Advertisement

ವಾಡಿ ಪುರಸಭೆ ಮುಖ್ಯಾಧಿಕಾರಿ ಕೋಣೆಗೆ ಸದಾ ಕೀಲಿ

07:35 AM Jan 29, 2019 | Team Udayavani |

ವಾಡಿ: ಪಟ್ಟಣದ ಅಭಿವೃದ್ಧಿ ಜತೆಗೆ ಸಾರ್ವಜನಿಕರ ಕುಂದು ಕೊರತೆ ನೀಗಿಸುವ ಮೂಲಕ ಸರಕಾರದ ಯೋಜನೆ ಸಾಕಾರಗೊಳಿಸಬೇಕಾದ ಆಡಳಿತ ಕಚೇರಿಯೊಂದು ಹರಟೆ ಕಟ್ಟೆಯಾಗಿ ಪರಿವರ್ತನೆಯಾಗಿದ್ದು, ಜನಾಕ್ರೋಶಕ್ಕೆ ತುತ್ತಾಗಿದೆ.

Advertisement

ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುರಸಭೆ ಆಡಳಿತ ಕಚೇರಿಯೇ ಅಪಖ್ಯಾತಿಗೆ ಒಳಗಾಗಿದ್ದು, ತಮ್ಮ ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳನ್ನು ಹಾಗೂ ಚುನಾಯಿತ ವಾರ್ಡ್‌ ಜನಪ್ರತಿನಿಧಿಗಳನ್ನು ಜನರು ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಪುರಸಭೆ ಕಚೇರಿಗೆ ಬಂದರೆ ಬೀಗ ಜಡಿದ ಮುಖ್ಯಾಧಿಕಾರಿಗಳ ಕೋಣೆ ದರ್ಶನವಾಗುತ್ತದೆ. ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಕುಳಿತುಕೊಳ್ಳುವ ಕಚೇರಿ ಮೇಲ್ಮಹಡಿಗೆ ಹೋದರೆ ಅಲ್ಲೂ ಅದೇ ಪರಿಸ್ಥಿತಿ ಎದುರಾಗಿ ಸ್ಥಳೀಯರು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪುರಸಭೆ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಜತೆ ಕುಳಿತು ದಿನವಿಡೀ ಕಾಲಹರಣ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಇಲ್ಲಿ ಯಾರು ಅಧಿಕಾರಿಗಳು ಎಂಬುದು ತಿಳಿಯದೆ ಗೊಂದಲಕ್ಕೀಡಾಗುತ್ತಿದ್ದಾರೆ. ಕಚೇರಿ ಕೆಳಭಾಗ ಮತ್ತು ಮೇಲ್ಮಹಡಿ ಸಭಾಂಗಣ ಕೆಲವರ ಪಾಲಿಗೆ ಹರಟೆಕಟ್ಟೆಯಾಗಿ ಪರಿವರ್ತನೆಯಾಗಿವೆ. ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ನಾನು ಕಚೇರಿಯಲ್ಲಿ ಇಲ್ಲದ ವೇಳೆ ಅನಗತ್ಯವಾಗಿ ಕೆಲವರು ನನ್ನ ಕೋಣೆಯಲ್ಲಿ ಕುಳಿತು ಕಾಲಹರಣ ಮಾಡುತ್ತಿರುವುದು ಗೊತ್ತಾಗಿದೆ. ನಾನಿದ್ದಾಗಲೂ ಸುಮ್ಮನೆ ಕೂಡುವವರು ಹೆಚ್ಚಾಗಿದ್ದರು. ಫ್ಯಾನು, ಲೈಟ್, ಎಸಿ ಹಚ್ಚಿಕೊಂಡು ಮೊಬೈಲ್‌ ನೋಡುತ್ತ ಕಚೇರಿ ಎಂಬುದು ಧರ್ಮಶಾಲೆ ಮಾಡಿಕೊಂಡಿದ್ದರು. ಕೆಲಸ ಇದ್ದವರು ಕುಳಿತುಕೊಳ್ಳಲು ಅವಕಾಶವಿದೆ. ಕೆಲಸ ಮುಗಿದ ನಂತರ ಬೇರೆಯವರಿಗೆ ಸ್ಥಳಾವಕಾಶ ಮಾಡಿಕೊಡಬೇಕು ಎಂಬ ಪ್ರಜ್ಞೆ ಇರಬೇಕು. ನಾನು ಸಚಿವರ ಪ್ರಗತಿ ಕಾಲೋನಿ ನಿರ್ಮಾಣದ ಕೆಲಸಗಳಲ್ಲಿ ತೊಡಗಿದ್ದೇನೆ. ಅಲ್ಲದೆ ನನ್ನ ಕೋಣೆಯಲ್ಲಿ ಮುಖ್ಯವಾದ ಕಡತಗಳಿರುತ್ತವೆ. ಅವು ಕಾಣೆಯಾದರೆ ಯಾರು ಜವಾಬ್ದಾರಿ? ಇದಕ್ಕೆ ಕಡಿವಾಣ ಹಾಕಲು ನಾನಿಲ್ಲದ್ದಾಗ ಕೋಣೆಗೆ ಬೀಗ ಹಾಕಲು ಸಿಬ್ಬಂದಿಗೆ ತಿಳಿಸಿದ್ದೇನೆ. ಬೇರೆ ದುರುದ್ದೇಶವಿಲ್ಲ.
•ವಿಠ್ಠಲ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ ವಾಡಿ.

ಕಾಮಗಾರಿ ಪರಿಶೀಲನೆ ಮಾಡಬೇಕಾದ ಅಧ್ಯಕ್ಷೆ ಮೈನಾಬಾಯಿ ರಾಠೊಡ ನಿರ್ಲಕ್ಷ್ಯ ವಹಿಸಿದ್ದಾರೆ. ಪಟ್ಟಣದಲ್ಲಿ ಚರಂಡಿ, ರಸ್ತೆ, ಶೌಚಾಲಯ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿಗಳು ಕಳಪೆಯಾಗುತ್ತಿದ್ದರೂ ಕೇಳುವವರು ಇಲ್ಲ. ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಸದಸ್ಯರ ಸಭೆ ಕರೆದಿಲ್ಲ.
•ಭೀಮಶಾ ಜಿರೊಳ್ಳಿ, ಪುರಸಭೆ ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next