ವಾಡಿ: ಗುಳೆ ಹೋದವರ ಗುಡ್ಡದ ದೇವರು ಎಂದೇ ಖ್ಯಾತಿಯಾದ ಲಾಡ್ಲಾಪುರ ಹಾಜಿಸರ್ವರ್ (ಹಾದಿಶರಣ) ಜಾತ್ರೆ ಏ.10ರಂದು ಲಕ್ಷಾಂತರ ಭಕ್ತರ ನಡುವೆ ಸಂಭ್ರಮದಿಂದ ನಡೆಯಬೇಕಿತ್ತು. ಆದರೆ ಕೋವಿಡ್ ವೈರಸ್ ತಡೆಗೆ ಸಜ್ಜಾಗಿರುವ ಖಾಕಿಪಡೆ ಶುಕ್ರವಾರ ಗುಡ್ಡಕ್ಕೆ ಸರ್ಪಗಾವಲು ಹಾಕಿತ್ತು. ಹೊಟ್ಟೆಪಾಡಿಗಾಗಿ ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಇನ್ನಿತರ ರಾಜ್ಯಗಳ ಮಹಾನಗರಗಳಿಗೆ ಗುಳೆ ಹೋದ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳು ಮತ್ತು ನೂರಾರು ತಾಂಡಾಗಳ ಜನರು ಏಪ್ರಿಲ್ ತಿಂಗಳಲ್ಲಿ ನಡೆಯುವ ಲಾಡ್ಲಾಪುರ ಹಾಜಿಸರ್ವರ್ ಜಾತ್ರೆಗೆ ಬರುವುದು ಸಾಮಾನ್ಯ.
ಏ. 9ರಿಂದ ಐದು ದಿನಗಳ ವರೆಗೆ ನಡೆಯುವ ಜಾತ್ರೆಯಲ್ಲಿ ಗುಡ್ಡದ ಸುತ್ತಲೂ ಬಿಡಾರ ಹಾಕುವುದು ಮತ್ತು ಪ್ರತಿ ಮನೆಯಿಂದ ಕನಿಷ್ಠ 2ರಿಂದ ನಾಲ್ಕು ಕುರಿಗಳನ್ನು ಬಲಿ ನೀಡುವುದು ಸಂಪ್ರದಾಯ. ಪ್ರತಿ ವರ್ಷ ಸುಮಾರು 6000 ಕುರಿಗಳ ಬಲಿ ನೀಡಲಾಗುತ್ತದೆ. ಈ ಬಾರಿ ಜಾತ್ರೆಗೆ ಕೊರೊನಾ ಕಂಟಕ ಎದುರಾಗಿದ್ದು, ಗುಳೆ ಹೋದ ಸಾವಿರಾರು ಕುಟುಂಬಗಳು ಊರಿಗೆ ಮರಳಿದ್ದವಾದರೂ ಜಾತ್ರೆ ರದ್ದಾದ ಕಾರಣ ಪ್ರಾಣಿ ಬಲಿಯೂ ನಿಂತಿದೆ.
ಭಕ್ತರು ಗುಡ್ಡವನ್ನು ಹತ್ತದಂತೆ ತಡೆಯಲು ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ಮಾರ್ಗದರ್ಶನದಡಿ ಒಂದು ಕೆಎಸ್ ಆರ್‌ಪಿ ತುಕಡಿ, 15 ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಪಿಎಸ್‌ಐ ತಂಡದೊಂದಿಗೆ ಜಾತ್ರೆಗೆ ಭದ್ರತೆ ಒದಗಿಸಿದ್ದೇವೆ ಎಂದು ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ.
ಲಾಕ್‌ಡೌನ್ ಘೋಷಣೆಗೆ ಮನ್ನಣೆ ನೀಡಿ ಜಾತ್ರೆ ರದ್ದುಪಡಿಸಿದ್ದೇವೆ. ಭಕ್ತರು ಮನೆಯಿಂದ ಹೊರಗೆ ಬಂದಿಲ್ಲ. ಮನೆಯಲ್ಲಿಯೇ ಸಿಹಿ ಖಾದ್ಯ ಮಾದ್ಲಿ ಸಿದ್ಧಪಡಿಸಿ ದೇವರನ್ನು ಸ್ಮರಿಸಿದ್ದಾರೆ. ನಾಲ್ವರು ಪೂಜಾರಿಗಳು ಮಾತ್ರ ಗುಡ್ಡ ಹತ್ತಿ ಕಳಸಾರೋಹಣ ನೆರವೇರಿಸಿದ್ದಾರೆ. ದೀಪ ಹಚ್ಚಿ ಸರಳವಾಗಿ ಪೂಜೆ ಸಲ್ಲಿಸಿದ್ದಾರೆ. ಈ ವರ್ಷ ಭಕ್ತರ್ಯಾರೂ ಪ್ರಾಣಿ ಬಲಿ ನೀಡಿಲ್ಲ. ಸರ್ಕಾರದ ಆದೇಶಕ್ಕೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ. ಜಾತ್ರೆ ನಡೆದಿದ್ದರೆ ಬಿಡಾರುಗಳ ಅಂಗಡಿಗಳ ಟೆಂಡರ್‌ಗಳಿಂದ 10 ಲಕ್ಷ ರೂ. ದೇವಸ್ಥಾನಕ್ಕೆ ಕಾಣಿಕೆ ಬರುತ್ತಿತ್ತು.
ಸಾಬಣ್ಣ ಆನೇಮಿ,
ಜಾತ್ರಾ ಸಮಿತಿ ಅಧ್ಯಕ್ಷ