಸರಕಾರ ಲಾಕ್‌ಡೌನ್‌ ಆದೇಶ ಹಿಂಪಡೆಯುವವರೆಗೂ ಸಿಮೆಂಟ್‌ ಉತ್ಪಾದನೆ ಮತ್ತು ಕ್ಲಿಂಕರ್‌ ಸರಕು ಸಾಗಾಣಿಕೆ ಕೈಬಿಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯರಾದ ತಿಮ್ಮಯ್ಯ ಪವಾರ, ಮಹ್ಮದ್‌ ಗೌಸ್‌, ಮರಗಪ್ಪ ಕಲಕುಟಗಿ, ಮುಖಂಡರಾದ ನಾಗೇಂದ್ರ ಜೈಗಂಗಾ, ಶ್ರವಣಕುಮಾರ ಮೌಸಲಗಿ, ವಿಜಯಕುಮಾರ ಸಿಂಗೆ, ತುಕಾರಾಮ ರಾಠೊಡ, ರಾಜಾ ಪಟೇಲ ಪಾಲ್ಗೊಂಡಿದ್ದರು. ಭೀಮರಾವ ದೊರೆ ಹಾಗೂ ವಾಲ್ಮೀಕ ರಾಠೊಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next